ಸಾರಾಂಶ
ಸಚಿವ ಸುಧಾಕರ್ ಭರವಸೆ । ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾರ್ಯಕ್ರಮಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಹೊಸದುರ್ಗ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾದಾನವಿದ್ದು ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಪಕ್ಷವಾಗಿದೆ ಸರ್ಕಾರಕ್ಕಾಗಿ ದುಡಿದವರಿಗೆ ಸ್ಥಾನಮಾನ ನೀಡಬೇಕು ಎನ್ನುವುದು ಎಲ್ಲಾ ಮುಖಂಡರ ಆಶಯವಾಗಿದೆ ಈ ಹಿನ್ನಲೆಯಲ್ಲಿ ಪ್ರತಿ ತಾಲೂಕಿನಿಂದ ಎರಡ್ಮೂರು ಜನರ ಆಯ್ಕೆ ಮಾಡಿ ಪಟ್ಟಿ ಸರ್ಕಾರಕ್ಕೆ ನೀಡಿದ್ದೇವೆ. ನೇಮಕಾತಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಸಿಎಂ ಹಾಗೂ ಡಿಸಿಎಂ ಬಳಿ ಮನವಿ ಮಾಡಿದ್ದೇವೆ ಎಂದು ಹೇಳಿದರು.ಭದ್ರಾ ಯೋಜನೆಗೆ 2,600 ಕೋಟಿ: ಸಿಎಂ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ಅಪ್ಪರ್ ಭದ್ರಾ ಯೋಜನೆಯ ಕಾಮಗಾರಿಗೆ 2,600 ಕೋಟಿ ರು. ಅನುದಾನ ನೀಡಿದ್ದಾರೆ. ಅಪ್ಪರ ಭದ್ರಾ ಯೋಜನೆಯಡಿ ಹೊಸದುರ್ಗ ತಾಲೂಕಿನ ಕೆರೆಗಳನ್ನು ಈ ವರ್ಷದಲ್ಲಿ ತುಂಬಿಸುವ ಕೆಲಸ ಆಗಲಿದೆ. ಅಲ್ಲದೆ ಈ ಯೋಜನೆಯಡಿ ಜಿಲ್ಲೆಯ 6 ಲಕ್ಷ ಎಕರೆಗೆ ನೀರು ಹರಿಸುವ ಕೆಲಸ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮುಗಿಯಬೇಕಿತ್ತು ಆದರೆ ಬಿಜೆಪಿ ಸರ್ಕಾರ ಕೆಲಸ ಮಾಡಲಿಲ್ಲ. ನಾವು ಅಧಿಕಾರಕ್ಕೆ ಬಂದಿದ್ದು ಆ ಕೆಲಸವನ್ನು ಪೂರ್ಣ ಮಾಡಲಿದ್ದೇವೆ ಎಂದು ಹೇಳಿದರು.
ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಇದ್ದು ಜಿಲ್ಲೆಗೆ ಭದ್ರ ನೀರು ಹರಿಸುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದೇವೆ. ಅಜ್ಜಂಪುರ ತಾಲೂಕಿನ ವ್ಯಾಪ್ತಿಯಲ್ಲಿ ಕೇವಲ 3 ಕಿ.ಮೀ ಕೆಲಸ ಮಾತ್ರ ಬಾಕಿ ಉಳಿದಿದ್ದು ಬರುವ 6 ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಹೊಸದುರ್ಗ ತಾಲೂಕಿನ 1 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಸಬಾ ಹಾಗೂ ಮಾಡದಕೆರೆ ಹೋಬಳಿಯ ಎಲ್ಲಾ ಕೆರೆಗಳಿಗೂ ನೀರು ಹಾಗೂ ಪ್ರತಿ ಮನೆಗೆ ಶುದ್ದ ಕುಡಿಯುವ ನೀರನ್ನು ಈ ವರ್ಷವೇ ಕೊಡಲಿದ್ದೇವೆ ಎಂದರು.ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಅಧಿಕಾರ ಸಿಗದೇ ಇದ್ದಾಗ ಕಾರ್ಯಕರ್ತರಲ್ಲಿ ಅಸಮಾಧಾನ ಸಹಜ. ಮುಂದಿನ ದಿನಗಳಲ್ಲಿ ಸ್ಥಾನಮಾನ ಸಿಗಲಿದೆ. ಸಚಿವ ಡಿ.ಸುಧಾಕರ್ ನೇತೃತ್ವದಲ್ಲಿ ಬರುವ ಸ್ಥಳೀಯ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲಾಗುವುದು. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರು ಅದನ್ನು ಬಗೆಹರಿಸಿಕೊಳ್ಳುತ್ತೇವೆ. ಆದರೆ ಪಕ್ಷಕ್ಕೆ ಡ್ಯಾಮೇಜ್ ಮಾಡುವುದಿಲ್ಲ. ನಮ್ಮದೇ ಪಕ್ಷದ ಕಾರ್ಯಕರ್ತರನ್ನು ಸೋಲಿಸುವ ಹಂತಕ್ಕೆ ಯಾರೂ ಹೋಗಬಾರದು. ರಾಜಕಾರಣದಲ್ಲಿ ತ್ಯಾಗ ಮನೋಭಾವ ಇರಬೇಕು ಎಂದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಅಧ್ಯಕ್ಷತೆ ವಹಿಸಿದ್ದರು. ಪಂಚಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಮುಖಂಡರಾದ ಹಾಲೇಶ್, ಮೈಲಾರಪ್ಪ, ಸಂಪತ್ ಕುಮಾರ್, ಗೋ.ತಿಪ್ಪೇಶ್, ಕೆ.ಅನಂತ್, ಪದ್ಮನಾಭ್, ಲೋಕೇಶ್ವರಪ್ಪ, ಕಾರೇಹಳ್ಳಿ ಬಸವರಾಜ್, ಕೆಪಿಸಿಸಿ ಸದಸ್ಯರಾದ ಎಂ.ಪಿ.ಶಂಕರ್, ಅಲ್ತಾಫ್, ಎಂ.ಎಚ್.ಕೃಷ್ಣಮೂರ್ತಿ, ರಾಜೇಂದ್ರ ಪ್ರಸಾದ್, ಯಶವಂತ್ ಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ಮಹಮದ್ ಇಸ್ಮಾಯಿಲ್, ಶ್ರೀರಾಂಪುರ ದಾಸಪ್ಪ ಮತ್ತಿತರರಿದ್ದರು.