ದೊಡ್ಡಬಳ್ಳಾಪುರ: ಕಾರ್ಮಿಕ ವಲಯಕ್ಕೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯದ ಎಲ್ಲಾ ಶಾಸಕರ ಮನೆ ಎದುರು ಸೆ.24 ರಿಂದ 26ರವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷ ಮೀನಾಕ್ಷಿ ಸುಂದರಂ ತಿಳಿಸಿದರು

ದೊಡ್ಡಬಳ್ಳಾಪುರ: ಕಾರ್ಮಿಕ ವಲಯಕ್ಕೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯದ ಎಲ್ಲಾ ಶಾಸಕರ ಮನೆ ಎದುರು ಸೆ.24 ರಿಂದ 26ರವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷ ಮೀನಾಕ್ಷಿ ಸುಂದರಂ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ವೇತನ ಜಾರಿ ವಿಚಾರದಲ್ಲಿ ಆಗಿರುವ ಸಕಾರಾತ್ಮಕ ಬೆಳವಣಿಗೆ ಆಶಾಭಾವನೆ ಮೂಡಿಸಿದೆ. ರಾಜ್ಯ ಸರ್ಕಾರ 83 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನ ಪರಿಷ್ಕರಿಸಿದೆ. ಹಲವಾರು ಸರ್ಕಾರಿ ಇಲಾಖೆಗಳು ಪರಿಷ್ಕೃತ ವೇತನವನ್ನು ತಕ್ಷಣವೇ ಜಾರಿಗೆ ತಂದವು. ಆದರೆ, ಹಣಕಾಸು ಇಲಾಖೆ ಒಂದು ಅಧಿಕೃತ ಪತ್ರ ಹೊರಡಿಸಿತು. ಕನಿಷ್ಠ ವೇತನವನ್ನು ಪರಿಷ್ಕರಿಸುವ ಅಧಿಸೂಚನೆಗೆ ತನ್ನ ಆಕ್ಷೇಪಣೆಗಳನ್ನು ದಾಖಲಿಸಿತು ಮತ್ತು ಹಣಕಾಸಿನ ಹೊರೆ ಮತ್ತು ಹಣಕಾಸು ಹೂಡಿಕೆಯ ಮೇಲಿನ ಪರಿಣಾಮ ಪರಿಗಣಿಸಿ ಪರಿಷ್ಕೃತ ಕನಿಷ್ಠ ವೇತನದ ಜಾರಿ ಸ್ಥಗಿತಗೊಳಿಸಲು ಶಿಫಾರಸು ಮಾಡಿತು. ರಾಜ್ಯ ಲೆಕ್ಕಪರಿಶೋಧನಾ ಇಲಾಖೆ ಸುತ್ತೋಲೆ ಹೊರಡಿಸಿ, ತನ್ನ ಇಲಾಖೆಯಲ್ಲಿನ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಣೆ ಸ್ಥಗಿತಗೊಳಿಸುವಂತೆ ಮತ್ತು ಮುಂದಿನ ಆದೇಶಗಳವರೆಗೆ ಪೂರ್ವ-ಪರಿಷ್ಕೃತ ಹಳೇ ದರಗಳಲ್ಲಿ ಮಾತ್ರ ವೇತನ ಪಾವತಿಸುವಂತೆ ನಿರ್ದೇಶಿಸಿತು ಎಂದರು.

ಅದೇ ರೀತಿ, ಪೌರಾಡಳಿತ ನಿರ್ದೇಶನಾಲಯ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಹೊರಗುತ್ತಿಗೆ ನೌಕರರಿಗೆ ಹಳೆಯ ವೇತನ ಮಾತ್ರ ಪಾವತಿಸುವಂತೆ ನಿರ್ದೇಶಿಸಿತು. ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಎಲ್ಲಾ ಗ್ರಾಪಂಗಳು ಹಣಕಾಸು ಇಲಾಖೆಯಿಂದ ಮುಂದಿನ ಆದೇಶಗಳವರೆಗೆ ಪೂರ್ವ-ಪರಿಷ್ಕೃತ ಹಳೆಯ ವೇತನ ಮಾತ್ರ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಿದೆ. ಈ ಸುತ್ತೋಲೆಗಳು ಕಾನೂನುಬಾಹಿರವಾಗಿದ್ದು ಮತ್ತು ಕಾರ್ಮಿಕರಿಂದ ಪರಿಷ್ಕೃತ ಹೊಸ ಕನಿಷ್ಠ ವೇತನ ಕಸಿದುಕೊಳ್ಳುವುದಾಗಿದೆ ಎಂದು ಆರೋಪಿಸಿದರು.

