ಕನ್ನಡಪ್ರಭ ವಾರ್ತೆ ಮದ್ದೂರು

ಸ್ಥಳೀಯ ಗ್ರಾಪಂ ಸದಸ್ಯರು, ಗ್ರಾಮಸ್ಥರ ಒಪ್ಪಿಗೆ ಪಡೆಯದೆ ಗ್ರಾಮವನ್ನು ನಗರಸಭೆಗೆ ಸೇರ್ಪಡೆಗೊಳಿಸಿರುವ ತೀರ್ಮಾನ ಕಾನೂನು ಬಾಹಿರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಕಚೇರಿ ಎದುರು ಕಳೆದ 107 ದಿನಗಳಿಂದಲೂ ನಗರಸಭೆಗೆ ಗ್ರಾಮ ಸೇರ್ಪಡೆ ಕ್ರಮ ಖಂಡಿಸಿ ಸ್ಥಳೀಯ ನಿವಾಸಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರೊಂದಿಗೆ ಧರಣಿಯಲ್ಲಿ ಪಾಲ್ಗೊಂಡರು.

ಒಪ್ಪಿಗೆ ಇಲ್ಲದೆ ಗ್ರಾಪಂ ಸೇರ್ಪಡೆ ಮಾಡಿರುವ ಕುರಿತು ಸ್ಥಳೀಯರಿಂದ ಅಗತ್ಯ ಮಾಹಿತಿ ಪಡೆದ ಬೊಮ್ಮಯಿ ಮಾತನಾಡಿ, ಯಾವುದೇ ಗ್ರಾಮವನ್ನು ಪುರಸಭೆಗಾಗಲಿ ಅಥವಾ ನಗರಸಭೆಯಾಗಲಿ ಸೇರ್ಪಡೆ ಮಾಡುವುದಕ್ಕೂ ಮುನ್ನ ಅನೇಕ ಕಾನೂನ್ಮಾತಕ ಹಾಗೂ ಸ್ಥಳಿಯ ಮಾರ್ಗಸೂಚಿ ಪಾಲಿಸಬೇಕಾಗುತ್ತದೆ. ಆದರೆ, ಸ್ಥಳೀಯ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಒಪ್ಪಿಗೆ ಪಡೆಯದೆ ಸೇರ್ಪಡೆಗೊಳಿಸಿರುವ ಶಾಸಕರ ತೀರ್ಮಾನ ಸರಿಯಲ್ಲ ಎಂದರು.

ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಗೆ ಸೇರ್ಪಡೆಗೊಳಿಸಿರುವ ಸಂಬಂಧ ತಾವು ಸಹ ಮುಖ್ಯಮಂತ್ರಿಗೆ ಪತ್ರ ವ್ಯವಹಾರ ನಡೆಸಿ ಮತ್ತು ಸ್ಥಳೀಯ ಶಾಸಕರೊಟ್ಟಿಗೆ ಚರ್ಚಿಸಿ ಕ್ರಮ ವಹಿಸುವ ಭರವಸೆ ನೀಡಿದರು. ಈ ಯೋಜನೆಯಿಂದ ಹಿಂದೆ ಸರಿದರೆ ಅಭಿನಂದನೆ ಸಲ್ಲಿಸುವುದಾಗಿ ತಪ್ಪಿದಲ್ಲಿ ಕಾನೂನಾತ್ಮಕ ಹೋರಾಟ ಕೈಗೊಳ್ಳಲಾಗುವುದು ಎಂದರು.


ಕಳೆದ ಹಲವು ದಿನಗಳಿಂದ ನಡೆಸುತ್ತಿರುವ ಹೋರಾಟದಿಂದ ಜನಶಕ್ತಿಗೆ ಗೆಲುವು ಸಿಗಲಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸರ್ಕಾರ ಪುನರ್ ಸ್ಥಾಪನೆಯಾಗಲಿದೆ. ತಮ್ಮ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥರಾಯಣ್ ಮಾತನಾಡಿ, ಕೂಡಲೇ ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸುವಂತೆ ತಪ್ಪಿದಲ್ಲಿ ಪ್ರತಿಭಟನಾಕಾರರೇ ಸರ್ಕಾರವನ್ನು ಸರ್ವನಾಶ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ರೈತ ನಾಯಕಿ ಸುನಂದಾ ಜಯರಾಮು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ತಾಪಂ ಮಾಜಿ ಅಧ್ಯಕ್ಷ ಸಿ.ಪಿ.ಯೋಗೇಶ್, ಮುಖಂಡರಾದ ವೀರಪ್ಪ, ಶಂಕರ್, ಲಿಂಗಪ್ಪಾಜಿ, ಮೋಹನ್ಕುಮಾರ್, ಯೋಗೇಶ್, ಅಶ್ವಥಮ್ಮ, ಗೌರಮ್ಮ ಇತರರಿದ್ದರು.