ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಇರುವ ಬಡ ಫಲಾನುಭವಿಗಳ ವಾರ್ಷಿಕ ಆದಾಯದ ಮಿತಿಯನ್ನು 32 ಸಾವಿರಕ್ಕೆ ನಿಗದಿಪಡಿಸಿರುವುದು ಸರಿಯಲ್ಲ ಮತ್ತು ಈ ಮಿತಿ 3 ಲಕ್ಷಕ್ಕೆ ಏರಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು.ರಾಜ್ಯ ಸರ್ಕಾರ ವಿಧವಾ ವೇತನ, ಅಂಗವಿಕಲರ ಪಿಂಚಣಿ, ಸಂಧ್ಯಾಸುರಕ್ಷ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಮನಸ್ವಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಅಡಿಯಲ್ಲಿ ಪಿಂಚಣಿಯನ್ನು ನೀಡುತ್ತಾ ಬಂದಿದೆ. ಆದರೆ, ಈಗ ರಾಜ್ಯ ಸರ್ಕಾರ ಈ ಯೋಜನೆಗಳನ್ನು ಪಡೆಯಲು ವಾರ್ಷಿಕ 32 ಸಾವಿರ ರು.ಗಳ ಆದಾಯಮಿತಿಯನ್ನು ನಿಗದಿ ಮಾಡಿ, ಪರಿಷ್ಕರಣೆ ಮಾಡಲು ಹೊರಟಿದೆ. ಈಗಾಗಲೇ ಶಿವಮೊಗ್ಗ ಜಿಲ್ಲಾಡಳಿತ 32 ಸಾವಿರಕ್ಕೂ ಹೆಚ್ಚು ಆದಾಯ ಇರುವ ಫಲಾನುಭವಿಗಳ ಕುಟುಂಬಗಳನ್ನು ಪಟ್ಟಿ ಮಾಡುತ್ತಿದೆ. ಜಿಲ್ಲೆಯಲ್ಲಿ ಸುಮಾರು 50 ಸಾವಿರ ಫಲಾನುಭವಿಗಳು ಈ ನಿಯಮದಿಂದ ತಮ್ಮ ಪಿಂಚಣಿಯನ್ನು ಕಳೆದುಕೊಳ್ಳುವ ಹೊತ್ತು ಬಂದಿದೆ. ಇದು ಜನವಿರೋಧ ನೀತಿಯಾಗಿದೆ ಎಂದರು.
ಸಮಾಜದಲ್ಲಿ ಹೆಣ್ಣಾಗಲೀ, ಗಂಡಾಗಲೀ ಕೂಲಿ ಮಾಡಿದರೂ ಕೂಡ ದಿನಕ್ಕೆ 300 ರು. ಸಿಗುತ್ತದೆ. ಗಾರೆ ಕೆಲಸದವರು, ಇತರೆ ಕುಶಲಕರ್ಮಿಗಳು, ಕಟ್ಟಡ ಕಾರ್ಮಿಕರು ದಿನಕ್ಕೆ 500 ರು. ಕನಿಷ್ಠ ದುಡಿಯುತ್ತಾರೆ. ಇವರಿಗೆ ವರ್ಷಕ್ಕೆ 1,80,000 ರು.ದುಡಿಯುತ್ತಾರೆ. ಹೀಗಿರುವಾಗ ಕೇವಲ 32 ಸಾವಿರ ರು. ಆದಾಯ ಇರಬೇಕೆಂದು ಸರ್ಕಾರ ಆದೇಶ ಹೊರಡಿಸಿರುವುದು ಅವೈಜ್ಞಾನಿಕವಾಗಿದೆ ಮತ್ತು ಖಂಡನೀಯವಾಗಿದೆ. ಇದರಿಂದ ಲಕ್ಷಾಂತರ ಫಲಾನುಭವಿಗಳಿಗೆ ತೊಂದರೆಯಾಗಲಿದ್ದು, ಸರ್ಕಾರದ ಸಹಾಯದಿಂದ ವಂಚಿತರಾಗುತ್ತಾರೆ ಎಂದು ದೂರಿದರು.ಆದ್ದರಿಂದ ಸರ್ಕಾರ ಕೂಡಲೇ ಈ ಆದೇಶವನ್ನು ವಾಪಾಸು ತೆಗೆದುಕೊಳ್ಳಬೇಕು ಮತ್ತು ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು ಕನಿಷ್ಠ ೩ಲಕ್ಷಕ್ಕೆ ಏರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಫಲಾನುಭವಿಗಳನ್ನು ಸಂಘಟಿಸಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಟ್ರಸ್ಟಿನ ಪ್ರಮುಖರಾದ ಎಚ್.ಎಂ. ಸಂಗಯ್ಯ, ಆಲಿಂಖಾನ್, ರವಿ ಅರಸಾಳು, ಶಂಕ್ರಾನಾಯ್ಕ ಇದ್ದರು.