ನಿಗದಿತ ಸಮಯದೊಳಗೆ ಕೆಲಸ ಮಾಡಿ

| Published : Mar 13 2025, 12:49 AM IST

ಸಾರಾಂಶ

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು. ಈ ವೇಳೆ ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜ್ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್‌ಗೆ ದೂರು ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಮಾಡಿಕೊಡಬೇಕು, ಒಂದೊಮ್ಮೆ ಕೆಲಸ ಮಾಡಿಕೊಡದೆ ಸತಾಯಿಸುವುದು, ಲಂಚ ಕೇಳುವುದು ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್ ಕುಮಾರ್ ಎಚ್ಚರಿಕೆ ನೀಡಿದರು.

ಪಟ್ಟಣದ ಲೋಕೊಪಯೋಗಿ ವಸತಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದುಕೊರತೆ ದೂರು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಮಾಡಿಕೊಳ್ಳಲು ಸರ್ಕಾರ ಸಕಾಲ ಸೇರಿದಂತೆ ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸಕಾಲದಲ್ಲಿ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಸರಿಯಾದ ಮಾಹಿತಿ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ತಿಳಿಸಿದರು.

ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜು ಮಾತನಾಡಿ, ಹನೂರು-ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಮಂಗಲ ಗ್ರಾಮದ ವಿಶ್ವೇಶ್ವರ ಪ್ರಸಾದ್ ಸರ್ಕಾರಿ ಜಮೀನನ್ನು ಉಲ್ಲೇಪುರ ಸರ್ವೆ ನಂ.356 ರಲ್ಲಿ 5.94, 355 ರಲ್ಲಿ ,5.50 ಎಕರೆ ಜಮೀನನ್ನು ಅಕ್ರಮವಾಗಿ ಸೆಡ್‌ಗಳನ್ನು ನಿರ್ಮಾಣ ಮಾಡಿಕೊಂಡು ಸರ್ಕಾರಿ ಭೂಮಿ ಕಬಳಿಕೆ ಮಾಡಲು ಹೊರಟಿರುವ ಬಗ್ಗೆ ಸಂಬಂಧಪಟ್ಟ ಕಂದಾಯ ಇಲಾಖೆಯವರು ತೆರವು ಮಾಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿಗಳೇ ಶೇ.24.05 ರಷ್ಟು 2023ರಲ್ಲಿ ಒತ್ತುವರಿ ಜಮೀನನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಕೋಟ್ಯಂತರ ರುಪಾಯಿ ಬೆಲೆಬಾಳುವ ಸರಕಾರಿ ಜಮೀನನ್ನು ಸಂರಕ್ಷಣೆ ಮಾಡಲು ಸಂಬಂಧಪಟ್ಟ ಸರ್ಕಾರಿ ಕಂದಾಯ ಅಧಿಕಾರಿಗಳಿಗೆ ಭೂಕಬಳಿಕೆಯನ್ನು ತಡೆಗಟ್ಟಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇಶ್ ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿ ನಕಲಿ ಆರ್‌ಟಿಐ ಕಾರ್ಯಕರ್ತರ ಹಾವಳಿ ಹೆಚ್ಚಾಗಿದ್ದು ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಆರ್‌ಟಿಐ ಕಾರ್ಯಕರ್ತ ಅರ್ಜಿ ಸಲ್ಲಿಸಿ, ಅವರಿಗೆ ನಿಗದಿತ ದಿನಾಂಕದೊಳಗೆ ಮಾಹಿತಿ ಸಿಗದಿದ್ದರೆ ಅವರು ಮೇಲ್ಮನವಿಗೆ ಹೋಗಬೇಕು. ಆದರೆ ಇವರು ಅಧಿಕಾರಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಇಂತಹ ಆರ್‌ಟಿಐ ಕಾರ್ಯಕರ್ತರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಚೆನ್ನಾಲಿಂಗನಹಳ್ಳಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಸರ್ಕಾರಿ ಜಮೀನು ಒತ್ತುವರಿ, ಲೊಕ್ಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗೆಯದೆ ಇರುವುದು, ಪುದುರಾಮಪುರ ವ್ಯಾಪ್ತಿಯಲ್ಲಿ ಜಮೀನಿಗೆ ಪೋಡಿ ಮಾಡದೆ ಇರುವುದು, ವಸತಿ ಯೋಜನೆಯಡಿ ಹಣ ಬಿಡುಗಡೆಯಾಗದೆ ಇರುವುದು, ದುಪ್ಪಟ್ಟು ಕಂದಾಯ ಹಾಕಿರುವುದು ಸೇರಿದಂತೆ ಹಲವು ದೂರುಗಳು ದಾಖಲಾದವು.

ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಶಿರಸ್ತೆದಾರ್ ನಾಗೇಂದ್ರ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ರಾಜೇಶ್, ಆರ್‌ಎಫ್ಒ ನಿರಂಜನ್, ದೈಹಿಕ ಶಿಕ್ಷಣ ಸಂಯೋಜಕ ಮಹಾದೇವ್, ಗ್ರಾಮ ಆಡಳಿತಾಧಿಕಾರಿ ರಾಹುಲ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ರಮೇಶ್, ಭೂಮಾಪಕ ಸಿಂಗರಾಜ್ ಶೆಟ್ಟಿ, ಪಟ್ಟಣ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಪ್ರದೀಪ್, ಲೋಕಾಯುಕ್ತ ಕಚೇರಿಯ ಸಿಬ್ಬಂದಿ ಶ್ರೀನಿವಾಸ್ ಚಾಮರಾಜು ಇನ್ನಿತರರು ಹಾಜರಿದ್ದರು.