ಹರಪನಹಳ್ಳಿ, ಹೂವಿನ ಹಡಗಲಿ, ಕೊಟ್ಟೂರು ಈ ಮೂರು ತಾಲೂಕುಗಳ ಮಧ್ಯ ಭಾಗವಾದ ಹರಪನಹಳ್ಳಿ ನಗರದಲ್ಲಿ ಇಎಸ್‌ಐ ಆಸ್ಪತ್ರೆ ತೆರೆಯಬೇಕು.

ಹರಪನಹಳ್ಳಿ: ತಾಲೂಕಿನಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿಯ ಕಾರ್ಮಿಕರು ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್‌ನಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಿದರು.ಸ್ಥಳೀಯ ಹರಿಹರ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹೊಸಪೇಟೆ ರಸ್ತೆ ಮೂಲಕ ಐ.ಬಿ.ವೃತ್ತಕ್ಕೆ ಆಗಮಿಸಿ ಬಹಿರಂಗ ಸಭೆ ನಡೆಸಿದರು.

ಹರಪನಹಳ್ಳಿ, ಹೂವಿನ ಹಡಗಲಿ, ಕೊಟ್ಟೂರು ಈ ಮೂರು ತಾಲೂಕುಗಳ ಮಧ್ಯ ಭಾಗವಾದ ಹರಪನಹಳ್ಳಿ ನಗರದಲ್ಲಿ ಇಎಸ್‌ಐ ಆಸ್ಪತ್ರೆ ತೆರೆಯಬೇಕು. ಪ್ರತಿಯೊಬ್ಬ ನೋಂದಾಯಿತ ಕಾರ್ಮಿಕರ ಕುಟುಂಬಕ್ಕೆ ನಿವೇಶನ ಸಹಿತ ಮನೆ ಕಟ್ಟಿಸಿಕೊಡಬೇಕು. ತಾಲೂಕಿನಲ್ಲಿ ಇರುವ ಖಾಸಗಿ ಆಸ್ಪತ್ರೆಗಳನ್ನು ಕೂಡಲೇ ಕಾರ್ಮಿಕರ ಇಲಾಖೆಗೆ ನೋಂದಣಿ ಮಾಡಿಕೊಳ್ಳಬೇಕು. ಸರ್ಕಾರದ ಕಿಟ್‌ ನೋಂದಾಯಿತ ಎಲ್ಲ ಕಾರ್ಮಿಕರಿಗೆ ವಿತರಿಸಬೇಕು ಅಥವಾ ಡಿಬಿಟಿ ಮೂಲಕ ಕಿಟ್‌ ಬದಲಾಗಿ ಕಿಟ್‌ ನ ಅಂದಾಜು ಮೊತ್ತ ₹3600ನ್ನು ಕಾರ್ಮಿಕರಿಗೆ ಹಾಕಬೇಕು. ಕಾರ್ಮಿಕರ ಕಾರ್ಡಗಳನ್ನು ಪ್ರತಿ ವರ್ಷ ರಿನಿವಲ್‌ ಮಾಡುವ ಬದಲು 5 ವರ್ಷಕ್ಕೊಮ್ಮೆ ರಿನಿವಲ್‌ ಮಾಡಬೇಕು. ರಿನಿವಲ್‌ ಮಾಡದೇ ಇರುವ ಕಾರ್ಮಿಕ ಅಪಘಾತದ ಮೆಡಿಕಲ್‌ ಭತ್ಯೆಗೆ ಅನುಕೂಲ ಮಾಡಿಕೊಡಬೇಕು ಎಂದರು.

ಬೀಡಿ ಕಾರ್ಮಿಕರಿಗೆ ಪ್ರತಿ ಸಾವಿರ ಬೀಡಿಗೆ ಸಿಗುವ ಕನಿಷ್ಠ ಕೂಲಿ ಸಿಗುವಂತೆ ಸಂಬಂಧಪಟ್ಟ ಬೀಡಿ ಕಂಪನಿಯ ಮಾಲೀಕರ ವಿರುದ್ಧ ಕ್ರಮ ವಹಿಸಿ ಕನಿಷ್ಠ ವೇತನ ಕೊಡಿಸಬೇಕು ಎಂಬ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿದರು.

ಎಐಸಿಸಿಟಿಯು ಜಿಲ್ಲಾದ್ಯಕ್ಷ ಸಂದೇರ ಪರಶುರಾಮ, ಜಿಲ್ಲಾ ಕಾರ್ಯದರ್ಶಿ ಸಂತೋಷ ಗುಳೇದಹಟ್ಟಿ, ನಗರ ಅಧ್ಯಕ್ಷ ಮಹಮದ್‌ರಫೀ, ಹುಲ್ಲಿಕಟ್ಟಿ ಮೈಲಪ್ಪ, ಬಾಲ ಗಂಗಾಧರ, ಇಬ್ರಾಹಿಂ ಸಾಹೇಬ್, ಬಾಗಳಿ ರೇಣುಕಮ್ಮ, ಕಲೀಂ, ರಾಮಣ್ಣ, ಮಂಜು, ಜೋಗಿನ ನಾಗರಾಜ, ಮೋಹನಕುಮಾರ, ವಿನಯ, ಬಿ.ಎಸ್. ಪ್ರಕಾಶ, ಕೃಷ್ಣಕುಮಾರ, ಅಂಜಿನಿ, ರಾಘವೇಂದ್ರ, ಪಕ್ಕೀರಪ್ಪ, ಬಾಬು, ಮಕರಬ್ಬಿ ದಾದು, ಅನ್ವರ ಬಾಷ, ಅಪ್ರೀನಾ, ನಸೀಮಾ ಬಾನು, ಕೈರೋನಾ, ರೇಷ್ಮಾ, ಆಸ್ಮದ್ ಇತರರು ಪಾಲ್ಗೊಂಡಿದ್ದರು.