ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಜಿಲ್ಲೆಯಲ್ಲೂ ಮಳೆಯ ಕೊರತೆಯಿಂದಾಗಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಂದ ಬಲವಂತ ಹಾಗೂ ಒತ್ತಾಯ ಪೂರ್ವಕವಾಗಿ ಸಾಲ ವಸೂಲಾತಿಯನ್ನು ಸಹಕಾರ ಸಂಘಗಳು ಸೇರಿದಂತೆ ಯಾವುದೇ ಬ್ಯಾಂಕ್, ಹಣಕಾಸು ಸಂಸ್ಥೆಗಳು ಮಾಡಬಾರದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.

- ಸಾಲ ವಸೂಲಾತಿ ಹೆಸರಲ್ಲಿ ಕಿರುಕುಳ ನೀಡಿದರೆ ಕಠಿಣ ಕ್ರಮಕ್ಕೆ ಡಿಸಿಗೆ ಸೂಚನೆ: ಸಚಿವ ಕೆ.ಎಸ್.ಬಸವಂತಪ್ಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಜಿಲ್ಲೆಯಲ್ಲೂ ಮಳೆಯ ಕೊರತೆಯಿಂದಾಗಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಂದ ಬಲವಂತ ಹಾಗೂ ಒತ್ತಾಯ ಪೂರ್ವಕವಾಗಿ ಸಾಲ ವಸೂಲಾತಿಯನ್ನು ಸಹಕಾರ ಸಂಘಗಳು ಸೇರಿದಂತೆ ಯಾವುದೇ ಬ್ಯಾಂಕ್, ಹಣಕಾಸು ಸಂಸ್ಥೆಗಳು ಮಾಡಬಾರದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನ ಡಾ.ಸದ್ಯೋಜಾತ ಸ್ವಾಮಿಗಳ ಹಿರೇಮಠದಲ್ಲಿ ಶನಿವಾರ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸೇರಿದಂತೆ ವಿವಿಧ ಸಹಕಾರ ಸಂಘ-ಸಂಸ್ಥೆಗಳಿಂದ ಆಯೋಜಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು. ಈಗಿನ ಬರ ಪರಿಸ್ಥಿತಿಯಲ್ಲಿ ರೈತರಿಂದ ಬಲವಂತ, ಒತ್ತಾಯಪೂರ್ವಕ ಸಾಲ ವಸೂಲಾತಿ ಬೇಡ ಎಂದರು.

ರೈತರಿಗೆ ಆರ್ಥಿಕ ನೆರವನ್ನು ಕಲ್ಪಿಸಿ ಸ್ವಾವಲಂಬಿಯಾಗಿಸಲು ಸಹಕಾರ ಸಂಘಗಳು ಸ್ಥಾಪನೆಯಾಗಿವೆ. ಆದರೆ, ಮಳೆ ಇಲ್ಲದೇ ಬೆಳೆ ಕೈಕೊಟ್ಟಿದ್ದು, ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳೂ ಬತ್ತುತ್ತಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಸಹಕಾರ ಸಂಘಗಳು ಮಾನವೀಯತೆ ತೋರಬೇಕು. ಕನಿಷ್ಠ ಈ ವರ್ಷವಾದರೂ ರೈತರಿಂದ ಬಲವಂತವಾಗಿ ಸಾಲ ಮರುಪಾವತಿ ಮಾಡಿಸಿಕೊಳ್ಳಬಾರದು ಎಂದು ತಿಳಿಸಿದರು.

ಸಾಲ ವಸೂಲಾತಿ ಹೆಸರಲ್ಲಿ ರೈತರಿಗೆ ಕಿರುಕುಳ ನೀಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಖಾಸಗಿ ಹಣಕಾಸು ಸಂಸ್ಥೆಗಳು ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಸಂಘಗಳ ಹೆಸರಲ್ಲಿ ಸಾಲ ನೀಡಿ, ಹೆಚ್ಚಿನ ಆರ್ಥಿಕ ಹೊರೆ ಹೇರಲಾಗುತ್ತಿದೆ. ಗೃಹ ಸಾಲ ಪಡೆದು ಮನೆ ನಿರ್ಮಿಸಿಕೊಂಡ ಹಲವರು ಸಾಲದ ಒತ್ತಡದಿಂದ ಗ್ರಾಮಗಳನ್ನೇ ತೊರೆದ ನಿದರ್ಶನಗಳಿವೆ. ಇಂತಹ ಹಣಕಾಸು ಸಂಸ್ಥೆಗಳ ಸುಲಿಗೆಗೆ ಕಡಿವಾಣ ಹಾಕುವ ಜೊತೆಗೆ ಸಮಾಜದ ಕಟ್ಟಕಡೇ ವ್ಯಕ್ತಿಗೂ ಸಾಲ ಸೌಲಭ್ಯ ಕಲ್ಪಿಸಲು ಸಹಕಾರ ಸಂಘಗಳು ಕಾರ್ಯ ನಿರ್ವಹಿಸಲಿ ಎಂದು ಬಸವಂತಪ್ಪ ತಿಳಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಬರಗಾಲದಲ್ಲಿ ರೈತರಿಂದ ಸಾಲ ವಸೂಲಿ ಮಾಡುವಾಗ ಸಹಕಾರ ಸಂಘಗಳು ತಾಯಿಯ ಮನಸ್ಸಿನಿಂದ ವರ್ತಿಸಬೇಕು. 2001ರಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆರಂಭವಾದಾಗ ಅಂದಿನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ 30 ಕೋಟಿ ರು. ಅನುದಾನ ಕೊಡಿಸಿದ್ದರು. ರೈತರ ಹಿತದೃಷ್ಟಿಯಿಂದ ಹೊಸ ಯೋಜನೆಗಳನ್ನು ರೂಪಿಸಬೇಕು. ರೈತರು, ಮಹಿಳೆಯರು ಹಾಗೂ ಯುವಜನರಿಗೆ ಪ್ರೋತ್ಸಾಹಿಸುವ ಯೋಜನೆ ಜೊತೆಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಕಲ್ಪಿಸಿ ಎಂದರು.

