ಸಾರಾಂಶ
ಕಳೆದ ೩೦- ೪೦ ವರ್ಷಗಳಿಂದ ಬಿಇಎಂಎಲ್ ಕಾರ್ಖಾನೆ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ಆದರೆ ಬಿಇಎಂಎಲ್ ಆಡಳಿತ ಮಂಡಳಿ ಕಾಯಂ ನೌಕರರು ಹಾಗೂ ದಿನಗೂಲಿ ಆಧಾರದ ಮೇರೆಗೆ ದುಡಿಯುತ್ತಿರುವ ನಮ್ಮ ನಡುವೆಯೇ ತಾರತಮ್ಯ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೆಜಿಎಫ್
೬೦ ವರ್ಷಗಳ ಸವಿ ನೆನೆಪಿಗಾಗಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ನೌಕರರಿಗೆ ನೀಡಲಾಗುವ ಗಿಫ್ಟ್‌ನಲ್ಲೂ ಕಾಯಂ ಹಾಗೂ ದಿನಗೂಲಿ ನೌಕರರ ಮಧ್ಯೆ ತಾರತಮ್ಯವನ್ನು ಬಿಇಎಂಎಲ್ ಆಡಳಿತ ಮಾಡುತ್ತಿದೆ. ಎಲ್ಲಾ ಕಾರ್ಮಿಕರನ್ನೂ ಒಂದೇ ರೀತಿ ನೋಡಬೇಕು, ಇಲ್ಲದಿದ್ದರೆ ಬಿಇಎಂಎಲ್ ಆಡಳಿತ ಮಂಡಳಿ ವಿರುದ್ಧ ಹೋರಾಟವನ್ನು ಮಾಡಲಾಗುವುದೆಂದು ದಿನಗೂಲಿ ನೌಕರರು ಎಚ್ಚರಿಕೆ ನೀಡಿದರು.ಬಿಇಎಂಎಲ್ ಸ್ಟಾರ್ ಕಾಂಟ್ರ್ಯಾಕ್ಟ್ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೩೦- ೪೦ ವರ್ಷಗಳಿಂದ ಬಿಇಎಂಎಲ್ ಕಾರ್ಖಾನೆ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ಆದರೆ ಬಿಇಎಂಎಲ್ ಆಡಳಿತ ಮಂಡಳಿ ಕಾಯಂ ನೌಕರರು ಹಾಗೂ ದಿನಗೂಲಿ ಆಧಾರದ ಮೇರೆಗೆ ದುಡಿಯುತ್ತಿರುವ ನಮ್ಮ ನಡುವೆಯೇ ತಾರತಮ್ಯ ಮಾಡುತ್ತಿದ್ದಾರೆ, ಇದು ಯಾವ ನ್ಯಾಯ? ಕಳೆದ ೬೦ ವರ್ಷಗಳ ಇತಿಹಾಸದಲ್ಲಿ ಸಾವಿರಾರು ಕಾಂಟ್ರ್ಯಾಕ್ಟ್ ನೌಕರರು ಒಂದು ಪೈಸೆ ಪಡೆಯದೇ ನಿವೃತ್ತಿಗೊಂಡಿದ್ದಾರೆ ಎಂದು ತಿಳಿಸಿದರು.
ಬೆಮೆಲ್ ಕಾರ್ಖಾನೆಯಿಂದ ನಮಗೆ ಯಾವುದೇ ಸಮರ್ಪಕ ಸೌಲತ್ತುಗಳನ್ನು ನೀಡುತ್ತಿಲ್ಲ, ನೌಕರರಿಗೆ ಸಮಾನ ವೇತನವನ್ನು ನೀಡಬೇಕು ಮತ್ತು ಕಾಂಟ್ರ್ಯಾಕ್ಟ್ ಲೇಬರ್‌ಗಳನ್ನು ಕಾಯಂಗೊಳಿಸಬೇಕು ಎಂದು ಹೋರಾಟ ಮಾಡಿಕೊಂಡೇ ಬರುತ್ತಿದ್ದೇವೆ. ಬಿಇಎಂಎಲ್ ಕಾರ್ಖಾನೆ ಪ್ರಾರಂಭವಾಗಿ ೬೦ ವರ್ಷ ಪೂರ್ಣಗೊಂಡಿರುವ ನೆನೆಪಿಗಾಗಿ ಎಲ್ಲಾ ಕಾರ್ಮಿಕರಿಗೂ ಉಡುಗೂರೆ ನೀಡುವುದಾಗಿ ನೌಕರರಿಗೆ ಭರವಸೆ ನೀಡಿತ್ತು, ಬಿಇಎಂಎಲ್ ಆಡಳಿತ ಮಂಡಳಿಯೊಂದಿಗೆ ನಮ್ಮ ಪ್ರತಿನಿಧಿಗಳು ಚರ್ಚೆ ನಡೆಸಿದಾಗ ನಿಮಗೂ ಸಹ ಉಡುಗೊರೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು, ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಯಂ ಕಾರ್ಮಿಕರಿಗೆ ೮ ಗ್ರಾಂ ಚಿನ್ನದ ಉಡುಗೊರೆಯಾಗಿ ನೀಡುವುದಾಗಿ ಬಹಿರಂಗಗೊಂಡಿದ್ದು, ಇದರ ಸತ್ಯಾಸತ್ಯತೆ ದೃಢಪಡಿಸಿಲ್ಲ. ಆದ್ದರಿಂದ ಕಾಯಂ ಹಾಗೂ ಕಾಂಟ್ರ್ಯಾಕ್ಟ್ ಲೇಬರ್‌ಗಳಿಗೂ ಸಮಾನ ಉಡುಗೊರೆ ನೀಡಬೇಕು ಎಂದು ಪ್ರಥಮ ಹೋರಾಟವಾಗಿ ಕೆಜಿಎಫ್ ಕಾಂಪ್ಲೆಕ್ಸ್, ಬೆಂಗಳೂರು ಕಾಂಪ್ಲೆಕ್ಸ್, ಮೈಸೂರು ಕಾಂಪ್ಲೆಕ್ಸ್ ಕಾರ್ಖಾನೆಯೊಳಗೆ ನಮಗೆ ನೀಡಲಾದ ತಿಂಡಿ ನಿರಾಕರಿಸಿದ್ದೇವೆ ಮತ್ತು ಸಿಹಿ ಬಾಕ್ಸ್‌ನ್ನು ನಿರಾಕರಿಸಿದ್ದೇವೆ. ಮುಂದೆ ಎಲ್ಲ ಸಂಘಟನೆಗಳೂ ಜೊತೆಗೂಡಿ ಮಾತುಕತೆ ನಡೆಸಿ ಬೃಹತ್ ಹೋರಾಟ ಕೈಗೊಳ್ಳುತ್ತೇವೆ ಎಂದು ಹೇಳಿದರು.ಉಪಾಧ್ಯಕ್ಷ ವೇಲನ್, ಸರವಣನ್, ಶ್ರೀನಿವಾಸನ್, ರಾಜನ್, ಚಂದ್ರಕುಮಾರ, ಎಂ.ರಾಜನ್, ಸತ್ಯವೇಲು, ಶ್ರೀ ಶಿವಕುಮಾರ ಇದ್ದರು.