ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಶ್ರಮಜೀವಿ ಅಂಬೇಡ್ಕರ್: ಡಾ.ಮಂತರ್ ಗೌಡ

| Published : Apr 15 2025, 12:45 AM IST

ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಶ್ರಮಜೀವಿ ಅಂಬೇಡ್ಕರ್: ಡಾ.ಮಂತರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಮೂಲಕ ಸಮಾನತೆ ತರಲು ಶ್ರಮಿಸಿದ ಶ್ರಮಜೀವಿ ಅಂಬೇಡ್ಕರ್‌ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಶಾಸಕ ಡಾ. ಮಂತರ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರದಲ್ಲಿನ ಅಸಮಾನತೆ ಹೋಗಲಾಡಿಸಿ, ಸಂವಿಧಾನದ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಶ್ರಮಜೀವಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳು ವಂತಾಗಬೇಕು ಎಂದು ಶಾಸಕರಾದ ಡಾ.ಮಂತರ್ ಗೌಡ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಮೆರಿಕ, ಲಂಡನ್ ಸೇರಿದಂತೆ ವಿದೇಶದಲ್ಲಿ ವ್ಯಾಸಂಗ ಮಾಡಿದವರು ವಾಪಸ್ಸು ದೇಶಕ್ಕೆ ಆಗಮಿಸುವುದು ಕಡಿಮೆ, ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿದೇಶದಲ್ಲಿ ಅಧ್ಯಯನ ಮಾಡಿ ರಾಷ್ಟ್ರಕ್ಕೆ ದೇವರಂತೆ ಆಗಮಿಸಿ ಸಂವಿಧಾನ ರಚಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ಮತ್ತು ಸುಧಾರಣೆಗೆ ಹಗಲಿರುಳು ಶ್ರದ್ಧೆ ವಹಿಸಿ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ ಎಂದು ಹೇಳಿದರು.

ಶಿಕ್ಷಣದಿಂದ ರಾಷ್ಟ್ರದಲ್ಲಿ ಬದಲಾವಣೆ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ‌ ಒತ್ತು ನೀಡಿದ್ದರು. ಶಿಕ್ಷಣದಿಂದ ಮಾತ್ರ ರಾಷ್ಟ್ರದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದನ್ನು ಸಾರಿದ್ದರು, ಅಂಬೇಡ್ಕರ್ ಅವರ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು ಎಂದು ಶಾಸಕರು ವಿವರಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಮಹಾರಾಷ್ಟ್ರ ರಾಜ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನ ನವೆಂಬರ್ 7 ರಂದು ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸುವುದು ವಿಶೇಷವಾಗಿದೆ ಎಂದರು.

ಬಾಬಾ ಸಾಹೇಬರು ವಾಸ ಮಾಡುತ್ತಿದ್ದ ಪ್ರತಿ ಕೊಠಡಿಯಲ್ಲಿಯೂ ಶೇ.90 ರಷ್ಟು ಪುಸ್ತಕಗಳು ಇರುತ್ತಿದ್ದವು, ಅಷ್ಟರ ಮಟ್ಟಿಗೆ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಿದ್ದರು ಎಂದು ಹೇಳಿದರು.

ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕರಾದ ಡಾ.ಶಿವಕುಮಾರ್ ಮಾತನಾಡಿ, ರಾಷ್ಟ್ರಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸಾಕ್ಷರತೆ ಪ್ರಮಾಣವು ಶೇ.5.30 ರಷ್ಟು ಇತ್ತು, ಇಂದು ಶೇ.75 ರಷ್ಟು ಸಾಕ್ಷರತೆ ಪಡೆಯಲು ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ ಎಂದರು.

ಶಿಕ್ಷಣದ ಜತೆಗೆ ಉದ್ಯೋಗ ಆಯ್ಕೆಗೂ ಅವಕಾಶ ನೀಡಿದ ಅಂಬೇಡ್ಕರ್ ಅವರು ಶಿಕ್ಷಣ ಪಡೆದು ವೃತ್ತಿ ಆಯ್ಕೆ ಸ್ವಾತಂತ್ರ್ಯ ನೀಡಿದರು ಎಂದು ತಿಳಿಸಿದರು.

ನಮ್ಮ ಜನ ಕಾನೂನು ಪಂಡಿತರಾಗಬೇಕು. ದೊಡ್ಡ ಆರ್ಥಿಕ ತಜ್ಞರಾಗಬೇಕು. ಐಐಟಿ, ಐಐಎಂ ಗಳಲ್ಲಿ ಅಧ್ಯಯನ ಮಾಡಬೇಕು ಎಂಬ ಕನಸು ಕಂಡಿದ್ದರು ಎಂದು ಶಿವಕುಮಾರ್ ಅವರು ಹೇಳಿದರು.

ಸದಾ ಸ್ಮರಿಸುವಂತಾಗಬೇಕು: ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಮಾತನಾಡಿ ಭಾರತದ ಪ್ರತಿ ಪ್ರಜೆಗೂ ಸಮಾನ ಅವಕಾಶ ಕಲ್ಪಿಸಲು ಪ್ರಯತ್ನಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ಅಂತರ ಜಾತಿ ವಿವಾಹಿತರಿಗೆ ಮತ್ತು ಪರಿಶಿಷ್ಟ ಜಾತಿ ಒಳಪಂಗಡದಲ್ಲಿ ವಿವಾಹಿತರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.

ಕಾನೂನು ಪದವಿಧರರಿಗೆ ಸಹಾಯಧನ, ಅಲೆಮಾರಿ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯನ್ನು ಇದೇ ಸಂದರ್ಭದಲ್ಲಿ ಕಲ್ಪಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ದಿವಾಕರ, ದೌರ್ಜನ್ಯ ನಿವಾರಣೆ ಸಮಿತಿ ಸದಸ್ಯರಾದ ಜನಾರ್ಧನ, ನಗರಸಭೆ ಸದಸ್ಯರಾದ ಅನಿತಾ ಪೂವಯ್ಯ, ಸತೀಶ್, ಸಬಿತಾ, ಕಲಾವತಿ, ಪ್ರಮುಖರಾದ ಟಿ.ಪಿ.ರಮೇಶ್, ಪ್ರೇಮ ಕೃಷ್ಣಪ್ಪ, ಮೋಹನ್ ಮೌರ್ಯ, ಪ್ರೇಮ್ ಕುಮಾರ್, ದೀಪಕ್ ಪೊನ್ನಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್, ಪಾಲಾಕ್ಷ, ವಿರೇಂದ್ರ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇತರರು ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಸ್ವಾಗತಿಸಿದರು. ಶಿಕ್ಷಕರಾದ ರಮೇಶ್ ನಿರೂಪಿಸಿದರು, ತುಳಸಿ ಅವರು ಅಂಬೇಡ್ಕರ್ ಕುರಿತು ಹಾಡು ಹಾಡಿದರು, ಬಾಲಕೃಷ್ಣ ರೈ ವಂದಿಸಿದರು.

ನಗರದ ಕಾವೇರಿ ಕಲಾಕ್ಷೇತ್ರದಿಂದ ಗಾಂಧಿ ಭವನದ ವರೆಗೆ ವಿವಿಧ ಕಲಾತಂಡ ಹಾಗೂ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ನಡೆಯಿತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಡೊಳ್ಳು ಕುಣಿತ, ವೀರಗಾಸೆ ಕುಣಿತವು ಮೆರವಣಿಗೆಯಲ್ಲಿ ಮೆರಗು ತಂದವು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.