ಮೋದಿಯವರ ಕೈ ಬಲಪಡಿಸಲು ಒಗ್ಗಟ್ಟಿನಿಂದ ಶ್ರಮಿಸಿ

| Published : Apr 13 2024, 01:01 AM IST / Updated: Apr 13 2024, 01:02 AM IST

ಸಾರಾಂಶ

ಕಾಗವಾಡ: ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆಯವರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲು ಪ್ರತಿಯೊಬ್ಬ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆಯವರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲು ಪ್ರತಿಯೊಬ್ಬ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಕರೆ ನೀಡಿದರು.

ತಾಲೂಕಿನ ಐನಾಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಭದ್ರತೆಗಾಗಿ ಚುನಾವಣೆ ನಡೆಯುತ್ತಿದೆ. ಇಡೀ ವಿಶ್ವವೇ ಭಾರತ ದೇಶದತ್ತ ತಿರುಗಿ ನೋಡುವಂತೆ ಮಾಡಿರುವ ಮೋದಿ ಅವರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಹಾಗೂ ಅವರು ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಬೇಕು ಎಂದು ಮನವಿ ಮಾಡಿದರು.

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಅವಶ್ಯಕತೆಯಿದೆ. ನರೇಂದ್ರ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಕೋರಿದರು.

ಇದೊಂದು ಮಹತ್ವದ ಚುನಾವಣೆ. ದೇಶದಲ್ಲಿ ೪೦೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ. ಈ ಮೂಲಕ ಆರೋಗ್ಯಕರ ಭಾರತ ನಿರ್ಮಾಣವಾಗಲಿದೆ. ನರೇಂದ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದವರನ್ನು ಸಮಾಜದ ಮುನ್ನೆಲೆಗೆ ತರಬೇಕೆಂಬ ಉದ್ದೇಶ ಹೊಂದಿದ್ದಾರೆ. ತಮ್ಮ ಯೋಜನೆಗಳ ಮೂಲಕ ಪ್ರತಿಯೊಬ್ಬರಿಗೂ ಸೌಲಭ್ಯ ಕಲ್ಪಿಸಲಿದ್ದಾರೆ ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಆರ್ಟಿಕಲ್ 370 ಕಾಯ್ದೆ ತೆಗೆದರೇ ರಕ್ತ ಕ್ರಾಂತಿ ಆದೀತು ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದರು. ಆದರೆ, ನರೇಂದ್ರ ಮೋದಿಯವರು ಬೆಣ್ಣೆಯಲ್ಲಿರುವ ಕುದಲಂತೆ ತೆಗೆದು ಹಾಕಿದರು. ರಾಮ ಮಂದಿರವನ್ನು ನಿರ್ಮಿಸುವ ಮೂಲಕ ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲುತ್ತದೆ. ದೇಶದಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್ಸಿಗೆ ವಿರೋಧಿ ಪಕ್ಷದ ಸ್ಥಾನವು ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.

ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಾಜಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ಬಿಜೆಪಿ ಮುಖಂಡರಾದ ಶ್ರೀನಿವಾಸ ಪಾಟೀಲ, ದಾದಾ ಪಾಟೀಲ, ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ಅಪ್ಪಾಸಾಬ್‌ ಅವತಾಡೆ, ವೃಷಭಗೌಡ ಪಾಟೀಲ, ಮಲ್ಲಿಕಾರ್ಜುನ ಅಂದಾನಿ, ನಿಂಗಪ್ಪ ಖೋಕಲೆ, ದೀಪಕ ಪಾಟೀಲ, ರಾಮಗೌಡ ಪಾಟೀಲ, ಮಹಾವೀರ ಕಾತ್ರಾಳೆ, ರಮಾಕಾಂತ ಬಾಡಗೆ, ಆರ್.ಎಂ.ಪಾಟೀಲ, ಅರುಣ ಗಣೇಶವಾಡಿ, ಯೋಗೇಶ ಕುಂಬಾರ, ರತನ್‌ ಪಾಟೀಲ, ಗೋರಖನಾಥ ಕೊಳೇಕರ, ಅಪ್ಪಾಸಾಬ್‌ ಮಳಮಳಸಿ, ಅನೀಲಕುಮಾರ ಸಾವಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು. ಸಮಾರಂಭ ಮುಗಿಯುತ್ತಿದ್ದಂತೆ ಮಳೆ ಬಂದಿತು.ಬಾಕ್ಸ್‌..ಕೈ ಬಿಟ್ಟು ಕಮಲ ಹಿಡಿದ ಮೋಳೆ ಗ್ರಾಮಸ್ಥರುಶಾಸಕ ರಾಜು ಕಾಗೆಯವರ ಆಪ್ತರಾಗಿದ್ದ ಮೋಳೆ ಗ್ರಾಮದ ಕಾಂಗ್ರೆಸ್ ಮುಖಂಡ ಗಜಾನನ ಯರಂಡೋಲಿ, ಸಿದರಾಯ ಹುಂಡೇಕರ, ಸಿದ್ದು ಹವಳೆ ಸೇರಿದಂತೆ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿಕೊಂಡರು.

ಕೋಟ್‌..

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 2 ಟಿಎಂಸಿ ನೀರು ಬಿಡಲು ಒಪ್ಪಿದ್ದಾರೆ. ಆದರೆ, ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.-ಶ್ರೀಮಂತ ಪಾಟೀಲ, ಮಾಜಿ ಸಚಿವರು.ಮತ ಮೊದಲು, ಸೇವೆ ನಿರಂತರ ಎಂಬ ಧ್ಯೇಯದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ದೇಶವನ್ನು ಗಟ್ಟಿಗೊಳಿಸುವ ಶಕ್ತಿ ಯುವಕರಲ್ಲಿದೆ. ಯುವ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಕಳೆದ ಬಾರಿ 1,18,877 ಮತಗಳ ಅಂತರದಿಂದ ಗೆಲ್ಲಿಸಿದ್ದಿರಿ. ಈ ಬಾರಿ ಅದರ ದುಪ್ಪಟ್ಟು ಮತಗಳ ಅಂತರದಿಂದ ಗೆಲ್ಲಿಸಬೇಕು.-ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ.