ನರಗುಂದ: ಗ್ರಾಮೀಣ ಪ್ರದೇಶದ ಜನತೆ ಗುಳೆ ಹೋಗದೆ ಸರ್ಕಾರ ಪ್ರಾರಂಭಿಸಿರುವ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಉದ್ಯೋಗ ಪಡೆದುಕೊಳ್ಳಬೇಕೆಂದು ತಾಪಂ ಇಒ ಶ್ರೀಧರ ಚಿನಗುಂಡಿ ಹೇಳಿದರು.
ಸೋಮವಾರ ತಾಲೂಕಿನ ಕೊಣ್ಣೂರು ಗ್ರಾಪಂ ವ್ಯಾಪ್ತಿಯಲ್ಲಿ ಜಾಬ್ ಕಾರ್ಡ್ ಮೇಳದ ಅಂಗವಾಗಿ ಕೂಲಿ ಕಾರ್ಮಿಕರ ಮನೆ- ಮನೆ ಭೇಟಿ ಅಭಿಯಾನ ಮಾಡಿ ಜಾಬ್ ಕಾರ್ಡ್ ವಿತರಿಸಿ ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ದೊರೆಯುವ ಉದ್ಯೋಗಾವಕಾಶ ಮತ್ತು ಸೌಲಭ್ಯಗಳಗಳನ್ನು ಪ್ರತಿಯೊಬ್ಬ ಕೂಲಿ ಕಾರ್ಮಿಕರು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದರು.ಜಾಬ್ ಕಾರ್ಡ್ ಹೊಂದಿರದ ಕುಟುಂಬಗಳನ್ನು ಗುರುತಿಸಿ, ಮನೆ- ಮನೆ ಭೇಟಿಯ ಸಂದರ್ಭದಲ್ಲಿಯೇ ಅರ್ಹ ಫಲಾನುಭವಿಗಳಿಗೆ ಚಿನಗುಂಡಿ ಅವರು ಹೊಸ ಜಾಬ್ ಕಾರ್ಡ್ ವಿತರಿಸಿದರು. ಕೆಲಸದ ಅಗತ್ಯವಿರುವವರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೆ ಯೋಜನೆಯಡಿ ಕೆಲಸ ಒದಗಿಸಲಾಗುವುದು ಎಂದರು.
ವಿಬಿ ಜಿ ರಾಮ್ ಜಿ ಯೋಜನೆಯ ಕ್ರಿಯಾಯೋಜನೆಯಲ್ಲಿ ವೈಯಕ್ತಿಕ ಫಲಾನುಭವಿಗಳಾಗಿ ಆಯ್ಕೆಯಾಗಿರುವವರು ತಕ್ಷಣ ಕಾಮಗಾರಿ ಆದೇಶ ಪಡೆದು ಕಾಮಗಾರಿ ಆರಂಭಿಸುವಂತೆ ಪಿಡಿಒಗಳಿಗೆ ಸೂಚಿಸಿದರು.ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಯೋಜನೆಯಡಿ ಕೈಗೊಳ್ಳಲಾಗುವ ವಿವಿಧ ಕಾಮಗಾರಿಗಳು, ಉದ್ಯೋಗದ ಅವಕಾಶಗಳು ಹಾಗೂ ಯೋಜನೆಯ ಪ್ರಯೋಜನಗಳ ಕುರಿತು ವಿವರಿಸಿದರು.
ಆ. 15ರಿಂದ ಸೆ. 15ರ ವರೆಗೆ ತಾಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ನಡೆಯುತ್ತಿದ್ದು, ಕೂಲಿ ಕಾರ್ಮಿಕರು ಸಕ್ರಿಯವಾಗಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿಡಿಒ ಮಂಜುನಾಥ ಗಣಿ, ಐಇಸಿ ಸುರೇಶ್ ಬಾಳಿಕಾಯಿ, ಗ್ರಾಪಂ ಕಾರ್ಯದರ್ಶಿ ಲಿಂಗನಗೌಡರ, ಗ್ರಾಪಂ ಸಿಬ್ಬಂದಿ ಹಾಗೂ ವಿಬಿ ಜಿ ರಾಮ್ ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.ರೋಣದಲ್ಲಿ ನಾಳೆ ವಿಶ್ವ ಛಾಯಾಗ್ರಹಣ ದಿನಾಚರಣೆ
ರೋಣ: ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ತಾಲೂಕು ಘಟಕದ ವತಿಯಿಂದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, ಛಾಯಾ ಬಂಧುರತ್ನ ಪ್ರಶಸ್ತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆ. 19ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಜರುಗಲಿದೆ.ಸಾನ್ನಿಧ್ಯವನ್ನು ಕೊತಬಾಳ ಅಂಕಲಗಿ ಅಡವಿಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ವಿಧಾನಸಭಾ ಸಭಾಧ್ಯಕ್ಷ ಜಿ.ಎಸ್. ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂಘದ ತಾಲೂಕು ಅಧ್ಯಕ್ಷ ಪಿ.ಎಸ್. ಪಾಟೀಲ ವಹಿಸುವರು.ಮುಖ್ಯ ಅತಿಥಿಗಳಾಗಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ, ಅತಿಥಿಗಳಾಗಿ ಕರ್ನಾಟಕ ಪೋಟೋಗ್ರಾಪರ್ ಅಸೋಸಿಯೇಷನ್ ರಾಜ್ಯ ನಿರ್ದೇಶಕ ಮಂಜುನಾಥ ಲಕ್ಷೆಟ್ಟಿ, ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಪವನ ಮೇಹರವಾಡೆ, ಛಾಯಾರತ್ನ ಪಶಸ್ತಿ ಪುರಸ್ಕೃತರಾದ ಎಸ್.ಎಸ್. ಗೌಡರ, ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ಬಸವರಾಜ ಪಲ್ಲೇದ, ಭಗೀರಥರಾಜ ಮಲ್ಜಿ, ಚಿನ್ನು ಫೋಟೋ ಬುಕ್ಸ್ ಮಾಲೀಕ ಮಲ್ಲನಗೌಡ ಪಾಟೀಲ, ಸಂಗ್ರಾಮ ಕೋರ್ಲಹಳ್ಳಿ, ಪಂಕಜ ಬನಸಾಲಿ, ಮಹೇಶ ಬಡಿಗೇರ, ಸುಭಾಸ ಬಡಿಗೇರ, ವೀರೇಶ ಬುರಡಿ, ಶರಣಪ್ಪ ಹೂಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು. ಕೃಷಿ ಸಾಧಕ ಮಲ್ಲಯ್ಯ ಗುರುಬಸಪ್ಪನವರ ಮಠ ಅವರಿಗೆ ಛಾಯಾ ಬಂಧುರತ್ನ ಪ್ರಶಸ್ತಿ- 2026 ಪ್ರದಾನ ಮಾಡಲಾಗುವುದು ಎಂದು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶ ಸಂಘದ ಪ್ರಕಟಣೆ ತಿಳಿಸಿದೆ.