ಸಾರಾಂಶ
ಮಾಗಡಿ ತಾಲೂಕಿನ ಚಕ್ರಬಾವಿ ಹಾಲು ಉತ್ಪಾದಕರ ಸಹಕಾರ ಸಂಘದ ಏಳಿಗೆಗಾಗಿ ಪ್ರಯತ್ನಿಸುತ್ತೇನೆ ಎಂದು ಡೇರಿ ಪ್ರಭಾರ ಅಧ್ಯಕ್ಷ ಪುಟಾಣಿ ಕುಮಾರ್ ಹೇಳಿದರು. ಚಕ್ರಬಾವಿ ಹಾಲು ಉತ್ಪಾದಕರ ಸಹಕಾರಿ ಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
-ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಡೇರಿ ಪ್ರಭಾರ ಅಧ್ಯಕ್ಷ ಪುಟಾಣಿ ಕುಮಾರ್ ಭರವಸೆಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಚಕ್ರಬಾವಿ ಹಾಲು ಉತ್ಪಾದಕರ ಸಹಕಾರ ಸಂಘದ ಏಳಿಗೆಗಾಗಿ ಪ್ರಯತ್ನಿಸುತ್ತೇನೆ ಎಂದು ಡೇರಿ ಪ್ರಭಾರ ಅಧ್ಯಕ್ಷ ಪುಟಾಣಿ ಕುಮಾರ್ ಹೇಳಿದರು.ಚಕ್ರಬಾವಿ ಹಾಲು ಉತ್ಪಾದಕರ ಸಹಕಾರಿ ಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ಅಧ್ಯಕ್ಷರಾಗಿದ್ದ ದಿ.ಎಚ್.ಜಿ.ನಾರಾಯಣಸ್ವಾಮಿಯವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ನಿರ್ದೇಶಕರೆಲ್ಲರೂ ಅಧ್ಯಕ್ಷರಾಗಿ ಮುಂದುವರಿಸಿದರೆ ಸಂಘದ ಕಟ್ಟಡಕ್ಕೆ ಚಕ್ರಬಾವಿ ಗ್ರಾಮದಲ್ಲಿ ವೈಯಕ್ತಿಕವಾಗಿ 2 ಗುಂಟೆ ಉಚಿತ ನಿವೇಶನ ನೀಡುತ್ತೇನೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ಸಂಘ ಲಾಭದಾಯಕವಾಗಿ ನಡೆಯುತ್ತಿದ್ದು ಈ ವರ್ಷ 12 ಲಕ್ಷ ರು. ನಿವ್ವಳ ಲಾಭ ಗಳಿಸಿದೆ. 3.60 ಲಕ್ಷ ಲಾಭ ಗಳಿಸಿದೆ. ಪ್ರತಿ ವರ್ಷ ಸದಸ್ಯರಿಗೆ ಬೋನಸ್ ವಿತರಿಸುತ್ತಿದೆ. ಮರಣ ಹೊಂದಿದ ಕುಟುಂಬಕ್ಕೆ 3 ಸಾವಿರ ರು., ರಾಸು ಮರಣ ಹೊಂದಿದರೆ ಒಂದು ಸಾವಿರ ರು., ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರೋತ್ಸಾಹ ಧನವಾಗಿ 2 ಸಾವಿರ ರು., ಪಿಯುಸಿವಿದ್ಯಾರ್ಥಿಗಳಿಗೆ 3 ಸಾವಿರ ರು. ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಪ್ರತಿದಿನ ಸಂಘದಲ್ಲಿ 1400 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ ಎಂದರು.ತಾಲೂಕು ವಿಸ್ತರಣಾಧಿಕಾರಿ ಸಿದ್ದರಾಜು ಮಾತನಾಡಿ, ಬಮೂಲ್ ವತಿಯಿಂದ ರೈತರಿಗೆ ಹಾಲು ಕರೆಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರವನ್ನು ಸಬ್ಸಿಡಿಯಲ್ಲಿ ವಿತರಿಸಲಾಗುತ್ತಿದೆ ಎಂದರು.
ಆರು ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಂಘದ ನಿರ್ದೇಶಕರಾದ ಸಿ.ಎಂ.ಮಹೇಶ್, ಜಗದೀಶ್, ರಾಮಣ್ಣ ಶೆಟ್ಟಿ, ಯಶೋಧಮ್ಮ, ರಾಮಚಂದ್ರ, ಚಂದ್ರಯ್ಯ, ಜಗದಾಂಭ, ಭೈರಪ್ಪ, ಗ್ರಾಮದ ಮುಖಂಡರಾದ ಯೋಗನರಸಿಂಹಯ್ಯ, ದೀಪಕ್, ಕಿರಣ್, ಅಂಗಡಿ ಸುರೇಶ್, ಸ್ವಾಮಿ, ತಿಪ್ಪಲಿಂಗಯ್ಯ, ಹಾಲು ಪರೀಕ್ಷಕ ಗಿರೀಶ್, ಸಹಾಯಕ ನಾಗೇಶ್ ಇತರರಿದ್ದರು.