ಸಾರಾಂಶ
ಶಿರಸಿ: ನಗರದ ದೀನದಯಾಳ ಭವನದಲ್ಲಿ ಬಿಜೆಪಿಯ ಸ್ಥಾಪನಾ ದಿನದ ಅಂಗವಾಗಿ ಉತ್ತರಕನ್ನಡ ಬಿಜೆಪಿಯಿಂದ ಧ್ವಜಾರೋಹಣ ನೆರವೇರಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಶಾಲಾ ಮಕ್ಕಳಿಗೆ ಪಠ್ಯ-ಪುಸ್ತಕ ವಿತರಿಸಿ, ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಿರಸಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ ಮಾತನಾಡಿ, ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಸಮಯ ನೀಡಲು ಕಾರ್ಯಕರ್ತರಿಗೆ ಕರೆ ನೀಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ, ದೇಶ ಮೊದಲು ಎಂಬುದೇ ಭಾರತೀಯ ಜನತಾ ಪಾರ್ಟಿಯ ಮೂಲ ಸಿದ್ಧಾಂತ, ಸಾಂಸ್ಕೃತಿಕ, ರಾಷ್ಟ್ರವಾದ ಹಾಗೂ ನಮ್ಮ ನಂಬಿಕೆಗಳಿಗೆ ಮನ್ನಣೆ ದೊರಕಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿಯ ನಾಯಕತ್ವ ಯಾವೆಲ್ಲ ಕಾರ್ಯ ಮಾಡಲಿಕ್ಕೆ ಕನಸು ಕಂಡಿತ್ತೋ, ಅವೆಲ್ಲವೂ ಇಂದು ಸಾಕಾರಗೊಳ್ಳುತ್ತಿವೆ. ಭಾರತೀಯರ ಶತಮಾನಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣ, ಅದಕ್ಕಾಗಿ ಲಾಲಾಕೃಷ್ಣ ಅಡ್ವಾಣಿ ನೇತೃತ್ವದ ರಥಯಾತ್ರೆ ನೆನಪಿಸಿಕೊಳ್ಳೋಣ. ವಿಚಾರ ಪರಿವಾರ ಸಂಘಟನೆಯ ಕಾರ್ಯ ಹಾಗೂ ಬಿಜೆಪಿಯ ಪ್ರಭಲ ರಾಜಕೀಯ ಇಚ್ಛಾಶಕ್ತಿಯ ಕಾರಣಕ್ಕೆ ಅಯೋಧ್ಯಾ ರಾಮಮಂದಿರ ನನಸಾಗಿದೆ ಎಂದರು.
ಭಾರತದ ಸಮಗ್ರತೆಗೆ ಧಕ್ಕೆಯಂತಿದ್ದ ಆರ್ಟಿಕಲ್ ೩೭೦ ರದ್ದತಿಯಿಂದ ಕಾಶ್ಮೀರದ ವಿಷಮ ಪರಿಸ್ಥಿತಿ ಈಗ ದೂರವಾಗಿದೆ. ಕಾಂಗ್ರೆಸ್‌ನ ಓಲೈಕೆಯ ಫಲವಾಗಿ ಜಾರಿಯಲ್ಲಿದ್ದ ಅಸಂವಿಧಾನಿಕ ವಕ್ಫ್ ಕಾನೂನಿಗೆ ತಿದ್ದುಪಡಿ ತಂದು ’ಉಮ್ಮೀದ್’ ಹೆಸರಿನಲ್ಲಿ ಮಂಡಿಸಿ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದಿರುವ ಐತಿಹಾಸಿಕ ಸಂದರ್ಭಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ರೈತ, ಬಡವ, ಮಹಿಳಾ ಹಾಗೂ ಯುವಜನ ಸಬಲೀಕರಣಕ್ಕೆ ಯೋಜನೆಗಳು, ಅಂತ್ಯೋದಯ ಅನುಷ್ಠಾನ ಇವುಗಳು ಬಿಜೆಪಿಗೆ ಜನಮನ್ನಣೆ ತಂದುಕೊಟ್ಟಿವೆ ಎಂದು ತಿಳಿಸಿದರು.ಭಾರತೀಯ ಜನಸಂಘ ಹಾಗೂ ಜನತಾ ಪಾರ್ಟಿಯ ನಾಯಕರಾದ ಡಾ. ಶ್ಯಾಮಪ್ರಸಾದ ಮುಖರ್ಜಿ, ಪಂ. ದೀನದಯಾಳ ಉಪಾಧ್ಯಾಯರ ಬಲಿದಾನ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿ ಮತ್ತಿತರರ ಗಣ್ಯರ ತ್ಯಾಗ, ಪರಿಶ್ರಮದ ಫಲವಾಗಿ, ಅಸಂಖ್ಯ ಕಾರ್ಯಕರ್ತರ ಅವಿರತ ಪ್ರಯತ್ನದ ಫಲವಾಗಿ ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಮಾಜಿ ಶಾಸಕ ವಿವೇಕಾನಂದ ವೈದ್ಯ, ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ ಗೌಡ, ಜಿಲ್ಲಾ ವಕ್ತಾರರಾದ ಸದಾನಂದ ಭಟ್ಟ, ಶಿರಸಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ನಗರಸಭಾ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಸ್ಥಾಪನಾ ದಿನದ ಕಾರ್ಯಕ್ರಮದ ಜಿಲ್ಲಾ ಸಹ ಪ್ರಮುಖ ನಂದನ ಸಾಗರ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ರವಿಚಂದ್ರ ಶೆಟ್ಟಿ, ಪಕ್ಷದ ಜಿಲ್ಲಾ ಹಾಗೂ ಮಂಡಲ ಸ್ಥರದ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು, ನಗರಸಭಾ ಸದಸ್ಯರು, ಗ್ರಾಪಂ ಸದಸ್ಯರು, ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಸ್ವಾಗತಿಸಿದರು. ಮಹಾಂತೇಶ ಹಾದಿಮನಿ ನಿರ್ವಹಿಸಿದರು.