ಕನ್ನಡಪ್ರಭ ವಾರ್ತೆ ಮದ್ದೂರು

ಗ್ರಾಮಗಳು ನಗರಸಭೆಗೆ ಸೇರ್ಪಡೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಧರಣಿ ನಡೆಸುವವರು ನಿಜವಾದ ಹೋರಾಟಗಾರರಲ್ಲ. ಗ್ರಾಮಸ್ಥರೇ ಪ್ರತಿಭಟನೆ ಕೈಗೊಂಡಿದ್ದರೆ ತಾವೇ ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ಮಾಡುತ್ತಿದ್ದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ನಗರಕೆರೆ, ಮಾಲಗಾರನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯರಲ್ಲಿ 1 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಉದ್ದೇಶದಿಂದ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತಾವು ತೆರಳುವುದಿಲ್ಲ. ಈ ಸಂಬಂಧ ಮತ್ತೊಮ್ಮೆ ತಮ್ಮನ್ನು ಪ್ರಶ್ನೆ ಮಾಡದಂತೆ ಸೂಚಿಸಿದರು.

ಗೆಜ್ಜಲಗೆರೆ, ಗೊರವನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ನಗರಸಭೆಗೆ ಸೇರ್ಪಡೆಗೊಳಿಸಿದ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಪು ಬರುವವರೆಗೂ ತಾಳ್ಮೆಯಿಂದ ಇರಬೇಕೆ ಹೊರತು ಇಲ್ಲಸಲ್ಲದ ಘಟನೆಗಳಿಗೆ ಮುಂದಾಗಬಾರದು ಎಂದರು.

ನಗರಸಭೆಗೆ ಗೂಂಡಾಗಳಂತೆ ಅತಿಕ್ರಮ ಪ್ರವೇಶ ಮಾಡಿ ಧಿಕ್ಕಾರ ಕೂಗುವುದು, ಕರಪತ್ರ ಸುಟ್ಟು ಹಾಕುವುದು, ನಮ್ಮದೇ ಕಾನೂನು, ನಮ್ಮ ಊರ ಕಾನೂನು, ಇದೇನು ತಾಲಿಬಾನ ಎಂದು ಪ್ರಶ್ನಿಸಿದರು. ಇದನ್ನು ನೋಡಿದವರು ದುರಹಂಕಾರ ಎನ್ನುತ್ತಾರೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ತೀರ್ಪು ಬರುವವರೆಗೆ ತಾಳ್ಮೆಯಿಂದ ಇರಬೇಕು ಎಂದರು.


ತಾಲೂಕಿನ ಮಾಲಗಾರನಹಳ್ಳಿ ಹಾಗೂ ನಗರಕೆರೆ ಪರಿಶಿಷ್ಟ ಜಾತಿ ಕಾಲೋನಿಗಳ ರಸ್ತೆ, ಚರಂಡಿ ಇನ್ನಿತರ ಮೂಲ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ತಾಲೂಕಿನಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಚರಣ್, ಶಿಲ್ಪ ಜಯಲಿಂಗು, ಮುಖಂಡರಾದ ನಾಗೇಶ್, ಶಿವಕುಮಾರ್, ಸಂದೀಪ್, ರಿತೇಶ್‌ಗೌಡ, ನಾಗರಾಜು, ಅನಿಲ್ ಇದ್ದರು.