ಮನೆಯ ವೃದ್ಧ ಯಜಮಾನಿಯನ್ನು ಕೊಂದ ಕೆಲಸಗಾರನೊಬ್ಬ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೋ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯ ವೃದ್ಧ ಯಜಮಾನಿಯನ್ನು ಕೊಂದ ಕೆಲಸಗಾರನೊಬ್ಬ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೋ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವೃದ್ಧೆ ಮೇಲೆ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಮೂಲದ ದೇವರಾಜ್(50) ಆತ್ಮಹತ್ಯೆ ಮಾಡಿಕೊಂಡವನು. ಆತ್ಮಹತ್ಯೆಗೂ ಮುನ್ನ 65 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಭಾನುವಾರ ಮುಂಜಾನೆ 4.30ರ ಸುಮಾರಿಗೆ ಮಹಿಳೆಯ ಪತಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸಿಲ್ಕ್‌ ಬೋರ್ಡ್‌ ಸಮೀಪದ ಕೆಎಎಸ್‌ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಮೂಲದ ಮಹಿಳೆ, ಪತಿ ಮತ್ತು 27 ವರ್ಷದ ಪುತ್ರಿಯ ಜತೆ ಕೆಎಎಸ್‌ ಲೇಔಟ್‌ನಲ್ಲಿ ಸುಮಾರು 15 ವರ್ಷಗಳಿಂದ ನೆಲೆಸಿದ್ದರು. ಆಕೆಯ ಪತಿ ಮತ್ತು ಪುತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪತಿ ಕಾರ್ಯನಿಮಿತ್ತ ಆಗಾಗ್ಗೆ ವಿದೇಶಕ್ಕೆ ಹೋಗುತ್ತಿದ್ದರು.

ಕೆಲ ದಿನಗಳ ಹಿಂದೆ ಕೂಡ ಅವರು ದುಬೈಗೆ ತೆರಳಿದ್ದರು. ಭಾನುವಾರ ಮುಂಜಾನೆ 4.30ರ ಸುಮಾರಿಗೆ ಮನೆಗೆ ಬಂದಿದ್ದು, ಕಾಲಿಂಗ್ ಬೆಲ್‌ ಒತ್ತಿದಾಗ ಮೊದಲ ಮಹಡಿಯಲ್ಲಿದ್ದ ಪುತ್ರಿ ಬಾಗಿಲು ತೆರೆದು ಮತ್ತೆ ತನ್ನ ಕೋಣೆಗೆ ಹೋಗಿದ್ದಾರೆ. ಬಳಿಕ ತಮ್ಮ ಕೋಣೆಗೆ ಹೋದಾಗ ಪತ್ನಿ ಕೊಲೆಯಾಗಿರುವುದು ಕಂಡು ಜೋರಾಗಿ ಕೂಗಿಕೊಂಡಿದ್ದಾರೆ. ಗಾಬರಿಗೊಂಡ ಪುತ್ರಿ ಕೆಳಗೆ ಬಂದು ನೋಡಿದಾಗ ತಾಯಿ ಕೊಲೆಯಾಗಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಮೈಕೋ ಲೇಔಟ್‌ ಠಾಣೆ ಪೊಲೀಸರು, ಸೋಕೋ ತಂಡು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಪ್ರಾಥಮಿಕವಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ. ಮತ್ತೊಂದೆಡೆ ಘಟನೆ ನಡೆದ ಸಮಯದಲ್ಲಿ ಮನೆಯ ಮೊದಲ ಮಹಡಿಯಲ್ಲಿ ಮಗಳು ಇದ್ದರೂ, ಕೆಳ ಮಹಡಿಯಲ್ಲಿ ನಡೆದ ಕೃತ್ಯದ ಬಗ್ಗೆ ಆಕೆಗೆ ಗೊತ್ತಾಗಿರಲಿಲ್ಲ ಎಂಬುದು ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಮಾಡಿ ನೇಣಿಗೇರಿದ

ದೇವರಾಜ್ ಸುಮಾರು 10 ವರ್ಷಗಳಿಂದ ಕೆಎಎಸ್‌ ಲೇಔಟ್‌ನಲ್ಲಿ ವಾಸವಾಗಿದ್ದ. ಕೊಲೆಯಾದ ಮಹಿಳೆ ಮನೆ ಸೇರಿ ಸಮೀಪದ ಹತ್ತಾರು ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲವೊಮ್ಮೆ ಆಯಾ ಮನೆಗಳಲ್ಲೇ ಮಲಗುತ್ತಿದ್ದ. ಅದೇ ರೀತಿ ಎರಡು ದಿನಗಳಿಂದ ದೇವರಾಜ್, ಮಹಿಳೆ ಮನೆಯಲ್ಲಿ ಮಲಗುತ್ತಿದ್ದ.

ಶನಿವಾರ ತಡರಾತ್ರಿ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ, ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದು, ಬಳಿಕ ಅದೇ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮೈಕೋ ಲೇಔಟ್‌ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ.

65 ವರ್ಷದ ಮಹಿಳೆಯನ್ನು ಕೆಲಸಗಾರನೇ ಹತ್ಯೆಗೈದಿದ್ದಾನೆ. ಘಟನಾ ಸ್ಥಳಕ್ಕೆ ಸೋಕೋ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

-ರಮೇಶ್‌ ಬಾನೊತ್‌, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