೩೫ ವರ್ಷದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿರುವೆ: ಶ್ರೀರಾಮುಲು

| Published : Mar 22 2024, 01:03 AM IST

೩೫ ವರ್ಷದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿರುವೆ: ಶ್ರೀರಾಮುಲು
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಬಿಜೆಪಿ ಅಧಿಕಾರಾವಧಿಯಲ್ಲಿ ತಾಲೂಕಿನ ೭೨ ಕೆರೆಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸಲು ₹೧೩೫೦ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು.

ಸಂಡೂರು: ೩೫ ವರ್ಷ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.

ಪಟ್ಟಣದ ಕಾರ್ತಿಕೇಯ ಘೋರ್ಪಡೆಯವರ ಬಂಗಲೆಯ ಆವರಣದಲ್ಲಿ ಗುರುವಾರ ಬಿಜೆಪಿ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಮ್ಮನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸಬೇಕು. ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಹಿಂದಿನ ಬಿಜೆಪಿ ಅಧಿಕಾರಾವಧಿಯಲ್ಲಿ ತಾಲೂಕಿನ ೭೨ ಕೆರೆಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸಲು ₹೧೩೫೦ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಿಲ್ಲ. ಈಗಾಗಲೇ ತಾಲೂಕಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಕುಡಿಯುವ ನೀರು ಪೂರೈಸುವ ಕಾರ್ಯ ಶೇ.೭೦-೮೦ ಮುಗಿದಿದೆ. ಈ ಹಿಂದೆ ತಾವು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ, ಸಂಡೂರು ಕ್ಷೇತ್ರದ ಜನತೆ ಹೆಚ್ಚಿನ ಮತಗಳನ್ನು ನೀಡಿದ್ದರು. ಈ ಬಾರಿಯೂ ಕ್ಷೇತ್ರದ ಜನತೆ ಅಧಿಕ ಮತಗಳಿಂದ ತಮ್ಮನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.

ದೇಶಕ್ಕೆ ಮೋದಿ- ಬಳ್ಳಾರಿಗೆ ಶ್ರೀರಾಮುಲು: ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬೇಕಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ದೇಶವನ್ನು ಗೆಲ್ಲಿಸಬೇಕು. ಭಾರತವನ್ನು ವಿಶ್ವಗುರುವನ್ನಾಗಿಸಬೇಕಿದೆ. ದೇಶಕ್ಕೆ ನರೇಂದ್ರ ಮೋದಿ-ಬಳ್ಳಾರಿಗೆ ಶ್ರೀರಾಮುಲು ಎಂಬ ಸಂಕಲ್ಪವನ್ನು ನಾವು ಕೈಗೊಳ್ಳಬೇಕಿದೆ. ಶ್ರೀರಾಮುಲು ಅವರನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಸಬೇಕು ಎಂದರು.ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ನರೇಂದ್ರ ಮೋದಿಯವರ ೧೦ ವರ್ಷದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಮನಮೋಹನ್‌ಸಿಂಗ್ ಅವರ 10 ವರ್ಷದ ಆಡಳಿತಾವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ರೂಪದಲ್ಲಿ ರಾಜ್ಯಕ್ಕೆ ಬಂದಿದ್ದು ₹೮೨ ಸಾವಿರ ಕೋಟಿ. ನರೇಂದ್ರ ಮೋದಿಯ ೧೦ ವರ್ಷದ ಆಡಳಿತಾಧಿಯಲ್ಲಿ ರಾಜ್ಯಕ್ಕೆ ತೆರಿಗೆ ರೂಪದಲ್ಲಿ ₹೨.೮೨ ಲಕ್ಷ ಕೋಟಿ ಬಂದಿದೆ. ಯುಪಿಎ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ಅಭಿವೃದ್ಧಿ ಕಾರ್ಯಗಳಿಗಾಗಿ ದೊರೆತದ್ದು ₹೬೨ ಸಾವಿರ ಕೋಟಿಯಾದರೆ, ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ದೊರೆತದ್ದು ₹೨.೩೬ ಲಕ್ಷ ಕೋಟಿ. ಇದನ್ನು ಸಿದ್ದರಾಮಯ್ಯ ಹೇಳುತ್ತಿಲ್ಲ ಎಂದರು.ಎಚ್. ಹನುಮಂತಪ್ಪ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಸಂಡೂರು ಮಂಡಲ ಘಟಕದ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ ಬಿಜೆಪಿ ಸಾಧನೆ ಕುರಿತು ಮಾತನಾಡಿದರು. ಆರ್.ಟಿ. ರಘುನಾಥ್ ಕಾರ್ಯಕ್ರಮ ನಿರೂಪಿಸಿದರು. ರವಿಕಾಂತ್ ಭೋಸ್ಲೆ ಸ್ವಾಗತಿಸಿದರು. ಪ್ರವೀಣ್ ವಂದಿಸಿದರು. ಪಕ್ಷದ ಮುಖಂಡರಾದ ಯರಿಸ್ವಾಮಿ ಕರಡಿ, ಡಿ.ಕೃಷ್ಣಪ್ಪ, ದೀಪಾ ಘೋಡ್ಕೆ, ಪುಷ್ಪಾ, ಸೋಮನಗೌಡ, ಉಡೇದ ಸುರೇಶ್, ಕುಮಾರನಾಯ್ಕ, ವಿ.ಕೆ. ಬಸಪ್ಪ, ನರಸಪ್ಪ, ರಾಮಕೃಷ್ಣ, ಓಬಳೇಶ್, ದೇವೇಂದ್ರಪ್ಪ, ಅಜಯ್ ಮಂದಾನ, ದರೋಜಿ ರಮೇಶ್, ಅಡಿವೆಪ್ಪ, ಪುರುಷೋತ್ತಮ, ವಿ.ಎಸ್. ಶಂಕರ್, ಪಕ್ಷದ ಬೂತ್ ಸಮಿತಿ ಅಧ್ಯಕ್ಷರು, ಸದಸ್ಯರು, ಶಕ್ತಿ ಕೇಂದ್ರದ ಪ್ರಮುಖರು, ಬಿಜೆಪಿ ಮಂಡಲ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.