ಇದರ ವಿರುದ್ದ ಸಿಐಟಿಯು ರಾಜ್ಯ ಸಮಿತಿ ಇತರೆ ಕಾರ್ಮಿಕ ಸಂಘಟನೆಗಳೊಂದಿಗೆ ಸೇರಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿತ್ತು. ಕಳೆದ ಶುಕ್ರವಾರ ವಿಷಯವನ್ನು ವಿಚಾರಣೆಗೆ ತೆಗೆದು ಕೊಂಡ ನ್ಯಾಯಾಲಯ, ಪರಿಷ್ಕೃತ ಕನಿಷ್ಠ ವೇತನ ಪಾವತಿಯನ್ನು ಸ್ಥಗಿತಗೊಳಿಸಿದ ಸುತ್ತೋಲೆಗಳಿಗೆ ತಡೆ ಆಜ್ಞೆ ನೀಡಿ ಮಧ್ಯಂತರ ಆದೇಶವನ್ನು ನೀಡಿದೆ. ಇಂದು ಮತ್ತೆ ವಿಚಾರಣೆ ಮುಂದುವರಿಯಲಿದೆ ಎಂದು ವಿವರಿಸಿದರು.

ಪರಿಷ್ಕೃತ ಕನಿಷ್ಠ ವೇತನ ಜಾರಿ ವಿಚಾರದಲ್ಲಿ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಕಾರ್ಮಿಕರ ಹಿತ ರಕ್ಷಣೆಗಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲ ಮುರಳೀಧರ ಪೇಶ್ವಾ ಸೇರಿದಂತೆ ಎಲ್ಲಾ ವಕೀಲರಿಗೆ ಸಿಐಟಿಯು ರಾಜ್ಯ ಸಮಿತಿ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್‌, ಖಜಾಂಚಿ ಮೋಹನ್‌ಬಾಬು, ಉಪಾಧ್ಯಕ್ಷರಾದ ನಳಿನಾಕ್ಷಿ, ವೀರಣ್ಣ, ಶಂಬಣ್ಣ, ವಿಷಕಂಠ, ಮಂಜುನಾಥ್, ಕಾರ್ಯದರ್ಶಿಗಳಾದ ಸುಮಾ, ಮಧು, ವಿಶ್ವನಾಥ್, ಅನಿಲ್‌ ಗುಪ್ತ, ವೆಂಕಟೇಶ್‌ ಉಪಸ್ಥಿತರಿದ್ದರು.

ಬಾಕ್ಸ್‌..........

ಶಾಸಕರ ಕಚೇರಿ, ಮನೆ ಮುಂದೆ ಪ್ರತಿಭಟನೆ

ಸೆ.24ರಿಂದ 26ರವರೆಗೆ ರಾಜ್ಯದ ಎಲ್ಲಾ ಶಾಸಕರ ಕಚೇರಿ, ಮನೆ ಮುಂದೆ ಪ್ರತಿಭಟನೆ ನಡೆಸುವ ಮೂಲಕ, ಕನಿಷ್ಠ ವೇತನದ ಜಾರಿಗೆ ಒತ್ತಾಯಿಸಲು ಸಿಐಟಿಯು ತೀರ್ಮಾನಿಸಿದೆ. ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆಗಳು ನಡೆಯಲಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಶ್ರಮಜೀವಿಗಳ ಪಾಲಿಗೆ ಗ್ಯಾರಂಟಿ ಸರ್ಕಾರವಾಗಿ ಉಳಿದಿಲ್ಲ ಎಂದು ಆರೋಪಿಸಿದರು.

20ಕೆಡಿಬಿಪಿ4-

ದೊಡ್ಡಬಳ್ಳಾಪುರದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.