ಆತ್ಮವಿಶ್ವಾಸ, ಬರವಣಿಗೆಯ ವೇಗ ಮತ್ತು ಉತ್ತರಗಳ ಗುಣಮಟ್ಟ ಹೆಚ್ಚಾಗುತ್ತದೆ

ಬಳ್ಳಾರಿ: ಸಿರುಗುಪ್ಪ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರ ಅಂತಿಮ ಪರೀಕ್ಷಾ ಸಿದ್ಧತೆಗಾಗಿ ಪ್ರೇರಣಾತ್ಮಕ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಸಿರುಗುಪ್ಪದ ಶಸ್ತ್ರಚಿಕಿತ್ಸಕರು ಹಾಗೂ ಸೃಜನಾ ಫೌಂಡೇಶನ್ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು ಉಪನ್ಯಾಸ ನೀಡಿ, ಇನ್ನೂ ಸುಮಾರು ಐದು ವಾರಗಳು ಮಾತ್ರ ಉಳಿದಿರುವ ಪರೀಕ್ಷೆಗಳ ಹಿನ್ನೆಲೆಯಲ್ಲಿ ಕಡಿಮೆ ಸಮಯದಲ್ಲಿ ಪರಿಣಾಮಕಾರಿಯಾಗಿ ಓದನ್ನು ಯೋಜಿಸುವ ವಿಧಾನಗಳ ಕುರಿತು ಮಾರ್ಗದರ್ಶನ ನೀಡಿದರು.

ಮೂರು ಗಂಟೆಗಳ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ, ಅಂಕಗಳ ಪ್ರಮಾಣಕ್ಕೆ ಅನುಗುಣವಾಗಿ ಉತ್ತರ ಬರೆಯುವ ತಂತ್ರ, ಗುಂಪು ಅಧ್ಯಯನದ ಮಹತ್ವ, ಹಾಗೂ ಅಂತಿಮ ಪರೀಕ್ಷೆಗೆ ಮೊದಲು ಕನಿಷ್ಠ 10 ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನಿಜವಾದ ಪರೀಕ್ಷೆಯಂತೆ ಬರೆಯುವ ಅಭ್ಯಾಸ ಮಾಡುವ ಅಗತ್ಯತೆಯನ್ನು ವಿವರಿಸಿದರು. ಇದರಿಂದ ಆತ್ಮವಿಶ್ವಾಸ, ಬರವಣಿಗೆಯ ವೇಗ ಮತ್ತು ಉತ್ತರಗಳ ಗುಣಮಟ್ಟ ಹೆಚ್ಚಾಗುತ್ತದೆ ಎಂದು ತಿಳಿಸಿದರು.ಧನಾತ್ಮಕ ಮನೋಭಾವದ ಮಹತ್ವ, ಮೊಬೈಲ್ ಹಾಗೂ ಇಂಟರ್ನೆಟ್ ಅತಿಯಾದ ಬಳಕೆಯ ದುಷ್ಪರಿಣಾಮಗಳು, ಮತ್ತು ಜೀವನದಲ್ಲಿ ಎದುರಿಸುವ ಸೋಲುಗಳನ್ನು ಧೈರ್ಯದಿಂದ ಎದುರಿಸಿ ಸಾಧಿಸಬೇಕೆಂಬ ಸಂದೇಶವನ್ನು ಪ್ರಸಿದ್ಧ ವ್ಯಕ್ತಿಗಳ ಜೀವನಾನುಭವಗಳನ್ನು ಪಿಪಿಟಿ ಮೂಲಕ ವಿವರಿಸಿರು.

ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ನರಸಿಂಹಮೂರ್ತಿ ಅವರು ತಮ್ಮ ಹಾಸ್ಯಮಯ ಹಾಗೂ ಅರ್ಥಪೂರ್ಣ ಮಾತುಗಳ ಮೂಲಕ ವಿದ್ಯಾರ್ಥಿನಿಯರ ಪರೀಕ್ಷಾ ಪೂರ್ವ ಆತಂಕವನ್ನು ತಗ್ಗಿಸಿ, ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ್ ಯಾದವ್ ಅವರು ವಹಿಸಿದ್ದು, ಶಿಕ್ಷಕರಾದ ಶ್ರೀ ಜೀವೇಶ್ ಕುಲಕರ್ಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.