ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾವು ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಕ್ರಮ ವಹಿಸುತ್ತಿದ್ದು, 18 ವರ್ಷದ ಒಳಗಿನ ಮಕ್ಕಳ ಮಾಹಿತಿ ಪಡೆದು ಮಕ್ಕಳು ಶಾಲೆಯಿಂದ ಹೊರಗುಳಿದ ಅಥವಾ ಯುಡಿಐಡಿ ಕಾರ್ಡ್‌ ಅಥವಾ ಚಿಕಿತ್ಸೆ ಬಗ್ಗೆ ಗಮನ ಹರಿಸಿ ಮಕ್ಕಳ ಶ್ರೇಯಸ್ಸಿಗೆ ತಾವು ಕೆಲಸವನ್ನು ನಿರ್ವಹಿಸಬೇಕಿದೆ.

ಧಾರವಾಡ:

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳು ಜಂಟಿಯಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯಶಸ್ವಿಯಾಗಿ ಜರುಗಿತು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾವು ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಕ್ರಮ ವಹಿಸುತ್ತಿದ್ದು, 18 ವರ್ಷದ ಒಳಗಿನ ಮಕ್ಕಳ ಮಾಹಿತಿ ಪಡೆದು ಮಕ್ಕಳು ಶಾಲೆಯಿಂದ ಹೊರಗುಳಿದ ಅಥವಾ ಯುಡಿಐಡಿ ಕಾರ್ಡ್‌ ಅಥವಾ ಚಿಕಿತ್ಸೆ ಬಗ್ಗೆ ಗಮನ ಹರಿಸಿ ಮಕ್ಕಳ ಶ್ರೇಯಸ್ಸಿಗೆ ತಾವು ಕೆಲಸವನ್ನು ನಿರ್ವಹಿಸಬೇಕಿದೆ. ಸಮಾಜದಲ್ಲಿ ವಿಕಲಚೇತನ ಮಕ್ಕಳನ್ನು ಅಕ್ಕಪಕ್ಕದವರು ದುರ್ಬಳಕೆ ಮಾಡುತ್ತಿರುವುದು ಸಹ ಗಮನಿಸಬೇಕು. 18 ವರ್ಷದೊಳಗಿನ ಮಕ್ಕಳ ಹಕ್ಕುಗಳನ್ನು ಗಮನಿಸಿ ಉಲ್ಲಂಘನೆಯಾದ ಸಂದರ್ಭದಲ್ಲಿ ಪ್ರತಿಭಟಿಸುವಂತೆ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಮಾತನಾಡಿ, ಮಹಿಳೆಯರಿಗೆ, ದುರ್ಬಲರಿಗೆ, ಮಕ್ಕಳ ನಿರ್ಗತಿಕರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಕೊಡಲಾಗುತ್ತಿದೆ. ಪ್ರಾಧಿಕಾರ ಸಹಭಾಗಿತ್ವವಹಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಸಹ ಮಾಡುತ್ತಿದೆ. ರಸ್ತೆ ಸಾರಿಗೆ ಸಪ್ತಾಹ, ಪೋಕ್ಸೋ, ಬಾಲ್ಯ ವಿವಾಹ ಮುಕ್ತ ಭಾರತ ಹೀಗೆ ವಿವಿಧ ಕಾನೂನುಗಳ ಕುರಿತು ಅರಿವು ಮೂಡಿಸುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿದರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಮಾತನಾಡಿದರು. ಮಕ್ಕಳ ರಕ್ಷಣೆಗಾಗಿ ಇರುವ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ ಕುರಿತು ತರಬೇತುದಾರರಿಗೆ ಹರೀಶ ಜೋಗಿ ಉಪನ್ಯಾಸ ನೀಡಿದರು. ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಕೆ. ತಹಶಿಲ್ದಾರ ಕಾರ್ಯಕ್ರಮ ನಿರೂಪಿಸಿದರು.