ಕನ್ನಡಪ್ರಭ ವಾರ್ತೆ ಮದ್ದೂರು

ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯ ಸಮಸ್ಯೆ ಸರಿಪಡಿಸುವಂತೆ ಹಾಗೂ ರೋಗಿಗಳಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣೆ ವೇದಿಕೆ ಕಾರ್ಯಕರ್ತರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಆಸ್ಪತ್ರೆಗೆ ಮೂಲ ಸೌಕರ್ಯ ಕಲ್ಪಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಆಸ್ಪತ್ರೆ ಉಸ್ತುವಾರಿ ನೋಡಿಕೊಳ್ಳಬೇಕಾದ ಆರೋಗ್ಯ ರಕ್ಷಣಾ ಸಮಿತಿ ನಿಷ್ಕ್ರಿಯವಾಗಿದೆ ಎಂದು ದೂರಿದರು.

ವೇದಿಕೆ ತಾಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರು ಮಾತನಾಡಿ, ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ನಗರ ಸೇರಿದಂತೆ ತಾಲೂಕಿನಾದ್ಯಂತ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ರೈತರು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಮೂಲ ಸೌಕರ್ಯವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ರೋಗಿಗಳಿಂದ 10 ರು. ಪಡೆದು ನೀಡುತ್ತಿರುವ ಚೀಟಿ ಬದಲಾಗಿ ಹಿಂದಿನಂತೆ ಐದು ರುಪಾಯಿಗಳನ್ನು ಪಡೆದು ಪುಸ್ತಕ ಇರುವ ರಸೀದಿ ನೀಡಬೇಕು. ಆಸ್ಪತ್ರೆ ದ್ವಾರದಲ್ಲಿ ಯಾವ ವೈದ್ಯರು ಲಭ್ಯವಿರುತ್ತಾರೆ ಅವರ ವಿಭಾಗ ಯಾವುದು ಮತ್ತು ಸಮಯದ ವಿವರಗಳನ್ನು ಒಳಗೊಂಡ ಮತ್ತು ಆಸ್ಪತ್ರೆಯಲ್ಲಿ ಲಭ್ಯವಿರುವ ಮತ್ತು ದಾಸ್ತಾನು ಇಲ್ಲದ ಔಷಧಿಗಳ ಬಗ್ಗೆ ನಾಮಫಲಕ ಅಳವಡಿಸುವಂತೆ ಆಗ್ರಹಿಸಿದರು.


ವೈದ್ಯರು ಯಾವುದೇ ಕಾರಣಕ್ಕೂ ರೋಗಿಗಳಿಗೆ ಹೊರಗಿನಿಂದ ಔಷಧಿ ತರುವಂತೆ ಚೀಟಿ ಬರೆದು ಕೊಡಬಾರದು. ಆಸ್ಪತ್ರೆಯಲ್ಲೇ ಔಷಧಿ ನೀಡಬೇಕು. ಒಂದು ವೇಳೆ ಔಷಧಿ ಲಭ್ಯವಿಲ್ಲದಿದ್ದರೆ ರೋಗಿಗಳು ಹೊರಗೆ ಖರೀದಿಸಿದ ಬಿಲ್ ಆಧಾರದ ಮೇಲೆ ಆಸ್ಪತ್ರೆ ತುರ್ತು ನಿಧಿಯಿಂದ ರೋಗಿಗಳಿಗೆ ವಾಪಸ್ ಹಣ ನೀಡಬೇಕೆಂದು ಒತ್ತಾಯಿಸಿದರು.

ವೃದ್ಧಾಪ್ಯ ವೇತನ, ವಿಕಲಚೇತನ ಪ್ರಮಾಣ ಪತ್ರ ಪಡೆಯಲು ಹಾಗೂ ಶಸ್ತ್ರ ಚಿಕಿತ್ಸೆಗೆ ಬರುವ ರೋಗಿಗಳಿಂದ ಹಣ ಪಡೆಯುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿದೆ. ಯಾವುದೇ ರೀತಿಯ ಹಣ ಪಡೆಯದೆ ಇಲ್ಲಿಯ ವೈದ್ಯರು ಹಾಗೂ ಸಿಬ್ಬಂದಿ ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಆಸ್ಪತ್ರೆ ಆರೋಗ್ಯ ರಕ್ಷಣಾ ಸಮಿತಿತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನ ಸ್ಥಳಕ್ಕೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಾಲಕೃಷ್ಣ ಆಗಮಿಸಿ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರತಿಭಟನೆಯಲ್ಲಿ ಕರವೇ ಪದಾಧಿಕಾರಿಗಳಾದ ಎಂ.ಸಿ.ಗೀತಾ, ಕೆ.ಎಂ.ಸಾಗರ್, ಜಿ.ಉಮೇಶ್, ನಾಗಲಿಂಗಯ್ಯ, ತೇಜುಕುಮಾರ್, ವಸಂತಮ್ಮ, ಸತೀಶ, ನಟರಾಜು, ಜಿ.ಕೆ. ಮಾದೇಶ್ ಸೇರಿದಂತೆ ಇತರರು ಇದ್ದರು.