ಚಿಕ್ಕಅಳುವಾರದ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ

| Published : Jun 15 2024, 01:10 AM IST

ಚಿಕ್ಕಅಳುವಾರದ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಅಳುವಾರದ ಜ್ಞಾನ ಕಾವೇರಿ ಕ್ಯಾಂಪಸ್, ಕೊಡಗು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಚಿಕ್ಕಳುವಾರ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಆಲೂರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಂಬರುವ ದಿನಗಳಲ್ಲಿ ಕೊಡಗು ವಿಶ್ವ ವಿದ್ಯಾಲಯಕ್ಕೆ ಒಳಪಟ್ಟ ಎಲ್ಲಾ ಕಾಲೇಜುಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಕ್ರಮವಹಿಸುವುದಾಗಿ ಚಿಕ್ಕಳುವಾರ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಆಲೂರತಿಳಿಸಿದ್ದಾರೆ.

ಚಿಕ್ಕಅಳುವಾರದ ಜ್ಞಾನ ಕಾವೇರಿ ಕ್ಯಾಂಪಸ್, ಕೊಡಗು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇರುವ ಬಗ್ಗೆ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಡೆಂಘೀ ಜ್ವರ ಇರುವ ಕಾರಣ ರಕ್ತ ಹಾಗೂ ಪ್ಲೇಟ್‌ಲೇಟ್‌ಗಳ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಹೇಳಿದರು.

ರಕ್ತದ ಅವಶ್ಯಕತೆ ಹಾಗೂ ರಕ್ತದಾನದ ಮಹತ್ವ ಮತ್ತು ಉಪಯೋಗಗಳ ಕುರಿತು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಅರಿವು ಮೂಡಿಸಿದರು.

ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸೀನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲಿ ರಕ್ತದ ಕೊರತೆಯಾಗಬಾರದು. ರಕ್ತದ ಅವಶ್ಯಕತೆ ಇದ್ದಾಗ ತಾವು ಕೈಜೋಡಿಸುವುದಾಗಿ ತಿಳಿಸಿದರು. ಕುಲಸಚಿವ ಡಾ.ಸೀನಪ್ಪ ರಕ್ತದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ದಿನ ಅತಿ ಹೆಚ್ಚು ರಕ್ತದಾನ ಮಾಡಿ ಸನ್ಮಾನ ಸ್ವೀಕರಿಸಿದ ದಾನಿಗಳು ಶ್ರೇಷ್ಠರು. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅತಿ ಹೆಚ್ಚು ರಕ್ತದಾನ ಮಾಡಿ ಸನ್ಮಾನ ಸ್ವೀಕರಿಸುವಂತಾಗಬೇಕು ಎಂದು ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಜಿಲ್ಲಾ ಮೇಲ್ವಿಚಾರಕಿ ಸುನಿತಾ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಉಷಾ, ಕಮಲ, ಮುತ್ತಮ್ಮ, ಐಸಿಟಿಸಿ ಆಪ್ತ ಸಮಾಲೋಚಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಕೊಡಗು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ರಕ್ತದಾನ ಮಾಡಿದರು.

ಎಂ.ಎ.ವಿದ್ಯಾರ್ಥಿ ಅಮೃತ್‌ರಾಜ್ ಪ್ರಾರ್ಥಿಸಿದರು. ಕೊಡಗು ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಜಮೀರ್ ಅಹಮದ್ ಸ್ವಾಗತಿಸಿದರು. ಕೊಡಗು ವಿಶ್ವವಿದ್ಯಾಲಯದ ಉಪನ್ಯಾಸಕ ಸುದರ್ಶನ್ ಕುಮಾರ್ ವಂದಿಸಿದರು.ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತನಿಧಿ ಕೇಂದ್ರ, ಜಿಲ್ಲಾಸ್ಪತ್ರೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸೋಮವಾರಪೇಟೆ ತಾಲೂಕು, ಕೊಡಗು ವಿಶ್ವ ವಿದ್ಯಾಲಯ, ಭಾರತೀಯ ರೆಡ್‌ಕ್ರಾಸ್ ಘಟಕ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.