ಮಾಗಡಿ: ಸಹಕಾರ ಕ್ಷೇತ್ರದಲ್ಲಿ ಯಾವುದೇ ಮೇಲು-ಕೀಳು, ಶ್ರೀಮಂತ-ಬಡವ ಎಂಬ ತಾರತಮ್ಯವಿಲ್ಲದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಮುಖಂಡ ಸೋಮಣ್ಣ ಹೇಳಿದರು
ಮಾಗಡಿ: ಸಹಕಾರ ಕ್ಷೇತ್ರದಲ್ಲಿ ಯಾವುದೇ ಮೇಲು-ಕೀಳು, ಶ್ರೀಮಂತ-ಬಡವ ಎಂಬ ತಾರತಮ್ಯವಿಲ್ಲದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಮುಖಂಡ ಸೋಮಣ್ಣ ಹೇಳಿದರು.
ತಾಲೂಕಿನ ಮಣ್ಣಿಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಹಕಾರ ಎಂದರೆ ಸರ್ವರೂ ಹರ್ಷದಿಂದ ಕೂಡಿ ಕಾರ್ಯನಿರ್ವಹಿಸುವುದು ಎಂದರ್ಥ. ಇಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಸಮಾನ ಹಕ್ಕು ಮತ್ತು ಮತದ ಮೌಲ್ಯವಿರುತ್ತದೆ. ಮಣ್ಣಿಗನಹಳ್ಳಿ ಸಂಘವು ಮತ್ತಷ್ಟು ಆರ್ಥಿಕ ಪ್ರಗತಿ ಸಾಧಿಸಲು ವಿಪುಲ ಅವಕಾಶಗಳಿವೆ. ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯು ಪರಸ್ಪರ ವಿಶ್ವಾಸದಿಂದ ಮತ್ತು ಚುರುಕಾಗಿ ಕೆಲಸ ಮಾಡಬೇಕಿದೆ ಎಂದು ಸೋಮಣ್ಣ ತಿಳಿಸಿದರು.ಪಕ್ಕದ ಕಲ್ಯಾ ಹಾಗೂ ತಿಪ್ಪಸಂದ್ರ ಸಹಕಾರ ಸಂಘಗಳಲ್ಲಿ ೧೨ ರಿಂದ ೧೩ ಕೋಟಿ ರೂ. ವರೆಗೆ ಸಾಲ ವಿತರಿಸಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ಅದೇ ಮಾದರಿಯಲ್ಲಿ ಮಣ್ಣಿಗನಹಳ್ಳಿ ಸಂಘದಲ್ಲೂ ವಹಿವಾಟನ್ನು ೪ ಕೋಟಿಯಿಂದ ೧೦ ಕೋಟಿಗೆ ಹೆಚ್ಚಿಸಲು ಸಾಧ್ಯವಿದೆ., ರೈತರಿಗೆ ಕೇವಲ ಜಮೀನಿನ ಪಹಣಿ ಆಧಾರದ ಮೇಲೆ ೨ ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಲು ನಿಯಮಾವಳಿಗಳಲ್ಲಿ ಅವಕಾಶವಿದೆ. ಇದರೊಂದಿಗೆ:, ಹೈನುಗಾರಿಕೆ (ಹಸುವಿನ ಸಾಲ) ಕುರಿ-ಮೇಕೆ ಸಾಕಣೆ ಹಾಗೂ ಶೆಡ್ ನಿರ್ಮಾಣ ಸಾಲ, ಕೋಳಿ ಸಾಕಣೆ ಸಾಲ, ಚಿನ್ನಾಭರಣ ಸಾಲ ಹಾಗೂ ಮಳಿಗೆಗಳ ವ್ಯಾಪಾರ ಸಾಲ ಮುಂತಾದ ಸಾಲ ಸೌಲಭ್ಯಗಳನ್ನು ಅರ್ಹ ರೈತರು ಮತ್ತು ಸಾರ್ವಜನಿಕರಿಗೆ ತಲುಪಿಸಬೇಕು. ಮುಖ್ಯವಾಗಿ ಮಹಿಳಾ ಮತ್ತು ಪುರುಷರ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಸಾಲ ನೀಡುವ ಮೂಲಕ ಸಂಘವು ಉತ್ತಮ ಲಾಭ ಗಳಿಸಲು ಸಾಧ್ಯವಿದೆ ಎಂದು ಸೋಮಣ್ಣ ವಿವರಿಸಿದರು.
ಸಂಘದ ಪ್ರಗತಿಗೆ ರಾಜಕೀಯ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ರಾಜಕೀಯವನ್ನು ಬದಿಗೊತ್ತಿ, ಆಡಳಿತ ಮಂಡಳಿಯು ಕಾರ್ಯದರ್ಶಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಂಪೂರ್ಣ ಸಹಕಾರ ನೀಡಬೇಕು. ಸ್ಥಳೀಯ ಬಾಂಧವ್ಯ ಅಥವಾ ಮುಲಾಜುಗಳಿಗೆ ಒಳಗಾಗದೆ, ನಿಯಮಾನುಸಾರ ದಕ್ಷತೆಯಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಸಂಸ್ಥೆಯನ್ನು ತಾಲ್ಲೂಕಿನಲ್ಲೇ ಮಾದರಿಯನ್ನಾಗಿ ರೂಪಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಎಂ.ಹೆಚ್.ಸುರೇಶ್, ಅಧ್ಯಕ್ಷ ನಾರಾಯಣ್.ಎಂ.ಎಸ್. ಉಪಾಧ್ಯಕ್ಷ ಗೋವಿಂದಯ್ಯ, ನಿರ್ದೇಶಕರಾದ ಓಹೀಲೇಶ್, ಕೃಷ್ಣಮೂರ್ತಿ, ದೊಡ್ಡತಿಮ್ಮಯ್ಯ, ನರಸಿಂಹಯ್ಯ, ನಾರಾಯಣಪ್ಪ, ಪುಟ್ಟರಾಮಯ್ಯ, ನರಸಿಂಹರಾಜು, ಲಲಿತ, ಮಂಜುಳ, ಸಿಎಒ ಎಂ.ಎಸ್.ಹರೀಶ್, ಮನೋಜ್, ಬ್ಯಾಂಕ್ ಪ್ರತಿನಿಧಿ ಧನಂಜಯ್ಯ ಹಾಗೂ ಸದಸ್ಯರು ಭಾಗವಹಿಸಿದ್ದರು.