ಮಲೆ ಮಹದೇಶ್ವರ ಮಂಡಳ ಕಚೇರಿಯಲ್ಲಿ ಸಂಸ್ಥಾಪಕ ದಿನಾಚರಣೆ
---ಕನ್ನಡಪ್ರಭ ವಾರ್ತೆ ಹನೂರು
ಹಿರಿಯರ ತ್ಯಾಗ, ಬಲಿದಾನದಿಂದ 1980ರಲ್ಲಿ ಹುಟ್ಟಿದ ಭಾರತೀಯ ಜನತಾ ಪಕ್ಷ ಇಂದು ದೇಶದಲ್ಲಿಯೇ ದೊಡ್ಡ ಪಕ್ಷವಾಗಲು ಕಾರ್ಯಕರ್ತರ ಪರಿಶ್ರಮ ಅಪಾರವಾಗಿದೆ ಎಂದು ಮಲೆ ಮಹದೇಶ್ವರ ಮಂಡಲ ಅಧ್ಯಕ್ಷ ಮುರುಗೇಶ್ ತಿಳಿಸಿದರು.ಬಿಜೆಪಿ ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷ ಜನಧ್ವನಿ ವೆಂಕಟೇಶ್‌ರವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಬಿಜೆಪಿ ಎಲ್ಲ ವರ್ಗದವರ ಹಿತರಕ್ಷಣೆಗೆ ಬದ್ಧವಿದೆ. ಬಡವರು, ಕಾರ್ಮಿಕರು, ರೈತರು, ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಿದೆ. ಈ ದಿಶೆಯಲ್ಲಿ ದೇಶದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದಾರೆ. ಇಡೀ ವಿಶ್ವವೇ ಭಾರತದತ್ತ ಕಾತುರದಿಂದ ನೋಡುತ್ತಿದೆ. ಇದಕ್ಕೆ ಮೋದಿಯವರ ಸಮರ್ಥ ಆಡಳಿತ ಹಾಗೂ ದೂರದಷ್ಠಿಯ ನಾಯಕತ್ವವೇ ಕಾರಣವೆಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಬಿಜೆಪಿಯು 150ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹನೂರು ಮಂಡಲ ಅಧ್ಯಕ್ಷ ವೃಷಭೇಂದ್ರ ಮಾತನಾಡಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ದೇಶದ ಸಮಗ್ರತೆಗೆ, ದೇಶದ ಐಕ್ಯತೆಗೆ, ದೇಶದ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಿ ಆಡಳಿತ ಮಾಡಿರುವುದನ್ನು ನಾವು ಬಿಜೆಪಿ ಆಡಳಿತದಲ್ಲಿ ನೋಡಬಹುದಾಗಿದೆ. ಎಂದೆಂದಿಗೂ ಬಿಜೆಪಿ ಮೇಲೆ ಜನರ ವಿಶ್ವಾಸವಿಟ್ಟಿದ್ದಾರೆ.
ಬಿಜೆಪಿ ಅಧಿಕಾರ ಬಂದರೆ ದೇಶ ಅಭಿವೃದ್ಧಿ ಆಗುತ್ತದೆ ಎಂದು ಜನರು ಬಯಸಿದ್ದಾರೆ. ಬಿಜೆಪಿ 47 ವರ್ಷಗಳಲ್ಲಿ ಅನೇಕ ಸಾಧನೆ ಮಾಡಿದೆ. ಬಿಜೆಪಿ ಇತಿಹಾಸವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಮೊದಲು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.ಇದೆ ವೇಳೆ ಹನೂರು ಮಂಡಲ ಮಾಜಿ ಅಧ್ಯಕ್ಷರಾದ ಜಗನ್ನಾಥ ನಾಯ್ಡು, ಬಿಎಲ್‌ಎ 1 ಲೋಕೇಶ್ ಜೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಪುಟ್ಟರಾಜು, ಮಹದೇವ್, ಮುರುಗೇಶ್ ಉಪಾಧ್ಯಕ್ಷರಾದ ಕೃಷ್ಣೇಗೌಡ ಕಾರ್ಯದರ್ಶಿಗಳಾದ ನಂಜುಂಡಸ್ವಾಮಿ, ಬೂತ್ ಅಧ್ಯಕ್ಷರುಗಳಾದ ವೆಂಕಟರಾಜು ಮಾಯಣ್ಣ, ಕಾಂತರಾಜು, ಶಿವಲಿಂಗಪ್ಪ, ಕುಮಾರಸ್ವಾಮಿ, ಮುಖಂಡರುಗಳಾದ ರವಿ, ಅರವಿಂದ್, ಸುರೇಶ್, ರಾಜು ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.