ಕಾರ್ಮಿಕರು ಬಿಜೆಪಿ-ಜೆಡಿಎಸ್ ವಿರುದ್ಧ ಮತ ಹಾಕಿ: ಕೆ.ಮಹಾಂತೇಶ್

| Published : Apr 16 2024, 01:06 AM IST / Updated: Apr 16 2024, 12:51 PM IST

ಸಾರಾಂಶ

ದೇಶದಲ್ಲಿ 5 ಕೋಟಿ ಜನ ನಿರ್ಮಾಣ ವಲಯದ ಕಾರ್ಮಿಕರು ಸೇರಿ ಅವರ ಕುಟುಂಬ ವಲಯದ 20 ಕೋಟಿ ಜನ, ರಾಜ್ಯದಲ್ಲಿ 35 ಲಕ್ಷ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಸೇರಿ 1 ಕೋಟಿ ಜನ ಮತ ಚಲಾಯಿಸುತ್ತಾರೆ.

ಹೊಸಪೇಟೆ: ಕಟ್ಟಡ ಕಾರ್ಮಿಕರ ಹಕ್ಕುಗಳು, ಸೌಲಭ್ಯಗಳಿಗಾಗಿ, ಕಾನೂನು, ಕಲ್ಯಾಣ ಮಂಡಳಿ ಉಳಿವಿಗಾಗಿ, ಸಮಾಜದಲ್ಲಿ ಶಾಂತಿ, ಸೌಹಾರ್ದ, ಸಹಬಾಳ್ವೆಗಾಗಿ ಬಿಜೆಪಿ-ಜೆಡಿಎಸ್ ವಿರುದ್ಧ ಮತ ಚಲಾಯಿಸಬೇಕು ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾಯ್ದೆ ಮತ್ತು ಸೆಸ್ ಕಾಯ್ದೆ ರಕ್ಷಣೆಗಾಗಿ, ನಿರ್ಮಾಣ ಕಾರ್ಮಿಕರ ಹಕ್ಕುಗಳ ಕಲ್ಯಾಣ ಮಂಡಳಿ ಸೌಲಭ್ಯಗಳ ಉಳಿವಿಗಾಗಿ, ಶ್ರೀಮಂತ ಕಂಪೆನಿಗಳ ಪರವಾದ ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ, ಸಮಾಜದಲ್ಲಿ ಶಾಂತಿ ಸೌಹಾರ್ದ, ಸಹಬಾಳ್ವೆಗಾಗಿ ಬಿಜೆಪಿ, ಜೆಡಿಎಸ್ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ್ದು, ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಕಾರ್ಮಿಕರ ಮನೆ ಮನೆಗೆ ತೆರಳಿ ಕರ ಪತ್ರ ಹಂಚಿಕೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ 5 ಕೋಟಿ ಜನ ನಿರ್ಮಾಣ ವಲಯದ ಕಾರ್ಮಿಕರು ಸೇರಿ ಅವರ ಕುಟುಂಬ ವಲಯದ 20 ಕೋಟಿ ಜನ, ರಾಜ್ಯದಲ್ಲಿ 35 ಲಕ್ಷ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಸೇರಿ ೧ ಕೋಟಿ ಜನ ಮತ ಚಲಾಯಿಸುತ್ತಾರೆ. ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬೀಡಿ ಕಾರ್ಮಿಕರು, ಗಣಿ ಕಾರ್ಮಿಕರು ಹಾಗೂ ಸಿನಿಮಾ ಕಾರ್ಮಿಕರಿಗೆ ಕಲ್ಯಾಣ ಸೌಲಭ್ಯಗಳು ಸಿಗುತ್ತಿದ್ದವು. ಆದರೆ, ಬಿಜೆಪಿ ಸರ್ಕಾರ ಅವುಗಳನ್ನು ರದ್ದುಗೊಳಿಸಿತು. ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರ ಬದುಕಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಕಲ್ಯಾಣ ಸೌಲಭ್ಯಗಳು ರದ್ದಾಗಲಿವೆ ಎಂದರು.

1996ರಲ್ಲಿ ದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಜಾರಿ ಮಾಡಲು ಸಂಸತ್ತಿನಲ್ಲಿ ಇತರೆ ಎಡ ಪಕ್ಷಗಳ ಜತೆ ಮುಂಚೂಣಿ ಪಾತ್ರವಹಿಸಿದ್ದು, ಅಂದಿನ ಸಂಯುಕ್ತ ರಂಗ ಸರ್ಕಾರದ ದೊಡ್ಡ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಮನವರಿಕೆ ಮಾಡಿ ಕಾಯ್ದೆ ಜಾರಿಗೆ ಶ್ರಮಿಸಿ, ಈಗಲೂ ಕಾರ್ಮಿಕರ ಹಕ್ಕುಗಳ ಹೋರಾಟದಲ್ಲಿ ಹಾಗೂ ಜನರೊಂದಿಗೆ ನಿಂತಿರುವ ಸಿಪಿಐ(ಎಂ) ರಾಜ್ಯದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದರು.

ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಮತ್ತು ಕಲ್ಯಾಣ ಮಂಡಳಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಲುವಾಗಿ ರಾಜ್ಯದಲ್ಲಿ ಉಳಿದ 27 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟದ ಭಾಗವಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ. ಇದರಿಂದ ರಾಜ್ಯದಲ್ಲಿರುವ ಕಲ್ಯಾಣ ಮಂಡಳಿ ಹಾಗೂ ಸರ್ಕಾರದ ಸೌಲಭ್ಯಗಳ ರಕ್ಷಣೆಗಾಗಿ ಮತ್ತು ಮುಂದಿನ ನಾಲ್ಕು ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಲು ಸಹಾಯವಾಗಲಿದೆ ಎಂದು ತಿಳಿಸಿದರು. ಇದೇ ವೇಳೆ ಮುಖಂಡರು ಕರಪತ್ರ ಬಿಡುಗಡೆ ಮಾಡಿದರು.

ಸಿಪಿಎಂ ಮುಖಂಡ ಭಾಸ್ಕರ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಾಲಿಂಗ, ಶಬ್ಬೀರ್, ಗೋಪಾಲ್, ಕೃಷ್ಣ, ಕರಿಯಣ್ಣ ಮತ್ತಿತರರಿದ್ದರು.