ಕನಿಷ್ಠ ವೇತನಕ್ಕಾಗಿ ಕಾರ್ಮಿಕರ ಹೋರಾಟ

| Published : May 02 2024, 01:34 AM IST

ಸಾರಾಂಶ

ದಿನ ನಿತ್ಯದ ವೆಚ್ಚ ಹೆಚ್ಚುತ್ತಿದ್ದರೂ ಕಾರ್ಮಿಕರಿಗೆ ಕೇವಲ 14 ಸಾವಿರ ಕನಿಷ್ಠ ವೇತನ ನಿಗದಿ ಆಗಿದೆ. ಇದನ್ನು 30 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ. ಕಾರ್ಮಿಕ ದಿನಾಚರಣೆ ಪ್ರಯುಕ್ತ ನಡೆದ ಸಭೆಯಲ್ಲಿ ಒತ್ತಾಯ ಕೇಳಿಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾರ್ಮಿಕರಿಗೆ ಮಾಸಿಕ ವೇತನ ಕನಿಷ್ಠ ₹30 ಸಾವಿರ ನಿಗದಿಪಡಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದವು.

ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎಐಟಿಯುಸಿ ಸೇರಿದಂತೆ 11 ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ‘ಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದವು.

ಹಾಲಿ ಕನಿಷ್ಠ ವೇತನ ₹14,500 ಇದೆ. ಆದರೆ, ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆ ಮತ್ತು ಮನೆ ಬಾಡಿಗೆ, ಶಿಕ್ಷಣ, ಆರೋಗ್ಯ ಸೇವೆಗಳ ಬೆಲೆ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಈಗಿನ ಪರಿಸ್ಥಿತಿಗೆ ತಕ್ಕಂತೆ ಕನಿಷ್ಠ ₹30 ಸಾವಿರ ವೇತನ ನಿಗದಿಪಡಿಸಬೇಕು. ದಿನಕ್ಕೆ 12 ತಾಸುಗಳ ಕೆಲಸದ ಅವಧಿ ನಿಯಮವನ್ನು ವಾಪಸ್ ಪಡೆಯಬೇಕು. ಕಾರ್ಖಾನೆ, ಕೈಗಾರಿಕೆಗಳಲ್ಲಿ ನೂರಕ್ಕಿಂತ ಕಡಿಮೆ ನೌಕರರಿದ್ದರೆ ಸಂಘಟನೆ ಕಟ್ಟಿಕೊಳ್ಳಬಾರದು ಎನ್ನುವ ನಿಯಮ ತೆಗೆಯಬೇಕು. ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು. ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರ ಹಕ್ಕುಗಳ ಹರಣವಾಗುತ್ತದೆ ಎಂದು ಸಂಘಟನೆಗಳು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದವು.

ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಶಿಕ್ಷಣದ ವ್ಯಾಪಾರಿಕರಣ, ಭ್ರಷ್ಟಾಚಾರ, ಅಸಂಘಟಿತ ವಲಯದ ಕಾರ್ಮಿಕರ ಸಮಸ್ಯೆ, ಕೋಮುವಾದ ವಿಚಾರವಾಗಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿದರು.

ನ್ಯಾಷನಲ್ ಲಾ ಸ್ಕೂಲ್ ಆಫ್ ಯುನಿವರ್ಸಿಟಿಯ ಪ್ರೊ. ಬಾಬು ಮ್ಯಾಥ್ಯು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಸಾವಿರಾರು ಕಾರ್ಮಿಕರು, ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.