ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ ಹಾಗೂ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆ ವತಿಯಿಂದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಾಗೃತಿ ಜಾಥಾ, ಬೀದಿ ನಾಟಕ ಆಯೋಜಿಸಲಾಗಿತ್ತು.ನಗರದ ಕುಕ್ಕರಹಳ್ಳಿಯಲ್ಲಿನ ಸರ್ಕಾರಿ ಶಾಲಾ ಆವರಣದಲ್ಲಿ ಪ್ರಾರಂಭಗೊಂಡ ಜಾಗೃತಿ ಜಾಥಾ ಕುಕ್ಕರಹಳ್ಳಿ, ಕುವೆಂಪುನಗರ, ಸರಸ್ವತಿಪುರಂ ಬಡಾವಣೆಯ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿತು.
ಸಾರ್ವಜನಿಕರಿಗೆ ಮಾಹಿತಿ ಒಳಗೊಂಡ ಒತ್ತಿಗೆಗಳನ್ನು ನೀಡಿ ಅರಿವು ಮೂಡಿಸಲಾಯಿತು. ಶಾಲೆಯ ಮಕ್ಕಳು ಮತ್ತು ಬಸವಮಾರ್ಗ ವ್ಯಸನಮುಕ್ತ ಕೇಂದ್ರದ ಶಿಬಿರಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.ಬ್ಯಾಂಡ್‌ಸೆಟ್ ಸದ್ದಿನೊಂದಿಗೆ ಹೆಚ್ಚೆ ಹಾಕಿದ ವಿದ್ಯಾರ್ಥಿಗಳು, ಕೂಡಿಬಾಳಿದರೆ ಸ್ವರ್ಗ, ಕುಡಿದು ಬಾಳಿದರೆ ನರಕ, ದೂಮಪಾನ, ಮದ್ಯಪಾನ, ಆರೋಗ್ಯಕ್ಕೆ ಹಾನಿಕರ, ಮದ್ಯ ಮುಕ್ತರಾಗಿ ಬಾಳಿ ಎಂಬುದು ಸೇರಿದಂತೆ ಅರಿವು ಮೂಡಿಸುವ ನಾನಾ ಫಲಕಗಳನ್ನು ಕೈಯಲ್ಲಿ ಹಿಡಿದು ಬಿರುಸಾಗಿ ಸಾಗಿದರು.
ಯಮನ ವೇಷ ಧರಿಸಿದ್ದ ಇಬ್ಬರು ಕಲಾವಿದರ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಯಿತು. ಮಾದಕ ವಸ್ತುಗಳಿಗೆ ದಾಸರಾಗದಂತೆ ಸಂದೇಶ ಸಾರಲಾಯಿತು. ಪ್ರಮುಖ ವೃತ್ತಗಳಲ್ಲಿ ನೃತ್ಯ ಮಾಡಿ, ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾರ್ಥಿಗಳು ಜಾಥಾಕ್ಕೆ ಕಳೆ ತಂದರು.ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರದ ಅಧ್ಯಕ್ಷ ಎಸ್. ಬಸವರಾಜು, ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸದಸ್ಯ ಮಲ್ಲೇಶ್ ಹಸಿರು ನಿಶಾನೆ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಅಂತಃಕರಣ ತಟ್ಟಿದ ಬೀದಿ ನಾಟಕಜಾಗೃತಿ ಜಾಥಾದೊಂದಿಗೆ ಕುಕ್ಕರಹಳ್ಳಿ ವೃತ್ತದ ಬಳಿ ಇರುವ ರಾಮ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಬೀದಿ ನಾಟಕ ಸಾರ್ವಜನಿಕರ ಅಂತಃಕರಣ ತಟ್ಟಿತು. ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿಶ್ವನಾಥ್ ಅವರ ಮೈಸೂರು ಫೋಕ್ ಸ್ಟಾರ್ಸ್ ಬ್ಯಾಂಡ್ ತಂಡದ ಕಲಾವಿದರಾದ ರೂಬಿನ್ ಸಂಜಯ್, ಸಿಂಚನಾ, ಪುಷ್ಪಲತಾ, ಪ್ರಜ್ವಲ್ ಹಾಗೂ ವಿನೋದ್ ಮನಕಲಕುವಂತೆ ಅಭಿನಯಿಸಿದರು. ಕುಟುಂಬ, ಸಮಾಜ, ಆರೋಗ್ಯ ಹಾಗೂ ಮಕ್ಕಳು ಹಾಗೂ ಯುವಕರ ಮೇಲೆ ಕುಡಿತ ಹೇಗೆ ಪರಿಣಾಮ ಬೀರುತ್ತದೆ. ಅದರಿಂದ ಆಗುವ ತೊಂದರೆಗಳು ಏನು ಎಂಬುದರ ಕುರಿತು ಮನೋಜ್ಞವಾಗಿ ಅಭಿನಯಿಸಿದರು. ಆ ಮೂಲಕ ಆವರಣದಲ್ಲಿ ನೆರೆದಿದ್ದವರ ಕಣ್ಣು ತೆರೆಸಿದರು. ನೋಡುಗರಿಂದ ಸಿಳ್ಳೆ, ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡು ಮೆಚ್ಚುಗೆ ಪಡೆದರು.
