ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕರ ಭವಿಷ್ಯ ನಿಧಿಗೆ (ಪಿಎಫ್‌) ಸಂಬಂಧಿಸಿದ ಹೊಸ ನಿಯಮಗಳನ್ನು ವಿರೋಧಿಸಿ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಗಾರ್ಮೆಂಟ್‌ ನೂರಾರು ಮಹಿಳಾ ಸಿಬ್ಬಂದಿ ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದರು.

ಹುಬ್ಬಳ್ಳಿ:

ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕರ ಭವಿಷ್ಯ ನಿಧಿಗೆ (ಪಿಎಫ್‌) ಸಂಬಂಧಿಸಿದ ಹೊಸ ನಿಯಮಗಳನ್ನು ವಿರೋಧಿಸಿ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಗಾರ್ಮೆಂಟ್‌ ನೂರಾರು ಮಹಿಳಾ ಸಿಬ್ಬಂದಿ ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದರು.

ಪ್ರತಿಭಟನೆಯಿಂದಾಗಿ ಪರಿಣಾಮ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಎರಡೂ ಬದಿಯಲ್ಲಿ ಕಿಲೋಮೀಟರ್‌ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಸವಾರರು ಪರದಾಡುವಂತಾಯಿತು.

ಕೆಲಸಕ್ಕೆ ಹಾಜರಾಗಿದ್ದ ಮಹಿಳಾ ಕಾರ್ಮಿಕರು ಏಕಾಏಕಿ ಕಾರ್ಖಾನೆಯಿಂದ ಹೊರಬಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ಆರಂಭಿಸಿದರು. ಕಂಪನಿಯ ಹಿರಿಯ ಅಧಿಕಾರಿಗಳು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಿದರೂ, ಕಾರ್ಮಿಕರು ಅದಕ್ಕೆ ಸಮ್ಮತಿಸದೆ ರಾಷ್ಟ್ರೀಯ ಹೆದ್ದಾರಿಗೆ ತೆರಳಿ ರಸ್ತೆ ತಡೆ ನಡೆಸಿದರು.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಠಾಣೆ ಪೊಲೀಸರು, ಕಾರ್ಮಿಕರಿಗೆ ಹೆದ್ದಾರಿ ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. ರಾಷ್ಟ್ರೀಯ ಹೆದ್ದಾರಿ ತಡೆ ಕಾನೂನುಬಾಹಿರವಾಗಿದ್ದು, ಪ್ರತಿಭಟನೆಯಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಇನ್‌ಸ್ಪೆಕ್ಟರ್‌ ಮುರುಗೇಶ ಚನ್ನಣ್ಣವರ ತಿಳಿಸಿದರು. ಆದರೆ, ಕೇಂದ್ರ ಸರ್ಕಾರದ ಹೊಸ ಪಿಎಫ್‌ ನಿಯಮಗಳಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ನಿಯಮಗಳನ್ನು ಹಿಂಪಡೆದು ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ನಂತರ ಪಿಎಫ್‌ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಹೊಸ ನಿಯಮಗಳ ಕುರಿತು ಕಾರ್ಮಿಕರಿಗೆ ಮಾಹಿತಿ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಪೊಲೀಸರು ಹಾಗೂ ಅಧಿಕಾರಿಗಳ ನಿರಂತರ ಮನವೊಲಿಕೆ ಬಳಿಕ ಮಹಿಳಾ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟು ಕಾರ್ಖಾನೆಯತ್ತ ತೆರಳಿದರು. ಇದರಿಂದ ಕೆಲಕಾಲ ಸ್ಥಗಿತಗೊಂಡಿದ್ದ ಹೆದ್ದಾರಿ ಸಂಚಾರ ಪುನಃ ಆರಂಭವಾಯಿತು.

ಕಾರ್ಮಿಕರ ಮೇಲೆ ಪ್ರಕರಣ ದಾಖಲು

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಶಾಹಿ ಗ್ರಾರ್ಮೆಂಟ್ಸ್ ಕಂಪನಿಯ 100ಕ್ಕೂ ಅಧಿಕ ಮಹಿಳಾ ಕಾರ್ಮಿಕರ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ಕಾರ್ಮಿಕರು ಏಕಾಏಕಿ ರಾಷ್ಟ್ರೀಯ ಹೆದ್ದಾರಿ ತಡೆದು, ರಸ್ತೆಯಲ್ಲಿ ಕುಳಿತು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿ ಸಂಚಾರಕ್ಕೆ ಅಡ್ಡಿ ಮಾಡಿದ ಹಿನ್ನೆಲೆ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.