ಕೊಪ್ಪಳ: ಶ್ರಮಿಕವರ್ಗ ದೇಶದ ಉನ್ನತಿಗೆ ಮುನ್ನುಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.

ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ವಿವಿಧ ಕಟ್ಟಡ ಮತ್ತು ಇತರ ನಿರ್ಮಾಣ ಸಂಘಗಳ ಸಹಯೋಗದಲ್ಲಿ ಇತ್ತೀಚೆಗೆ ಕಿನ್ನಾಳ ಗ್ರಾಮದಲ್ಲಿರುವ ಎಚ್‌ಎಚ್‌ಪಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಕಾರ್ಮಿಕ ದಿನ ಎನ್ನುವ ಬದಲು ಶ್ರಮಯೋಗಿ ದಿನ ಎಂದು ಕರೆಯುವುದು ಹೆಚ್ಚು ಸೂಕ್ತ. ಹಿಂದೆ ಶರಣಾದಿ ಪ್ರಮಥರು ವಾಣಿಯಂತೆ, ಕಾಯಕದ ಮಹತ್ವವನ್ನು ಬಸವಣ್ಣನವರು ಸಾರಿದ್ದಾರೆ. ಅದೇ ರೀತಿ `ನೀನು ಅಧ್ಯಕ್ಷನಾಗಿರು, ಚಮ್ಮಾರನಾಗಿರು, ಕಮ್ಮಾನಾಗಿರು, ಏನೇ ಆಗಿದ್ದರೂ ಮೊದಲು ಶ್ರಮಯೋಗಿ ಆಗಿ ಕೆಲಸಗಾರನಾಗು, ಕಾರ್ಮಿಕನಾಗಿರು'''''''''''''''' ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ ಎಂದರು.ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಕಾರ್ಮಿಕರಿಗೆ ಮಂಡಳಿಯಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿದರು.

ಕಿನ್ನಾಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ವರಯ್ಯ, ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೋಂದಾಯಿತ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ರಮೇಶ ಘೋರ್ಪಡೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿ ಕಟ್ಟಡಕ್ಕೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುತ್ತಿರುವವರು ನೋಂದಣಿಯಾಗಲು, ನೋಂದಣಿ ಪೂರ್ವದ 12 ತಿಂಗಳಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. 18ರಿಂದ 60 ವರ್ಷದೊಳಗಿರಬೇಕು. ಉದ್ಯೋಗ ದೃಢೀಕರಣ ಪತ್ರ, ಅರ್ಜಿದಾರ ಹಾಗೂ ಅವಲಂಬಿತರ ಆಧಾರ್‌ ಕಾರ್ಡ್ ಪ್ರತಿ, ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಅರ್ಜಿದಾರರ ಆಧಾರ್‌ ಕಾರ್ಡ್‌ಗೆ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ, ಹೊಂದಿರಬೇಕೆಂದು ತಿಳಿಸಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಕಾರ್ಮಿಕ ಇಲಾಖೆಯ ಕ್ಷೇತ್ರ ನಿರ್ವಾಹಕ ಹೇಮಂತ್‌ಸಿಂಗ್, ಮುಖಂಡರಾದ ವೀರೇಶ ತಾವರಗೇರಾ, ಕಿನ್ನಾಳದ ಶ್ರೀ ಸಿದ್ದರಾಮೇಶ್ವರ ಬಾರ್‌ ಬೆಂಡಿಂಗ್ ಮತ್ತು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಉಮೇಶ ಬಡಿಗೇರ, ಮಾಜಿ ಅಧ್ಯಕ್ಷ ಬಸವರಾಜ ಚಿಲವಾಡಗಿ, ಬಹದ್ದೂರ ಬಂಡಿ ಕಾರ್ಮಿಕ ಸಂಘದ ಅಧ್ಯಕ್ಷ ಮಹಿಬೂಬ ಮಣ್ಣೂರ ಉಪಸ್ಥಿತರಿದ್ದರು.