ಹೊರಗುತ್ತಿಗೆ ರದ್ದುಗೊಳಿಸಿ ಕಾಯಂ ನೇಮಕಾತಿಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

| Published : Sep 27 2025, 12:00 AM IST

ಹೊರಗುತ್ತಿಗೆ ರದ್ದುಗೊಳಿಸಿ ಕಾಯಂ ನೇಮಕಾತಿಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಹುತೇಕ ಸರ್ಕಾರಿ ಇಲಾಖೆಗಳು, ಕಾರ್ಖಾನೆಗಳು ಗುತ್ತಿಗೆ ಕಾರ್ಮಿಕರ ಶ್ರಮದ ಮೇಲೆಯೇ ಅವಲಂಬಿತವಾಗಿವೆ.

ಬಳ್ಳಾರಿ: ಹೊರಗುತ್ತಿಗೆಯನ್ನು ರದ್ದುಗೊಳಿಸಿ, ಕಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ವಿವಿಧ ಗುತ್ತಿಗೆ ಕಾರ್ಮಿಕ ಸಂಘಗಳ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ಗುತ್ತಿಗೆ ಕಾರ್ಮಿಕರದು ಅತ್ಯಂತ ಸಂಕಷ್ಟದ ಬದುಕಾಗಿದೆ. ಬಹುತೇಕ ಸರ್ಕಾರಿ ಇಲಾಖೆಗಳು, ಕಾರ್ಖಾನೆಗಳು ಗುತ್ತಿಗೆ ಕಾರ್ಮಿಕರ ಶ್ರಮದ ಮೇಲೆಯೇ ಅವಲಂಬಿತವಾಗಿವೆ. ಆದರೂ ಗುತ್ತಿಗೆ ಕಾರ್ಮಿಕರ ಶ್ರಮಕ್ಕೆ ಕವಡೆ ಕಾಸಿನ ಬೆಲೆಯಿಲ್ಲ. ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರ ಕಾರ್ಪೋರೇಟ್ ಮಾಲೀಕರ ಹಿತಾಸಕ್ತಿಗಾಗಿ ಗುತ್ತಿಗೆ-ಹೊತ್ತಿಗೆ ಪದ್ಧತಿ ಜಾರಿಗೆ ತಂದು, ಕಾರ್ಮಿಕರ ಶೋಷಣೆಗೆ ನಾಂದಿ ಹಾಡಿತು. ಕಾಯಂ ಉದ್ಯೋಗಗಳಿಗೆ ತೀಲಾಂಜಲಿ ಇಟ್ಟಿತು. ಇದರಿಂದಾಗಿ ಕಾಯಂ ಸ್ವರೂಪದ ಅತ್ಯಂತ ಅಪಾಯಕಾರಿ ಕೆಲಸದಲ್ಲಿದ್ದರೂ ಕೆಲಸವನ್ನು ಕಾಯಂಗೊಳಿಸಿಲ್ಲ ಎಂದು ತಿಳಿಸಿದರು.

ಜೀವನ ಪೂರ್ತಿ ಒಬ್ಬ ಕಾರ್ಮಿಕ ಜೀತದಂತೆ ಅತ್ಯಂತ ಕನಿಷ್ಠ ಸಂಬಳಕ್ಕೆ ದುಡಿಯಬೇಕಿದೆ. ಬಿಜೆಪಿ ಸರ್ಕಾರ ಇದೇ ನೀತಿಯನ್ನು ಮುಂದುವರೆಸುತ್ತಾ, ಕಾರ್ಮಿಕ ಪರ ಕಾನೂನುಗಳನ್ನು ಮಾಲೀಕರಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಿದೆ. ಬಿಜೆಪಿ ಸರ್ಕಾರ ತಂದಿರುವ 4 ಲೇಬರ್ ಕೋಡ್ ಗಳು ಕಾರ್ಮಿಕರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿಸುತ್ತದೆ. ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ ಹೊರಗುತ್ತಿಗೆ ಪದ್ಧತಿ ಅಂತೂ ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರು ಹೆಚ್ಚೆಚ್ಚು ಸಂಘಟಿತರಾಗಬೇಕು. ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಧ್ವನಿಯೆತ್ತಬೇಕು ಎಂದು ಕರೆ ನೀಡಿದರು.

ಗುತ್ತಿಗೆದಾರರ ಶೋಷಣೆ ವಿರುದ್ಧ ನಿರಂತರ ಹೋರಾಟದ ಒತ್ತಡದ ಫಲವಾಗಿ ವಿವಿಧೋದ್ದೇಶ ಕಾರ್ಮಿಕರ ಸಂಘ ರಚನೆಗೆ ಸರ್ಕಾರ ಮುಂದಾಗಿದೆ. ಬಳ್ಳಾರಿಯಲ್ಲಿ 3500ಕ್ಕೂ ಹೆಚ್ಚು ಕಾರ್ಮಿಕರು ಈ ಸಂಘದ ಸದಸ್ಯರಾಗಿದ್ದಾರೆ. ಸಂಘ ರಚನೆಗೆ ಸರ್ಕಾರದ ವಿಳಂಬ ಸರಿಯಲ್ಲ. ಗುತ್ತಿಗೆದಾರರ ಒತ್ತಡಕ್ಕೆ ಸರ್ಕಾರ ಒಳಗಾಗಿದೆಯೇ ಎಂಬ ಅನುಮಾನ ಮೂಡುವಂತಾಗಿದೆ. ಪರಿಷ್ಕೃತ ಕನಿಷ್ಠ ವೇತನ ಹೆಚ್ಚಳದ ಅಧಿಸೂಚನೆ ಇನ್ನೂವರೆಗೆ ಜಾರಿ ಆಗಲಿಲ್ಲ. ಇಲ್ಲಿ ಕೂಡ ಸರ್ಕಾರ ಕಾರ್ಮಿಕರ ಪರವಾಗಿ ಧೃಡವಾಗಿ ನಿಲ್ಲದೆ ಮಾಲೀಕರ ಹಿತದ ಬಗ್ಗೆ ಯೋಚಿಸುತ್ತಿದೆ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್ ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿದರು. ಕಾರ್ಮಿಕ ಮುಖಂಡರಾದ ಆರ್. ಸೋಮಶೇಖರ್ ಗೌಡ, ಚೇತನ್, ಮುರಳಿ, ಅಶ್ವಿನಿ, ಚಿಟ್ಟೆಮ್ಮ, ಹುಲುಗಪ್ಪ, ಓಬುಳಮ್ಮ, ವೆಂಕಟಲಕ್ಷ್ಮಿ, ಪಾರ್ವತಮ್ಮ, ಲಕ್ಷ್ಮಿ, ಹೊನ್ನೂರ್ ಬೀ, ಜಯಮ್ಮ, ಪುಷ್ಪ, ವೀರಭದ್ರಯ್ಯ ಸ್ವಾಮಿ, ಶಿವಶಂಕರಯ್ಯ, ನಿಂಗಪ್ಪ, ಸ್ವಾಮಿ ಮತ್ತಿತರರು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಗುತ್ತಿಗೆ ನೌಕರರ ಸಂಘ, ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಕರ್ನಾಟಕ ವಿದ್ಯುತ್ ಸರಬರಾಜು ಕಂಪೆನಿಗಳ ಗುತ್ತಿಗೆ ನೌಕರರ ಸಂಘ ಸಹಯೋಗದಲ್ಲಿ ಪ್ರತಿಭಟನೆ ಸಂಘಟಿಸಲಾಗಿತ್ತು.