ಸಾರಾಂಶ
ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ ಸಂಸ್ಥೆಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಿ.ಕೃಷ್ಣ ರಾವ್ ನರ್ಸರಿ ಮತ್ತು ನರ್ಸರಿಯ ಉದ್ಯಮಗಳ ಪ್ರಾಮುಖ್ಯತೆ ರೈತರಿಗೆ ತಿಳಿಸಿದರು.
ಬಳ್ಳಾರಿ: ನಗರದ ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ ಸಂಸ್ಥೆಯ ಸಂಶೋಧನಾ ಕೇಂದ್ರದಿಂದ (ಐಸಿಎಆರ್) ಬೆಳಗಲ್ ತಾಂಡಾದ ಎಸ್‍ಸಿಎಸ್‍ಪಿ ರೈತರಿಗೆ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಪ್ರಸರಣ ಮತ್ತು ನರ್ಸರಿ ನಿರ್ವಹಣೆ ಕುರಿತು ಮೂರು ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ ಸಂಸ್ಥೆಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಿ.ಕೃಷ್ಣ ರಾವ್ ನರ್ಸರಿ ಮತ್ತು ನರ್ಸರಿಯ ಉದ್ಯಮಗಳ ಪ್ರಾಮುಖ್ಯತೆ ರೈತರಿಗೆ ತಿಳಿಸಿದರು.ನರ್ಸರಿಯಲ್ಲಿ ಯಶಸ್ವಿ ಕಂಡುಕೊಂಡ ರೈತರು ಅನುಭವ ಹಂಚಿಕೊಂಡರು.ಸಹಾಯಕ ತೋಟಗಾರಿಕಾ ಅಧಿಕಾರಿ ಮತ್ತು ಸಲಹೆಗಾರ ಸುರೇಂದ್ರ ಕುಮಾರ್, ಸರ್ಕಾರದ ಯೋಜನೆಗಳಲ್ಲಿ ಲಭ್ಯವಿರುವ ಯೋಜನೆಗಳು, ಸಹಾಯಧನ ಮತ್ತು ಸಹಾಯದ ಕುರಿತು ರೈತರಿಗೆ ತಿಳಿಸಿದರು.
ಬಳಿಕ ಮುನಿರಾಬಾದ್ ನಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಕ್ಕೆ ಭೇಟಿ ನೀಡಿ, ಪ್ರಶಿಕ್ಷಣಾರ್ಥಿಗಳು ನರ್ಸರಿಯ ಮೂಲಸೌಕರ್ಯ ಮತ್ತು ಔಷಧೀಯ ಸಸ್ಯಗಳ ಪ್ರಸರಣ ವಿಧಾನಗಳ ಬಗ್ಗೆ ವಿವರಿಸಲಾಯಿತು.ಅಲ್ಲಿನ ಗೋಡಂಬಿ ತೋಟಗಳಿಗೆ ಭೇಟಿ ನೀಡಿ ತಮ್ಮ ಗ್ರಾಮದಲ್ಲಿ ಗೋಡಂಬಿ ಬೆಳೆ ಕೃಷಿ, ತಳಿಗಳು ಮತ್ತು ಸಾಧ್ಯತೆಗಳ ಬಗ್ಗೆ ತಿಳಿದುಕೊಂಡರು. ಕಾಲೇಜು ಕ್ಯಾಂಪಸ್‍ನಲ್ಲಿರುವ ಔಷಧೀಯ ಮತ್ತು ಸುಗಂಧ ಸಸ್ಯಗಳ ಉದ್ಯಾನ ಮತ್ತು ಪ್ರಸರಣ ಪಾಲಿಹೌಸ್‍ಗಳಿಗೆ ಭೇಟಿ ನೀಡಿದರು.ಮೂರನೇ ದಿನದಂದು ಬಳ್ಳಾರಿಯ ತೋಟಗಾರಿಕೆ ಇಲಾಖೆಯ ನರ್ಸರಿಗೆ ಭೇಟಿ ನೀಡಿ, ಅಲಂಕಾರಿಕ ಸಸ್ಯ ಮತ್ತು ಹಣ್ಣಿನ ಗಿಡಗಳಲ್ಲಿ ಅಳವಡಿಸಿಕೊಂಡಿರುವ ಪ್ರಸರಣ ತಂತ್ರಗಳ ಬಗ್ಗೆ ತಿಳಿದುಕೊಂಡರು.ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಯೋಗೇಶ್ವರ್ ಅಲಂಕಾರಿಕ ಗಿಡಗಳು ಮತ್ತು ಅವುಗಳ ಮಹತ್ವದ ಬಗ್ಗೆ ವಿವರಿಸಿದರು. ಜಿಲ್ಲಾ ಪಂಚಾಯತ್‍ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯಾ ಯರಗಲ್ ಅವರು ಇಲಾಖಾ ಯೋಜನೆಗಳು ಮತ್ತು ಸಹಾಯಧನಗಳ ಬಗ್ಗೆ ವಿವರಿಸಿದರು.ಕಾರ್ಯಾಗಾರದಲ್ಲಿ ಬೆಳಗಲ್ ತಾಂಡಾ ಗ್ರಾಮದ ಒಟ್ಟು 25 ರೈತರು ಭಾಗವಹಿಸಿದ್ದರು.