ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೊದಲ ಹಂತವಾಗಿ ₹200 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಫೆ. 8ರಂದು ಮುಖ್ಯಮಂತ್ರಿಗಳಿಂದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಹುಬ್ಬಳ್ಳಿ: ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೊದಲ ಹಂತವಾಗಿ ₹200 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಫೆ. 8ರಂದು ಮುಖ್ಯಮಂತ್ರಿಗಳಿಂದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಗಾಗಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಕಳೆದ 8-10 ವರ್ಷಗಳಿಂದ ಶ್ರಮಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿರುವ ಸ್ಥಳವನ್ನು ಶನಿವಾರ ಪರಿಶೀಲಿಸಿ ಮಾತನಾಡಿದರು.

ಬೆಣ್ಣೆಹಳ್ಳದ ಅಭಿವೃದ್ಧಿ ಕಾರ್ಯವನ್ನು ಡಿಪಿಆರ್ ಮೂಲಕವೇ ಮಾಡಬೇಕು. ₹200 ಕೋಟಿ ಸಾಲಲ್ಲ ಎಂದು ಬಿಜೆಪಿ ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರೇ ಅಧಿಕಾರದಲ್ಲಿದ್ದರು. ಅವರೇ ಈ ಕೆಲಸ ಮಾಡಬಹುದಿತ್ತು. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದಾಗಲೇ ಅವರು ಮಾಡಿಲ್ಲ. ಹತ್ತು ವರ್ಷಗಳ ಕಾಲ ಬಿಜೆಪಿ ಸರ್ಕಾರ ಇದ್ದಾಗಲೇ ಬೆಣ್ಣೆ ಹಳ್ಳದಿಂದ ಒಂದು ಗೇಣು ಮಣ್ಣನ್ನು ತೆಗೆದಿಲ್ಲ. ಇದೀಗ ನಾವು ಅಧಿಕಾರಕ್ಕೆ ಬಂದ ಮೇಲೆ ₹200 ಕೋಟಿ ವೆಚ್ಚ ಮಾಡಿ ಮಣ್ಣನ್ನು ತೆಗೆಯುತ್ತಿದ್ದೇವೆ. ಬಿಜೆಪಿಯವರಿಗೆ ಅಷ್ಟೊಂದು ಕಾಳಜಿ ಇದ್ದರೆ ಪ್ರಧಾನಿಗಳಿಗೆ ಹೇಳಿ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡಲಿ ಎಂದು ಟೀಕಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಈ ಹಿಂದೆ ನಾನು ಶಾಸಕನಾಗಿದ್ದಾಗ ಬೆಣ್ಣೆ ಹಳ್ಳ ಅಭಿವೃದ್ಧಿಗೆ ಸರ್ಕಾರ ₹90 ಲಕ್ಷ ಹಣವನ್ನು ಡಿಪಿಆರ್‌ಗೆ ನೀಡಿತ್ತು. ಆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದವರು ಪರಮಶಿವಯ್ಯ ಅವರ ವರದಿಯನ್ನು ಮಾಡಿದ್ದನ್ನು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ಇದೀಗ ಮತ್ತೆ ನಾನು ಶಾಸಕನಾದ ಮೇಲೆ ₹200 ಕೋಟಿ ಹಣವನ್ನು ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಸರ್ಕಾರ ನೀಡಿದೆ. ಇದು ಮೊದಲ ಹಂತದ ಕಾಮಗಾರಿಯಾಗಿದೆ. 141 ಕಿ.ಮೀ. ಬೆಣ್ಣೆ ಹಳ್ಳ ಹರಿಯುತ್ತದೆ. ಕುಂದಗೋಳ ತಾಲೂಕಿನ ಯರಿ ನಾರಾಯಣಪುರದಿಂದ ಹಳ್ಳದ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಅಲ್ಲದೇ ಗುತ್ತಿಗೆದಾರರೇ ಎರಡು ವರ್ಷಗಳ ಕಾಲ ನಿರ್ವಹಣೆ ಮಾಡಲಿದ್ದಾರೆ ಎಂದರು.

ಪ್ರಸ್ತುತ ಕಾಮಗಾರಿಯನ್ನು ವಿದೇಶಿ ತಂತ್ರಜ್ಞಾನವಾದ ಎಕ್ರಾಸ್ ಮಾಡಲ್ ಮೂಲಕ ಮಾಡಲಾಗುತ್ತಿದೆ. ಈ ಯೋಜನೆಯಿಂದ ರೈತರ ಹೊಲ ಹೋಗುವುದಿಲ್ಲ. ಬಿಜೆಪಿ ಟೀಕೆಗಳು ನನಗೆ ಮಾರ್ಗದರ್ಶನ. ಈ ಯೋಜನೆಯನ್ನು ಪರಮಶಿವಯ್ಯ ಅವರ ವರದಿಯಂತೆ, ವಿದೇಶಿ ತಂತ್ರಜ್ಞಾನದಿಂದ ಮಾಡಲಾಗುತ್ತಿದೆ. 18 ತಿಂಗಳ ಅವಧಿ ಒಳಗಾಗಿಯೇ ಕಾರ್ಮಗಾರಿ ಪೂರ್ಣಗೊಳಿಸುತ್ತೇವೆ ಎಂದರು.

ಈ ವೇಳೆ ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಜಿಪಂ ಸಿಇಒ ಭುವನೇಶ ಪಾಟೀಲ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಡಿಎಚ್‌ಒ ಡಾ. ಎಂ.ಎಚ್. ಹೊನಕೇರಿ ಸೇರಿದಂತೆ ಹಲವರಿದ್ದರು.