ಹುಬ್ಬಳ್ಳಿ:

ದುಡಿಯುವ ಕೈಗಳೇ ಆಳುವ ಕೈಗಳಾಗಬೇಕು. ಶೋಷಣಾರಹಿತ ಸಮಾಜ ನಿರ್ಮಾಣವೇ ಮೇ ದಿನಾಚರಣೆಯ ಮೂಲ ಆಶಯ ಎಂದು ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ವಿಶ್ವಶ್ರಮ ಚೇತನದ ಡಾ. ಕೆ.ಎಸ್. ಶರ್ಮಾ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ (ಮೇ ದಿನಾಚರಣೆ- 2026) ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಮಿಕರ ಹಕ್ಕುಗಳಿಗಾಗಿ ಜಗತ್ತಿನಾದ್ಯಂತ ನಡೆಯುತ್ತಿರುವ ಹೋರಾಟದ ಮಹತ್ವವನ್ನು ವಿವರಿಸಿದ ಅವರು, ಮೇ ದಿನಾಚರಣೆಯ ಉದ್ದೇಶ ಇನ್ನೂ ಸಂಪೂರ್ಣವಾಗಿ ಸಾಧನೆಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಮಿಕ ದಿನಾಚರಣೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮ, ಹಾಡು- ನೃತ್ಯಗಳಿಗೆ ಸೀಮಿತವಾಗಬಾರದು. ಅದರ ನಿಜವಾದ ಕ್ರಾಂತಿಕಾರಿ ಆಶಯವನ್ನು ಅರಿತು ಸಮಾಜ ಪರಿವರ್ತನೆಗೆ ಮುಂದಾಗಬೇಕು. ಸಮಾಜದಲ್ಲಿ ಇನ್ನೂ ವರ್ಗ ವ್ಯತ್ಯಾಸ ಮತ್ತು ಶೋಷಣೆಯ ಅಂಶಗಳು ಮುಂದುವರಿದಿರುವುದನ್ನು ಉಲ್ಲೇಖಿಸಿದ ಅವರು, ದುಡಿಯುವ ವರ್ಗ ಸಂಘಟಿತವಾಗಿ ತನ್ನ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಬೇಕಾಗಿದೆ ಎಂದು ಕರೆ ನೀಡಿದರು.


ಇದೇ ಸಂದರ್ಭದಲ್ಲಿ ಭಾರತ ಏಕತಾ ಆಂದೋಲನದ ಅಧ್ಯಕ್ಷ ಮಹದೇವ ಹೊರಟ್ಟಿ, ನಿವೃತ್ತ ಸಭಾಪತಿ ಡಾ. ವೀರಣ್ಣ ಮತ್ತಿಗಟ್ಟಿ, ಬೆಳಸೆಯ ರೂರಲ್ ಪ್ರೊಗ್ರೆಸಿವ್ ಸೊಸೈಟಿ ಅಧ್ಯಕ್ಷ ಪ್ರಕಾಶ ಪ್ರಭು ಅವರಿಗೆ “ಸಾರ್ವಜನಿಕ ಸೇವಾ ಧುರಂದರ ಪ್ರಶಸ್ತಿ” ಹಾಗೂ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯದ ಡಾ. ಶ್ರೀನಿವಾಸ ಬನ್ನಿಗೋಳ ಅವರಿಗೆ “ನವ ಧನ್ವಂತರಿ ಭೂಷಣ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಬಳಿಕ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಆವರಣದಲ್ಲಿ “ಡಾ. ಶ್ರೀನಿವಾಸ್ ಕೆ. ಬನ್ನಿಗೋಳರವರ ಅಕಾಡೆಮಿ ಆಫ್ ಆಯುರ್ವೇದಿಕ್ ಸೈನ್ಸ್” ಅನ್ನು ಉದ್ಘಾಟಿಸಲಾಯಿತು.

ಅಕಾಡೆಮಿ ಅಧ್ಯಕ್ಷ ಡಾ. ಶ್ರೀನಿವಾಸ ಕೆ. ಬನ್ನಿಗೋಳ ಮಾತನಾಡಿ, ವೈದ್ಯಕೀಯ ಶಿಕ್ಷಣದಲ್ಲಿ ಕೌಶಲ್ಯ ಮತ್ತು ಪ್ರಾಯೋಗಿಕ ತರಬೇತಿ ಅತ್ಯಂತ ಮುಖ್ಯವಾಗಿದ್ದು, ಈ ಅಕಾಡೆಮಿ ಮೂಲಕ ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದರು.

ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಪ್ರಾಂಶುಪಾಲ ಡಾ. ಸಿ.ಸಿ. ಹಿರೇಮಠ, ಕಾರ್ಯದರ್ಶಿ ಸೋಮಶೇಖರ್ ಹುದ್ದಾರ, ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ, ಸುಲೋಚನಾ ಪೋತ್ನಿಸ್, ಡಾ. ಅಶ್ವಿನಿ ಪಾಟೀಲ್, ಡಾ. ರೂಪಿಕಾ ಸೇರಿದಂತೆ ಹಲವರಿದ್ದರು.