ಬಾಲ್ಯದಿಂದಲೂ ಕೊಂಡಜ್ಜಿ ಗ್ರಾಮದೊಂದಿಗೆ ವಿಶೇಷ ಒಡನಾಟ ಹೊಂದಿದ್ದೇನೆ. ಕೊಂಡಜ್ಜಿ ಸೇರಿದಂತೆ ಹರಿಹರ ಕ್ಷೇತ್ರದ ನೀರಾವರಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ.

- ಕೊಂಡಜ್ಜಿಯಲ್ಲಿ ನೂತನ ಸಮುದಾಯ ಭವನ ಉದ್ಘಾಟಿಸಿ ಸಂಸದೆ ಡಾ.ಪ್ರಭಾ ಭರವಸೆ । ದಿ।। ಕೊಂಡಜ್ಜಿ ಬಸಪ್ಪ ಪುಣ್ಯಸ್ಮರಣೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಾಲ್ಯದಿಂದಲೂ ಕೊಂಡಜ್ಜಿ ಗ್ರಾಮದೊಂದಿಗೆ ವಿಶೇಷ ಒಡನಾಟ ಹೊಂದಿದ್ದೇನೆ. ಕೊಂಡಜ್ಜಿ ಸೇರಿದಂತೆ ಹರಿಹರ ಕ್ಷೇತ್ರದ ನೀರಾವರಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ.

ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಶನಿವಾರ ನೂತನವಾಗಿ ನಿರ್ಮಿಸಿದ ಸಮುದಾಯ ಭವನ ಉದ್ಘಾಟಿಸಿ, ದಿವಂಗತ ಕೊಂಡಜ್ಜಿ ಬಸಪ್ಪನವರ 44ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಜನಪ್ರತಿನಿಧಿಗಳು, ಎಲ್ಲ ಪಕ್ಷಗಳ ಮುಖಂಡರ ಸಹಕಾರದಲ್ಲಿ ಪಕ್ಷಾತೀತವಾಗಿ ಹರಿಹರ ತಾಲೂಕಿನ ನೀರಾವರಿ ಸಮಸ್ಯೆ ಪರಿಹರಿಸಲು, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬದ್ಧ ಎಂದರು.

ಹರಿಹರ ಕ್ಷೇತ್ರದ ಜನರ ಬಹುವರ್ಷಗಳ ಬೇಡಿಕೆಯಾದ ಭೈರನಪಾದ ಏತ ನೀರಾವರಿ ಯೋಜನೆ ಹಾಗೂ ಕೊಂಡಜ್ಜಿ ಕೆರೆ ಸೇರಿದಂತೆ ವಿವಿಧ ಕೆರೆಗಳನ್ನು ತುಂಬಿಸುವ ಸುಮಾರು ₹200 ಕೋಟಿ ವೆಚ್ಚದ ಪ್ರಸ್ತಾವಿತ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಲಾಗುವುದು. ಹರಿಹರ ಕ್ಷೇತ್ರದ ಕೊನೆಯ ಭಾಗದ ರೈತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ತಮ್ಮ ಆದ್ಯತೆ ಎಂದರು.

ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೇ, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕಿದೆ. ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರದಲ್ಲಿ, ಪಕ್ಷಾತೀತವಾಗಿ ಒಂದಾಗಿ ಕೆಲಸ ಮಾಡೋಣ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ರಾಜ್ಯ ಪುರಸ್ಕಾರ ಪಡೆದ ಅನುಭವವು ತಮ್ಮ ಜೀವನಕ್ಕೆ ಉತ್ತಮ ಮಾರ್ಗದರ್ಶನ, ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ, ಆತ್ಮವಿಶ್ವಾಸ, ಸಾಮಾಜಿಕ ಜವಾಬ್ದಾರಿ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚ‍ಳವಳಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕೊಂಡಜ್ಜಿಯಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ವೃತ್ತಿ ರಂಗಭೂಮಿ ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ₹3 ಕೋಟಿ ಅನುದಾನ ಮಂಜೂರಾಗಿದ್ದು, ₹1 ಕೋಟಿ ಬಿಡುಗಡೆಯಾಗಿದೆ. ಬಾಕಿ ಅನುದಾನವನ್ನು ಹಂತ ಹಂತವಾಗಿ ಒದಗಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಕಾಮಗಾರಿ, ಬಾಕಿ ಕೆಲಸ ಪೂರ್ಣಗೊಳಿಸುವುದಾಗಿ ಅವರು ಹೇಳಿದರು.

ಅಲ್ಲದೇ, ಕೊಂಡಜ್ಜಿ ಗ್ರಾಮದ ಬಸ್ಸು ನಿಲ್ದಾಣದಿಂದ ಶಾಲೆಗಳು, ಕೆರೆ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಸಂಪರ್ಕ ಕಲ್ಪಿಸಲು 3 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಬೇಕಿದೆ. ಗ್ರಾಮಸ್ಥರು, ವಿದ್ಯಾ ರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲ ಆಗುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಸಿ, ಆದಷ್ಟು ಬೇಗನೆ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಈ ಭಾಗದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಸಂಸದೆ ಡಾ.ಪ್ರಭಾ ತಿಳಿಸಿದರು.

ವಿಜಯ ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ, ವಿಧಾನ ಪರಿಷತ್ತು ಸದಸ್ಯ ಮೋಹನ ಕೊಂಡಜ್ಜಿ, ಹಿರಿಯರಾದ ಷಣ್ಮುಖಪ್ಪ, ಡಾ.ಗುರುಮೂರ್ತಿ, ವೀರಭದ್ರಪ್ಪ, ಯುವ ಮುಖಂಡ ನಿಖಿಲ್ ಕೊಂಡಜ್ಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಜಲ ಸಾಹಸ ಕ್ರೀಡಾ ತರಬೇತುದಾರ ಪ್ರಭು ಕೊಂಡಜ್ಜಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು, ಶಿಕ್ಷಕ-ಶಿಕ್ಷಕಿಯರು, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಇದ್ದರು.

- - -

(ಕೋಟ್‌)

ದಿವಂಗತ ಕೊಂಡಜ್ಜಿ ಬಸಪ್ಪನವರ ಕುಟುಂಬ ತಲೆಮಾರುಗಳಿಂದಲೂ ಸಮಾಜ ಸೇವೆಯಲ್ಲಿ ತೊಡಗಿ, ಶ್ಲಾಘನೀಯ ಕಾರ್ಯಗಳ ಕೈಗೊಳ್ಳುತ್ತಿದೆ. ಇಂತಹ ಸೇವಾ ಪರಂಪರೆ ಮುಂದಿನ ಪೀಳಿಗೆಗೂ ಪ್ರೇರಣೆಯಾಗಬೇಕು. ಕೊಂಡಜ್ಜಿ ಅಂದಾಕ್ಷಣ ಕೊಂಡಜ್ಜಿ ಬಸಪ್ಪನವರು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರಗಳು ಮೊದಲಿಗೆ ನೆನಪಾಗುವಷ್ಟರ ಮಟ್ಟಿಗೆ ಹೆಸರಾಗಿವೆ.

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.

- - -

-14ಕೆಡಿವಿಜಿ1: ಹರಿಹರ ತಾ. ಕೊಂಡಜ್ಜಿಯಲ್ಲಿ ಶನಿವಾರ ನೂತನ ಸಮುದಾಯ ಭವನವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಸಚಿವ ಕೆ.ಎಸ್.ಬಸವಂತಪ್ಪ, ಎಂಎಲ್‌ಸಿ ಮೋಹನ ಕೊಂಡಜ್ಜಿ ಇತರರು ಇದ್ದರು.