ಕನಕಗಿರಿ: ಸೈಬರ್ ಕ್ರೈಂ ಅಪರಾಧ ಹೆಚ್ಚಾಗಿ ನಡೆಯುತ್ತಿದ್ದು, ಯುವ ಸಮೂಹ ಎಚ್ಚೆತ್ತುಕೊಳ್ಳಬೇಕು ಎಂದು ಆರಕ್ಷಕ ನಿರೀಕ್ಷಕ ವಿ.ನಾರಾಯಣ ಹೇಳಿದರು.

ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸಪ್ರದ ಕಾಲೇಜಿನಲ್ಲಿ ಸ್ಥಳೀಯ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡಿದ್ದ ಸೈಬರ್ ಕ್ರೈಂ ಜಾಗೃತಿ ಮತ್ತು ಮಾದಕ ವಸ್ತುಗಳ ದುರುಪಯೋಗ ಹಾಗೂ ಕಳ್ಳ ಸಾಗಾಣಿಕೆ ತಡೆಗಟ್ಟುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಏರುತ್ತಲಿವೆ. ಆನ್‌ಲೈನ್ ವಂಚನೆ, ಫಿಶಿಂಗ್, ಮತ್ತು ಡೇಟಾ ಕಳ್ಳತನದಿಂದ ಪಾರಾಗಲು ಪ್ರತಿಯೊಬ್ಬರಲ್ಲಿ ಜಾಗೃತಿ ಅಗತ್ಯವಾಗಿದೆ. ಅನಾಮಧೇಯ ಲಿಂಕ್‌ ಕ್ಲಿಕ್ ಮಾಡದಿರುವುದು, ಪ್ರಬಲ ಪಾಸ್‌ವರ್ಡ್‌ ಬಳಸುವುದು ಮತ್ತು ಒಟಿಪಿ (OTP) ಯಾರೊಂದಿಗೂ ಹಂಚಿಕೊಳ್ಳಬಾರದು. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಇನ್ನೂ ಹದಿಹರೆಯದ ವಯಸ್ಸಿನವರೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಸರಿ-ತಪ್ಪು ಅರ್ಥ ಮಾಡಿಕೊಳ್ಳಬೇಕಾದ ವಯಸ್ಸಿನಲ್ಲಿ ಸರಿಯಾದ ಮಾರ್ಗದರ್ಶನ ಸಿಗದಿದ್ದರೆ ಅಂತವರು ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಮಾದಕ ವಸ್ತುಗಳ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯ ಮಾತ್ರವಲ್ಲ ಇಡೀ ಕುಟುಂಬವೂ ಬೀದಿ ಪಾಲಾಗಲಿದೆ. ಯುವ ಜನತೆ ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆಯು ದೇಶದ ಭದ್ರತೆಗೆ ದೊಡ್ಡ ಸವಾಲಾಗಿದ್ದು, ಇದನ್ನು ತಡೆಯಲು ಸಮುದಾಯದ ಸಹಭಾಗಿತ್ವ ಅಗತ್ಯವಿದೆ. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಾದಕ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಮಾದಕ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಜರಂಗಬಲಿ ಮಾತನಾಡಿ, ಮಾದಕ ವ್ಯಸನಗಳಿಗೆ ಬಲಿಯಾಗುವುದು ಅಥವಾ ಸಮಾಜದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ನಮ್ಮ ಕಾಲ‌ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ. ಹದಿಹರೆಯದ ವಯಸ್ಸಿನಲ್ಲಿ ಮನಸ್ಸು ಚಂಚಲವಾಗಿರುತ್ತದೆ. ಈ ಹಂತದಲ್ಲಿಯೇ ಯುವಕರು ಹೆಚ್ಚಾಗಿ ದಾರಿ ತಪ್ಪುವುದು. ಜೀವನದಲ್ಲಿ ಶಿಸ್ತು ಹಾಗೂ ಆದರ್ಶ ರೂಢಿಕೊಳ್ಳುವ ಜತೆಗೆ ಆತ್ಮವಂಚನೆ ಮಾಡಿಕೊಳ್ಳದೆ ಬದುಕುವ ಕ್ರಮವು ನಮ್ಮನ್ನು ಒಬ್ಬ ಪ್ರಜ್ಞಾವಂತ ನಾಗರಿಕನನ್ನಾಗಿ ಮಾಡುತ್ತದೆ. ಅದಕ್ಕಾಗಿ ಯುವ ಸಮೂಹ ದುಶ್ವಟ ಹಾಗೂ ಸೈಬರ್ ಕ್ರೈಂ ಅಪರಾಧಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.


ಈ ವೇಳೆ ಪ್ರಾಧ್ಯಾಪಕಿ ಲಲಿತಾ ಕಿನ್ನಾಳ್, ರಕ್ಷಿತ್ ಎ, ವಿರೇಶ ಕೆಂಗಲ್, ಸರ್ವ ಮಂಗಳಮ್ಮ, ಉಪನ್ಯಾಸಕ ವಿಜಯ್ ಸರೋದೆ, ಶರಣಪ್ಪ ಸಾಸಲಮರಿ, ಅಂದಿಗೇಲಪ್ಪ, ರಮೇಶ ಗುರಿಕಾರ, ಪೊಲೀಸ್ ಇಲಾಖೆಯ ಬೈಲಪ್ಪ ಸೇರಿದಂತೆ ಇತರರು ಇದ್ದರು. ಇಂಗ್ಲೀಷ್ ಉಪನ್ಯಾಸಕ ಬಾಲಪ್ಪ ಕುರಿ ನಿರೂಪಿಸಿದರು.