---ಬಾಕ್ಸ್ ಸುದ್ದಿ
ವಿಶ್ವ ಮಾದಕ ವಸ್ತು ಮುಕ್ತವಾಗಬೇಕುಕುಕ್ಕರಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ಅಧ್ಯಕ್ಷ ಎಸ್. ಬಸವರಾಜು ಅವರು, ಪ್ರತಿ ವರ್ಷ ಜೂ. 26 ರಂದು ವಿಶ್ವ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಗುತ್ತದೆ. ಸೆ. 7 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳಸಾಗಾಣಿಕೆ ತಡೆಗಟ್ಟಲು ನಿರ್ದಿಷ್ಟ ಆಚರಣೆ ಜಾರಿಗೆ ತರಬೇಕು ಎಂದು ನಿರ್ಣಯವನ್ನು ಅಂಗೀಕರಿಸಿತು.
ಆ ಬಳಿಕ ಈ ದಿನವನ್ನು ಮೊದಲು 1989 ರಲ್ಲಿ ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಇಂದಿನ ಶೇ. 70ರಷ್ಟು ಯುವ ಜನಾಂಗವು ಹಲವಾರು ದುಶ್ಚಟಗಳಿಗೆ ಮಾರು ಹೋಗುತ್ತಿದ್ದು, ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವ್ಯಸನದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ. ವಿಶ್ವದಾದ್ಯಂತ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಇದು ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬಿಇಒ ರಾಜು ಮಾತನಾಡಿ, ವ್ಯಸನವು ಆರೋಗ್ಯವನ್ನು ಹಾಳು ಮಾಡುವುದು ಮಾತ್ರವಲ್ಲದೆ ಕುಟುಂಬದ ನೆಮ್ಮದಿ ಹಾಗೂ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ಮಾದಕ ವಸ್ತುಗಳು ವ್ಯಸನಕ್ಕೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ಈ ದಿನದ ಆಚರಣೆ ಪ್ರಾರಂಭಿಸಲಾಯಿತು. ಈ ದಿನದ ಪ್ರಮುಖ ಉದ್ದೇಶ ಜನರನ್ನು ಮಾದಕ ವಸ್ತುಗಳಿಂದ ದೂರವಿಡುವುದು ಮತ್ತು ಮಾದಕ ವಸ್ತು ಕಳ್ಳಸಾಗಣೆ ತಡೆಯುವುದು. ಈ ಕ್ರಮವು ಮಕ್ಕಳು ಮತ್ತು ಯುವ ಜನರ ಭವಿಷ್ಯವನ್ನು ಉಜ್ವಲವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಶಾಲೆಯ ಮುಖ್ಯ ಶಿಕ್ಷಕ ಚಂದ್ರು ಮಾತನಾಡಿ, ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಕರು ತಮಗೆ ಅರಿವಿಲ್ಲದೇಯೆ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮಾದಕ ವ್ಯಸನವು ವ್ಯಕ್ತಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಅಷ್ಟೆ ಅಲ್ಲದೇ ಅವನ ಜೀವನವನ್ನೆ ದುರಂತಕ್ಕೆ ತಳ್ಳುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹನುಮಾನ್ ಫೌಂಡೇಷನ್ ಅಧ್ಯಕ್ಷ ಸ್ಕಂದ ಹನುಮಾನ್, ನಿವೃತ್ತ ಪೊಲೀಸ್ ಅಧಿಕಾರಿ ಶಾಂತಕುಮಾರ್ ಇದ್ದರು.---
ಕೋಟ್ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಜನತೆ ತಮ್ಮ ಜೀವನವನ್ನೆ ಹಾಳು ಮಾಡಿಕೊಂಡಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಬೇರೆಯವರಿಗೂ ಜಾಗೃತಿ ಮೂಡಿಸಿ, ವ್ಯಸನ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಬೇಕು. ಇಂದಿನ ಕಾರ್ಯಕ್ರಮ ಅದಕ್ಕೆ ಕೈ ಗನ್ನಡಿಯಾಗಿ ಅರ್ಥ ಪೂರ್ಣವಾಗಿತ್ತು.
- ಜೆ. ಕೀರ್ತನಾ, 9ನೇ ತರಗತಿ ವಿದ್ಯಾರ್ಥಿನಿ, ಕುಕ್ಕರಹಳ್ಳಿ ಸರ್ಕಾರಿ ಪ್ರೌಢ ಶಾಲೆ.---
ಮದ್ಯಪಾನದಿಂದ ದೇಹವನ್ನು ಸದೃಢವಾಗಿಟ್ಟುಕೊಳ್ಳಬಹುದು ಎಂಬ ಹುಚ್ಚು ಕಲ್ಪನೆಯಿಂದ ಅನೇಕರ ಮದ್ಯಪಾನಕ್ಕೆ ಮಾರು ಹೋಗುತ್ತಿರುವುದು ದುರ್ದೈವದ ಸಂಗತಿ. ತಂಬಾಕು ಪದಾರ್ಥ, ಮದ್ಯಪಾನ ಸೇರಿದಂತೆ ಅನೇಕ ಮಾದಕ ವಸ್ತುಗಳು ಜೀವನವನ್ನೆ ಬಲಿ ತೆಗೆದುಕೊಳ್ಳುತ್ತವೆ ಎಂಬುದರ ಕುರಿತು ಇಂದಿನ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಕೊಡಲಾಯಿತು. ನಮ್ಮಂತಹ ವಿದ್ಯಾರ್ಥಿಗಳು ಉತ್ತಮ ಹವ್ಯಾಸ ಮೈಗೂಡಿಸಿಕೊಳ್ಳಬೇಕು.- ಭಾಗ್ಯಲಕ್ಣ್ಮೀ, 8ನೇ ತರಗತಿ ವಿದ್ಯಾರ್ಥಿನಿ, ಕುಕ್ಕರಹಳ್ಳಿ ಸರ್ಕಾರಿ ಪ್ರೌಢ ಶಾಲೆ.