ಕನಕಗಿರಿ: ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ಪಿಡಿಒ ಬಸವರಾಜ ಸಂಕನಾಳ ಹೇಳಿದರು.

ಅವರು ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಬಂಕಾಪುರ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ದೊಡ್ಡದಿದೆ. ಕಾರ್ಮಿಕರು ಇಲ್ಲದ ದೇಶ ಊಹಿಸಲು ಸಾಧ್ಯವಿಲ್ಲ ಎಂದ ಅವರು, ನರೇಗಾ ಯೋಜನೆಯಡಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೂ ಮೇ 1ರ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯ ತಿಳಿಸಿ ಕಾರ್ಮಿಕರ ಸ್ಮರಿಸುವುದಕ್ಕಾಗಿಯೇ ಜಗತ್ತಿನಾದ್ಯಂತ ಈ ದಿನ ಆಚರಿಸಲಾಗುತ್ತಿದೆ ಎಂದರು.

ನರೇಗಾ ಯೋಜನೆಯಡಿ ಕೈಗೊಳ್ಳುವ ಸಾಮೂಹಿಕ ಕಾಮಗಾರಿಗಳಿಗೆ ಎನ್ಎಂಎಂಎಸ್ ಹಾಜರಾತಿ ಮೂಲಕ ವೈಯಕ್ತಿಕ ಪೋಟೋ ತೆಗೆದುಕೊಳ್ಳಲಾಗುತ್ತಿದೆ. ಕೆಲಸಕ್ಕೆ ಬರುವ ಪ್ರತಿಯೊಬ್ಬರೂ ಪೋಟೋ ತೆಗೆಸಿಕೊಂಡಲ್ಲಿ ವೇತನ ಸಮಸ್ಯೆ ಬರುವುದಿಲ್ಲ ಎಂದರಲ್ಲದೇ ಜತೆಗೆ ಯೋಜನೆಯಲ್ಲಿ ಆದಂತಹ ಹೊಸ ಬದಲಾವಣೆ ಹಾಗೂ ಹಾಜರಾತಿ ಕುರಿತು ಮಾಹಿತಿ ತಿಳಿಸಿದರು.

ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ೨೦೨೫-೨೬ನೇ ಸಾಲಿನ ನರೇಗಾ ಯೋಜನೆಯಡಿ ನೂರು ದಿನ ಕೆಲಸ ಪೂರೈಸಿದ ಹಿರಿಯ ಕೂಲಿಕಾರ ನಿಂಗಪ್ಪ ಮುರಡಿ, ನಾಗಪ್ಪ, ಮರಿಯಮ್ಮ,ಮಲಿಯಮ್ಮ, ಅಯ್ಯಪ್ಪ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಮನೂರ, ನಾಗಪ್ಪ, ಮಂಜುನಾಥ ಗೌಡ್ರ, ನಾಗೇಶ, ಚಾಂದಪಾಷಾ, ಗ್ರಾಪಂ ಡಿಇಒ ಪಾಮಣ್ಣ, ಕಾಯಕ ಮಿತ್ರೆ ಸುನೀತಾ ಸೇರಿ ಇತರರಿದ್ದರು.