ಕಾರ್ಖಾನೆಯ ಪ್ರಗತಿ ಸಾಧಿಸಲು ಕಾರ್ಮಿಕರ ಆರೋಗ್ಯ ಮುಖ್ಯ : ಸಂಸದ ಅಣ್ಣಾ ಸಾಹೇಬ ಜೊಲ್ಲೆ

| Published : Jul 27 2024, 01:03 AM IST / Updated: Jul 27 2024, 11:19 AM IST

ಸಾರಾಂಶ

ನಿಪ್ಪಾಣಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಶ್ರೀ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕನ್ಹೇರಿ ವತಿಯಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

 ಚಿಕ್ಕೋಡಿ :  ನಿಪ್ಪಾಣಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಕಾರ್ಮಿಕರ ಆರೋಗ್ಯದ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಕಾರ್ಮಿಕರು ಕಾರ್ಖಾನೆಯ ಬೆನ್ನೆಲುಬು, ಹಾಗಾಗಿ ಕಾರ್ಖಾನೆಯ ಪ್ರಗತಿಗೆ ಕಾರ್ಮಿಕರ ಆರೋಗ್ಯ ಮುಖ್ಯ ಎಂದು ಕಾರ್ಖಾನೆ ಮಾರ್ಗದರ್ಶಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ತಾಲೂಕಿನ ನಿಪ್ಪಾಣಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಶ್ರೀ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕನ್ಹೇರಿ ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕನ್ಹೇರಿ ವತಿಯಿಂದ ಜುಲೈ 24 ರಿಂದ 26ರವರೆಗೆ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯಲಿದೆ.

ಕಾರ್ಮಿಕರು, ರೈತರು ಹಾಗೂ ಆಡಳಿತ ಮಂಡಳಿಯ ಸರಿಯಾದ ಯೋಜನೆಗಳಿಂದ ಕಾರ್ಖಾನೆಯ ಪ್ರಗತಿಯಾಗಿದೆ. ಕಾರ್ಖಾನೆಯಲ್ಲಿ ಪೂರ್ವ ಹಂಗಾಮಿನ ಕಾಮಗಾರಿ ನಡೆಯುತ್ತಿದ್ದು, ಈ ಬಾರಿಯ ಹಂಗಾಮನ್ನು ಯಾವುದೇ ಕಡಿತವಿಲ್ಲದೆ ಯಶಸ್ವಿಗೊಳಿಸಲು ಕಾರ್ಮಿಕರು ಸಿದ್ಧತೆ ಮಾಡಿಕೊಳ್ಳಬೇಕು. ದಿನದಿಂದ ದಿನಕ್ಕೆ ಕಾರ್ಖಾನೆ ಪ್ರಗತಿ ಮುಂದುವರೆಸುತ್ತ ಭವಿಷ್ಯದಲ್ಲಿ 15000 ಟನ್ ಸಾಮರ್ಥ್ಯದೊಂದಿಗೆ ಕಬ್ಬು ನುರಿಸುವ ಮತ್ತು 500 ಕೆಎಲ್‌ಪಿಡಿ ಎಥೆನಾಲ್ ಉತ್ಪಾದನಾ ಮೈಲಿಗಲ್ಲನ್ನು ತಲುಪುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಕಾರ್ಖಾನೆಯ ಪ್ರಗತಿಗೆ ಕಾರ್ಮಿಕರು ಮುತುವರ್ಜಿ ವಹಿಸಬೇಕು, ಏನೇ ಸಮಸ್ಯೆಗಳಿದ್ದರೂ ಪರಿಹರಿಸಿ, ಅವರಿಗೆ ಉತ್ತಮ ಸೌಲಭ್ಯ ನೀಡಲಾಗುವುದು. ಕಾರ್ಖಾನೆಯ ಸ್ಥಿತಿ ಸುಧಾರಿಸುತ್ತಿದ್ದಂತೆ ಅವರಿಗೂ ಉತ್ತಮ ಸಂಭಾವನೆ ಸಿಗಲಿದೆ. ಕಾರ್ಖಾನೆಯ ಅಭಿವೃದ್ಧಿಗೆ ಎಲ್ಲರೂ ಸಮತೋಲಿತ ಪ್ರಯತ್ನ ಮಾಡಬೇಕು, ಉತ್ತಮ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುವುದು ಎಂದರು.

ಅಧ್ಯಕ್ಷ ಎಂ.ಪಿ.ಪಾಟೀಲ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು ದುಶ್ಚಟಗಳಿಂದ ದೂರವಿರಬೇಕು. ಕಾರ್ಖಾನೆ ಹಾಗೂ ಶಿಬಿರದ ವತಿಯಿಂದ ನೀಡಲಾಗುವ ಆರೋಗ್ಯ ವಿಮೆಯ ಸದುಪಯೋಗ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ಸುಹಾಸ ಗುಗೆ, ಕಾರ್ಮಿಕ ಪ್ರತಿನಿಧಿ ರಾಜು ಖಂದಾರೆ, ಪ್ರಧಾನ ವ್ಯವಸ್ಥಾಪಕ ಕೇಪಣ್ಣ ಗಿಜವನೆ, ರೋಹಿತ ಪರೀಟ ಮಾತನಾಡಿದರು. ಡಾ. ಶಂತನು ಪಾಲಕರ ಹೃದ್ರೋಗದ ಕುರಿತು ಕಾರ್ಮಿಕರಿಗೆ ಮಾರ್ಗದರ್ಶನ ನೀಡಿದರು.

ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ರಮೇಶ ಪಾಟೀಲ, ವೈಶಾಲಿ ನಿಕಾಡೆ, ಸುನೀಲ ಪಾಟೀಲ ಹಾಗೂ ಕಾರ್ಖಾನೆ ಇಲಾಖಾ ಮುಖ್ಯಸ್ಥರು ಹಾಗೂ ಸಿದ್ಧಗಿರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಮುಖ್ಯ ಕೃಷಿ ಅಧಿಕಾರಿ ನಾಮದೇವ ಬನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಶ್ರೀಕಾಂತ ಬನ್ನೆ ಸ್ವಾಗತಿಸಿದರು. ಸಂಚಾಲಕ ಜಯವಂತ ಭಾಟಲೆ ವಂದಿಸಿದರು.