ಸಾರಾಂಶ
ಅಧಿಕಾರಿಗಳು ಪ್ರಗತಿಪರವಾಗಿ ಆಲೋಚಿಸಿದರೆ ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಸಾಧ್ಯ. ಸಬೂಬುಗಳನ್ನು ಹೇಳದೆ ಕೆಲಸ ಮಾಡಿ ಎಂದು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಹಾನಗಲ್ಲ
ಅಧಿಕಾರಿಗಳು ಪ್ರಗತಿಪರವಾಗಿ ಆಲೋಚಿಸಿದರೆ ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಸಾಧ್ಯ. ಸಬೂಬುಗಳನ್ನು ಹೇಳದೆ ಕೆಲಸ ಮಾಡಿ ಎಂದು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೩ ತಿಂಗಳಾಯ್ತು ನಗರೋತ್ಥಾನ ಕಾಮಾಗಾರಿಗಳ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೀರಿ. ಕಾಲ ಹರಣಕ್ಕೆ ಅವಕಾಶವಿಲ್ಲ. ನಾಳೆ, ಮುಂದಿನ ವಾರ ಎಂಬ ಉದಾಹರಣೆ ಹೇಳಿ ಹೋದರೆ ಆಗದು ಎಂದು ಎಚ್ಚರಿಸಿದರು.
ತಂಬಾಕು ಮುಕ್ತ ಕಚೇರಿಗಳ ವಿಷಯದಲ್ಲಿ ಕೇವಲ ನಾಮ ಫಲಕ ಹಾಕಿದರೆ ಸಾಲದು. ಸರ್ಕಾರದ ಸದುದ್ದೇಶ ಈಡೇರಬೇಕು. ಸಿಬ್ಬಂದಿ ಮೊದಲು ಇಚ್ಛಾಶಕ್ತಿ ಹೊಂದಿ ತಂಬಾಕು ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು.
ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೇಳಿಕೆ ನೀಡಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಒಳ್ಳೆಯ ಬೆಳವಣೆಗೆ ಅಲ್ಲ. ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ವಾಸ್ತವವನ್ನು ತಿಳಿಸಿ. ಅಗತ್ಯ ಸೌಲಭ್ಯಗಳ ಬಗೆಗೆ ಮನವರಿಕೆ ಮಾಡಿ ಎಂದು ತಿಳಿಸಿದರು.
ಆಯುಷ್ಮಾನ್ ಕಾರ್ಡ್ ನೀಡುವಲ್ಲಿ ವಿಳಂಬದ ದೂರುಗಳಿವೆ. ಅಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ. ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರಿದೆ.
ಎಳ್ಳೂರು, ಗುರುರಾಯಪಟ್ಟಣ, ಸೋಮಸಾಗರ, ಡೊಮನಾಳ, ಬ್ಯಾಗವಾದಿ, ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಉದ್ಭವಿಸಿದೆ. ಮುಂದಿನ ದಿನಗಳಲ್ಲಿ ೪೦ ಗ್ರಾಮಗಳಲ್ಲಿ ಇದೇ ಸಮಸ್ಯೆಯಾಗಬಹುದೆಂಬ ವರದಿ ಇದೆ. ಇದಕ್ಕಾಗಿ ಕೂಡಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಿ. ಅಗತ್ಯ ಅನುದಾನಕ್ಕೆ ಮಾಹಿತಿ ನೀಡಿರಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಳ್ಳಿಗಳಲ್ಲಿ ಮುಕ್ತವಾಗಿ ಸಾರಾಯಿ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆ ಏನು ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಏತ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸುತ್ತಿರುವ ಅಧಿಕಾರಿಗಳು, ಕಳೆದ ವರ್ಷದ ಮಾವು ಬೆಳೆ ವಿಮೆ ಇನ್ನೂ ಬಾರದಿರುವುದು, ಕಾರ್ಮಿಕರ ಅನಧಿಕೃತ ಕಾರ್ಡ್ ರದ್ದು ಪಡಿಸುವಲ್ಲಿ ವಿಳಂಬವಾಗುತ್ತಿರುವುದು, ಹಳೆಯ ಕಾರ್ಡ್ ರಿನಿವಲ್ ಆಗದಿರುವುದು, ಸ್ಪಿಂಕ್ಲರ್ ಹಾಗೂ ಡ್ರಿಪ್‌ಗೆ ಸಹಾಯಧನ ನೀಡಲು ಇರುವ ತಾಂತ್ರಿಕ ಸಮಸ್ಯೆಗಳು, ₹೨೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಮಾವು ಸಂಸ್ಕರಣ ಘಟಕ, ವರ್ಮಿ ಕಾಂಪೋಸ್ಟ್ ಯುನಿಟ್, ಗೃಹ ಜ್ಯೋತಿ, ಗಂಗಾ ಕಲ್ಯಾಣ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಪ್ರಸ್ತುತ ತ್ರೈಮಾಸಿಕ ಸಭೆಗೆ ಈ ಬಾರಿ ತಾಪಂ ನೂತನ ನಾಮನಿರ್ದೇಶಕ ಸದಸ್ಯರಾಗಿ ಅನಿತಾ ಡಿಸೋಜಾ, ರಾಜೇಶ್ ಚವ್ಹಾಣ, ರಾಜಕುಮಾರ ಜೋಗಪ್ಪನವರ, ಮೊಹಮ್ಮದಹನೀಫ್ ಬಂಕಾಪುರ, ಮಾರ್ತಾಂಡಪ್ಪ ಮಣ್ಣಮ್ಮನವರ, ಪ್ರಕಾಶ ಬಾರ್ಕಿ ವೇದಿಕೆಯಲ್ಲಿದ್ದರು.
ತಹಸೀಲ್ದಾರ ರೇಣುಕಮ್ಮ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್. ದೇವರಾಜ, ಅಕ್ಕಿಆಲೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹನುಮಂತಪ್ಪ ಗೊಂದಿ ಸೇರಿದಂತೆ ಇತರರಿದ್ದರು.