ಕೇಂದ್ರ ಸರ್ಕಾರ ನಬಾರ್ಡ್‌ನಡಿ ಕರ್ನಾಟಕಕ್ಕೆ ನೀಡುತ್ತಿದ್ದ ಅನುದಾನದಲ್ಲಿ ಶೇ.58 ಕಡಿತ ಮಾಡಿದೆ. ಇದರಿಂದ ರೈತರಿಗೆ ಸಾಲ ನೀಡಲು ತೊಂದರೆಯಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಾಜ್ಯಕ್ಕೆ ಬರಬೇಕಾದ ₹2,186 ಕೋಟಿ ತಡೆಹಿಡಿಯಲಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಮನವಿ ಮಾಡಿದ್ದ ₹22,400 ಕೋಟಿ ಬರ ಪರಿಹಾರವನ್ನೂ ಕೇಂದ್ರವು ನೀಡಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ₹1 ತೆರಿಗೆ ರೂಪದಲ್ಲಿ ಪಾವತಿಸಿದರೆ, ಪ್ರತಿಯಾಗಿ ಕೇವಲ 15 ಪೈಸೆ ಮಾತ್ರ ವಾಪಸ್ಸಾಗುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ಕೂ ಹಿನ್ನಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಕೇಂದ್ರದಲ್ಲಿ ಸಹಕಾರ ಸಚಿವಾಲಯ ಸ್ಥಾಪನೆಯಾದ ಹಿನ್ನೆಲೆ ಜೂ.29ರಿಂದ ಜು.6 ರವರೆಗೆ ಸಹಕಾರ ಸಪ್ತಾಹ ಆಚರಿಸುವಂತೆ ಸೂಚಿಸಿರುವುದು ಸರಿಯಲ್ಲ. ಹೆಸರು ಅಥವಾ ದಿನಾಂಕ ಬದಲಾವಣೆಯಿಂದ ಸಹಕಾರ ಚಳವಳಿಯ ಉದ್ದೇಶವಂತೂ ಈಡೇರುವುದಿಲ್ಲ. ಹಿಂದಿನಿಂದಲೂ ನಮ್ಮಲ್ಲಿ ಹಿರಿಯರು ಆಚರಿಸಿಕೊಂಡು ಬಂದಂತೆ ನ.14ರಿಂದಲೇ ಸಹಕಾರ ಸಪ್ತಾಹ ಆಚರಿಸುವುದು ಸೂಕ್ತ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 1,541 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎಚ್.ಜಿ.ಮಂಜುಳ ಗಣೇಶ, ಸಹಕಾರ ರತ್ನ ಪುರಸ್ಕೃತ ಶಿವಮೊಗ್ಗದ ಬಿ.ಜಿ. ಬಸವರಾಜಪ್ಪ, ಐಗೂರು ಚಂದ್ರಶೇಖರ, ವೈ.ಬಿ.ಸತೀಶ, ಅಶೋಕ ರಾಯಬಾಗಿ, ಕುಮಾರ, ಡಿ.ಎಸ್.ಸುರೇಂದ್ರ, ಎಚ್.ಬಿ.ಭೂಮೇಶಪ್ಪ, ಬೇತೂರು ಟಿ.ರಾಜಣ್ಣ, ಬಿ.ಕೆ.ಶಿವಕುಮಾರ್, ವಿ.ಮಂಜುನಾಥ, ಎಂ.ಜಿ.ಷಣ್ಮುಖಪ್ಪ, ಎಲ್.ರುದ್ರಾನಾಯ್ಕ, ಎಚ್.ಕೆ. ಪಾಲಾಕ್ಷಪ್ಪ, ಪ್ರಶಾಂತ ವಿ.ವರ್ಣೇಕರ್, ದಾಮ್ಕೋಸ್ ಅಧ್ಯಕ್ಷ ಬಾತಿ ಶಿವಕುಮಾರ, ನಿರ್ಮಲ ಸುಭಾಶ್, ಗಂಗರಾಜ ಇತರರು ಇದ್ದರು.

- - -

-14ಕೆಡಿವಿಜಿ9:

ದಾವಣಗೆರೆಯಲ್ಲಿ ಶನಿವಾರ 73ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸಚಿವ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಜೆ.ಆರ್.ಷಣ್ಮುಖಪ್ಪ, ಸಿರಿಗೆರೆ ರಾಜಣ್ಣ, ಕುಮಾರ ಇತರರು.