ಸಾರಾಂಶ
ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್. ಹೇಳಿದರು.
ಕೊಪ್ಪಳ: ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ನಗರದ ಅಬಯ ಸಾಲ್ವೆಂಟ್ ರೈಸ್ ಮಿಲ್ ನಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಜರುಗಿದ ಉಚಿತ ಚರ್ಮರೋಗ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಯಾರಿಗಾದರೂ ಮೈ ಮೇಲೆ ತಿಳಿ-ಬಿಳಿ ತಾಮ್ರವರ್ಣದ ಸ್ಪರ್ಶ ಜ್ಞಾನವಿಲ್ಲದ 5 ಅಥವಾ 5ಕ್ಕಿಂತ ಹೆಚ್ಚು ಮಚ್ಚೆಗಳು ಇದ್ದರೆ, ಪಾದಗಳ ದೌರ್ಬಲ್ಯ, ಬೆರಳುಗಳ ದೌರ್ಬಲ್ಯ, ತ್ವಚೆಯ ಮೇಲೆ ಕೆಂಪಾದ ಬಾವು, ಕಣ್ಣು ಮುಚ್ಚುವಲ್ಲಿ ತೊಂದರೆ ಕಾಣಿಸಿಕೊಂಡರೆ, ಇವು ಕುಷ್ಠರೋಗದ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳು ಯಾರಿಗಾದರೂ ಕಾಣಿಸಿಕೊಂಡರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಆರೋಗ್ಯ ಸಿಬ್ಬಂದಿಯಲ್ಲಿ ಪರೀಕ್ಷಿಸಿಕೊಂಡು, ಖಚಿತ ಪಟ್ಟರೆ ಉಚಿತವಾಗಿ ಚಿಕಿತ್ಸೆ ಪಡೆಯಿರಿ. ಇದಕ್ಕೆ ಯಾರೂ ಹಿಂಜರಿಯಬಾರದು, ಇದು ಮೈಕ್ರೊಬ್ಯಾಕ್ಟಿರಿಯಾ ಲೆಪ್ರೆ ಎಂಬ ಸೂಕ್ಷ್ಮಾಣು ಗಾಳಿ ಮೂಲಕ ಹರಡುತ್ತದೆ. ಇದೊಂದು ಸಾಂಕ್ರಾಮಿಕ ರೋಗವಾಗಿದೆ. ರೋಗಿಯು ಕೆಮ್ಮುವುದರ ಮೂಲಕ ಮತ್ತು ಸೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಪ್ರಸಾರವಾಗುತ್ತದೆ. ಇದು ಖಂಡಿತ ವಾಸಿಯಾಗುವಂತಹ ಖಾಯಿಲೆಯಾಗಿದ್ದು, ನಿರ್ಲಕ್ಷ್ಯ ಮಾಡದೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳಿ ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಮಾತನಾಡಿ, ಕುಷ್ಠರೋಗ ಯಾವುದೇ ದೇವರ ಶಾಪ ಹಾಗೂ ಪಾಪ ಮಾಡವುದರಿಂದ ಬರುವುದಿಲ್ಲ. ಇದು ಮೈಕ್ರೊಬ್ಯಾಕ್ಟಿರಿಯಾ ಲೆಪ್ರೆ ಎಂಬ ಸೂಕ್ಷ್ಮಾಣುವಿನಿಂದ ಹರಡುತ್ತದೆ. ಇದಕ್ಕೆ ಸಂಪೂರ್ಣವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ಚರ್ಮದ ಯಾವುದೇ ಖಾಯಿಲೆ ಇದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದಾಗ ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.
ಬಳಿಕ ರೈಸ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಯಿತು. ಆಯುಷ್ ವೈದ್ಯ ಡಾ. ಮಹೇಶ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ., ಮೇಲ್ವಿಚಾರಕ ವೀರಭದ್ರಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಜಯಪ್ರಕಾಶ, ಪರಶುರಾಮ, ರಾಜಶೇಖರ, ದಾನನಗೌಡ ಎಸ್.ಟಿ. ಎಸ್ ಇಬ್ರಾಹಿಂಸಾಬ್, ರಾಘವೇಂದ್ರ ಸೇರಿದಂತೆ ಇತರರು ಇದ್ದರು.