ಸಾರಾಂಶ
ಶ್ರೀ ಚಿತ್ರದುರ್ಗದ ಮೇದಾರ ಕೇತೇಶ್ವರ ಗುರುಪೀಠದ ಪೀಠಾಧಿಪತಿ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿಗಳು ದಿವ್ಯ ಸಾನಿಧ್ಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್, ಕಾಗಿನೆಲೆ ಮಹಾ ಸಂಸ್ಥಾನ ಕನಕಗುರುಪೀಠ ತಿಂತಿಣಿ, ಶ್ರೀಮೇದಾರ ಕೇತೇಶ್ವರ ಗುರುಪೀಠ ಚಿತ್ರದುರ್ಗದ ಇವರ ಸಂಯುಕ್ತಾಶ್ರಯದಲ್ಲಿ ಆ.9 ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ನಗರದ ಬಂಬೂ ಬಜಾರ್‌ನ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ 30ನೇ ವಿಶ್ವ ಆದಿವಾಸಿ ದಿನಾಚರಣೆ ಆಯೋಜಿಸಲಾಗಿದೆ ಎಂದು ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್ ಹೇಳಿದರು.
ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ದೇವದುರ್ಗ ತಾಲೂಕಿನ ತಿಂತಿಣಿ , ವೀರಗೋಟದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕಗುರು ಪೀಠದ ಶ್ರೀ ಸಿದ್ದ ರಾಮಾನಂದ ಮಹಾ ಸ್ವಾಮಿಗಳು, ಶ್ರೀ ಚಿತ್ರದುರ್ಗದ ಮೇದಾರ ಕೇತೇಶ್ವರ ಗುರುಪೀಠದ ಪೀಠಾಧಿಪತಿ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.ಸ್ವಯಂ ಪ್ರೇರಿತ ಪ್ರತ್ಯೇಕತೆ ಮತ್ತು ಆರಂಭಿಕ ಸಂಪರ್ಕದಲ್ಲಿಯ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುವುದು ಘೋಷ ವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಆದಿವಾಸಿ ಪರಿಷತ್ ನ ರಾಜ್ಯಾಧ್ಯಕ್ಷ ಕೃಷ್ಣಯ್ಯ ವಹಿಸಲಿದ್ದಾರೆ ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದ ಜನಜೀವನದ ಬಗ್ಗೆ ಸಂಶೋಧನೆ ನಡೆಸಿ ಪಿಎಚ್ ಡಿ ಪದವಿ ಪಡೆದಿರುವ ಮೂಲ ಆದಿವಾಸಿ ಸಮುದಾಯದ 24 ಮಂದಿ ಪದವೀಧರರಿಗೆ ಆದಿವಾಸಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಅವರೊಂದಿಗೆ ಇದೇ ಸಂದರ್ಭದಲ್ಲಿ ಹಂಪಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬುಡಕಟ್ಟು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ ರಾಗಿರುವ ಹಾಗೂ ಕರ್ನಾಟಕ ರಾಜ್ಯ ಆದಿವಾಸಿ ಪರಿಷತ್‌ನ ಗೌರವಾಧ್ಯಕರಾಗಿರುವ ಪ್ರೋ. ಡಾ.ಕೆ.ಎಂ. ಮೇತ್ರಿಯವರಿಗೆ ಅಭಿನಂದನೆ ಸಲ್ಲಿಸಲಾಗುವುದು.ಪ್ರಶಸ್ತಿ ಗಳನ್ನು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, 2024 ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನ ಮೋಥಾ ಹಾಡಿ ಸೋಮಣ್ಣ ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಾವಣಗೆರೆ ಸಂಸದ ಡಾ.ಪ್ರಭಾ ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಭಾಗವಹಿಸಲಿದ್ದಾರೆ.ಬೆಳಿಗ್ಗೆ 9.30 ಕ್ಕೆ ದಾವಣಗೆರೆ ಗಾಂಧಿ ವೃತ್ತದಿಂದ ಮಲ್ಲಿಕಾರ್ಜುನ ಕಲ್ಯಾಣ ಮಂದಿರದವರೆಗೂ ಆದಿವಾಸಿ ಕಲಾತಂಡಗಳು ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಮೂಲ ಆದಿವಾಸಿ ಗಳು, ಮುಖಂಡರೊಂದಿಗೆ ವೈಭವಯುತ ಕಲಾ ಮೇಳ ಮೆರವಣಿಗೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಆದಿವಾಸಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಗೌಡ ಮಾತನಾಡಿ, ಮೂಲ ಬುಡಕಟ್ಟುಗಳ ಪ್ರತಿಭಾನ್ವಿತರನ್ನು ಗುರುತಿಸಿ ಆದಿವಾಸಿ ಸಿರಿ ಪ್ರಶಸ್ತಿ ನೀಡಬೇಕೆಂಬುದು ಪರಿಷತ್ತಿನ ಬಹು ವರ್ಷಗಳ ಬೇಡಿಕೆಯನ್ನು ಸರ್ಕಾರ ಪರಿಗಣಿಸದಿರುವುದರಿಂದ ಪರಿಷತ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳು, ಕಲಾವಿದರನ್ನು ಗುರುತಿಸಿ ಆದಿವಾಸಿ ಸಿರಿ ಪ್ರಶಸ್ತಿ ನೀಡುತ್ತಾ ಬಂದಿದ್ದು, ಅದರಂತೆ ಈ ಬಾರಿಯೂ 24 ಮಂದಿಗೆ ಗೌರವಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಡೆನೆರಳು ಶಂಕರ್, ಮೂಡಿಗೆರೆ ಲ್ಯಾಂಪ್ಸ್ ಅಧ್ಯಕ್ಷ ವಿಜಯೇಂದ್ರ ,ಡೋಂಗ್ರಿ ಗರಾಸಿಯ ಸಮುದಾಯದ ಮುಖಂಡ ಶಿವಾಜಿ, ಜಿಲ್ಲಾ ಸಮಿತಿಯ ಸದಸ್ಯರಾದ ಮಹೇಶ್ ಮೇದಾರ್, ರಮೇಶ್ ಇದ್ದರು.ಪೋಟೋ ಫೈಲ್ ನೇಮ್ 7 ಕೆಸಿಕೆಎಂ 3