ಎನ್‌ಎಂಡಿಸಿ ಪೆಲೆಟ್ ಪ್ಲಾಂಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್‌ನ ಗುತ್ತಿಗೆದಾರರು ಕೂಡಲೆ ಕಾರ್ಖಾನೆಯನ್ನು ಪ್ರಾರಂಭಿಸಲು ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸಂಡೂರು: ಎನ್‌ಎಂಡಿಸಿ ಪೆಲೆಟ್ ಪ್ಲಾಂಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್‌ನ ಗುತ್ತಿಗೆದಾರರು ಕೂಡಲೆ ಕಾರ್ಖಾನೆಯನ್ನು ಪ್ರಾರಂಭಿಸಲು ಕ್ರಮ ಕೈಗೊಂಡು, ಈ ಎರಡು ಪ್ಲಾಂಟ್‌ಗಳಲ್ಲಿ ಈ ಹಿಂದೆ ಕೆಲಸ ಮಾಡಿದ ಕಾರ್ಮಿಕರನ್ನೇ ಮುಂದುವರಿಸಬೇಕು. ಅಲ್ಲಿ ವರೆಗೆ ಕನಿಷ್ಟ ವೇತನ ಮತ್ತಿತರ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ಕಾರ್ಮಿಕರು ಸೋಮವಾರ ಸಂಯುಕ್ತ ಗಣಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ತಾಲೂಕಿನ ದೋಣಿಮಲೈನಲ್ಲಿರುವ ಎನ್‌ಎಂಡಿಸಿ ಆಡಳಿತ ಕಚೇರಿ ಮುಂದೆ ಧರಣಿ ನಡೆಸಿದರು.
ಪ್ರತಿಭಟನಾಕಾರರು ಎನ್‌ಎಂಡಿಸಿ ಎಕ್ಸಿಕ್ಯೂಟಿವ್ ಡೈರೆಕ್ಟರ್, ಪೆಲೆಟ್ ಪ್ಲಾಂಟ್ ಪ್ರಾಜೆಕ್ಟ್ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು.ಸಂಯುಕ್ತ ಗಣಿ ಕಾರ್ಮಿಕ ಸಂಘದ ಅಧ್ಯಕ್ಷ ಕೆ. ಸೋಮಶೇಖರ್ ಮಾತನಾಡಿ, ಎನ್‌ಎಂಡಿಸಿ ಪೆಲೆಟ್ ಪ್ಲಾಂಟ್ ಹಾಗೂ ಬೆನಿಫಿಕೇಷನ್ ಪ್ಲಾಂಟ್‌ನ ಗುತ್ತಿಗೆದಾರರ ಟೆಂಡರ್ ಅವಧಿ ನ. 18ಕ್ಕೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಈ ಪ್ಲಾಂಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಕೆಲಸವನ್ನೂ ಕೊನೆಗೊಳಿಸಲಾಗಿದೆ. ಮೂಲ ಮಾಲೀಕರಾದ ಎನ್‌ಎಂಡಿಸಿ ಸಂಸ್ಥೆಯು ಕಾರ್ಮಿಕರಿಗೆ ಸೇವಾ ಭದ್ರತೆ ಖಾತ್ರಿಪಡಿಸದೆ. ಮುಂದಿನ ಗುತ್ತಿಗೆದಾರರು ಬರುವವರೆಗೂ ಕಾಯಬೇಕು ಎಂದು ಹೇಳುತ್ತಿದೆ. ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವ ಯಾವುದೇ ಭರವಸೆಯನ್ನು ನೀಡುತ್ತಿಲ್ಲ. ಇದರಿಂದ ನೂರಾರು ಕಾರ್ಮಿಕರು ಹಾಗೂ ಅವರ ಕುಟುಂಬಗಳು ಬೀದಿಗೆ ಬಂದಿವೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಹೊಸ ಗುತ್ತಿಗೆದಾರರು ಕೂಡಲೆ ಕಾರ್ಖಾನೆ ಆರಂಭಿಸಿ, ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮೂಲ ಮಾಲೀಕರಾದ ಎನ್‌ಎಂಡಿಸಿ ಸಂಸ್ಥೆಯು ಕ್ರಮಕೈಗೊಳ್ಳಬೇಕು. ಅಲ್ಲಿಯವರೆಗೂ ಈಗ ಕೆಲಸದಲ್ಲಿರುವ ಗುತ್ತಿಗೆ ಕಾರ್ಮಿಕರಿಗೆ ಅವರಿಗೆ ನೀಡಬೇಕಾದ ಕನಿಷ್ಠ ವೇತನ, ಪಿಎಫ್ ಮತ್ತಿತರ ಕಾನೂನಾತ್ಮಕ ಸೌಲಭ್ಯ ನೀಡಬೇಕು. ಕೆಲಸಕ್ಕೆ ತೆಗೆದುಕೊಳ್ಳದಿದ್ದಲ್ಲಿ, ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಮೇಟಿ ಮಾತನಾಡಿ, ಬೇಡಿಕೆ ಈಡೇರುವವರೆಗೂ ಕಾರ್ಮಿಕರು ಒಗ್ಗಟ್ಟಾಗಿ ಹಂತ ಹಂತವಾಗಿ ಹೋರಾಟ ರೂಪಿಸಬೇಕು ಎಂದರು.
ಪ್ರತಿಭಟನೆಯ ನೇತೃತ್ವವನ್ನು ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯಾಧ್ಯಕ್ಷ ಎ.ದೇವದಾಸ್ ವಹಿಸಿದ್ದರು. ಸಂಘದ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿದರು. ಮುಖಂಡರಾದ ಸುರೇಶ್, ಹುಲಿಗೇಶ್, ಮಂಜುನಾಥ್, ಸಂತೋಷ್, ನಾಗೇಶ್, ರಾಜಪ್ಪ, ಯರಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.ನ. 28ರಂದು ಹೊಸ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಸಮಸ್ಯೆ ಇತ್ಯಾರ್ಥಪಡಿಸುವುದಾಗಿ ಎನ್‌ಎಂಡಿಸಿ ಅಧಿಕಾರಿಗಳು ಕಾರ್ಮಿಕರಿಗೆ ತಿಳಿಸಿದರು.