ಸಾರಾಂಶ
ಶಿಬಿರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಎಚ್‌ಒ ಡಾ.ಚಿದಂಬರ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಚಾಮರಾಜನಗರ: ವಿಶ್ವರಕ್ತದಾನಿಗಳ ದಿನಾಚರಣೆ ಅಂಗವಾಗಿ ರೋಟರಿ ಸಿಲ್ಕ್ ಸಿಟಿ, ರಕ್ತನಿಧಿ ಕೇಂದ್ರ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜೂ.14 ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ಡಿ.ಎಸ್. ಗಿರೀಶ್ ದೊಡ್ಡರಾಯಪೇಟೆ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಸಿಲ್ಕ್ ಸಿಟಿ ವತಿಯಿಂದ ಕಳೆದ 7-8 ವರ್ಷಗಳಿಂದಲೂ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು, ಜೂ.14 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ1 ರವರೆಗೆ ರೋಟರಿ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದರು. ಶಿಬಿರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಎಚ್‌ಒ ಡಾ.ಚಿದಂಬರ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ರಕ್ತದಾನ ಮಾಡಿದ ರಕ್ತದಾನಿಗಳಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಲಾಗುವುದು ಎಂದರು. ಸಂಸ್ಥೆಯ ವಿಶ್ವಾಸ್ ಮಾತನಾಡಿ, ರೋಟರಿ ಸಿಲ್ಕ್ ಸಿಟಿಯು 2003ರಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದು, 2014ರಲ್ಲಿ ಜಿಲ್ಲಾಸ್ಪತ್ರೆಗೆ ರಕ್ತನಿಧಿ ಘಟಕಕ್ಕೆ 60 ಲಕ್ಷ ರು ವೆಚ್ಚದಲ್ಲಿ ರಕ್ತ ಸಂಗ್ರಹಣೆ ಉಪಕರಣವನ್ನು ಕೊಡುಗೆಯಾಗಿ ನೀಡಿದೆ ಎಂದು ತಿಳಿಸಿದರು. ರಕ್ತದಾನದ ಕಾರ್ಯಕ್ರಮ ಹಿನ್ನಲೆ ಕರಪತ್ರಗಳನ್ನು ಸಹ ಹಂಚಲಾಗುತ್ತಿದ್ದು, ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ರೋಟರಿ ಸಂಸ್ಥೆಯ ತನಕ ರಕ್ತದಾನ ಜಾಗೃತಿ ಕುರಿತು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.ಗಣ್ಯವ್ಯಕ್ತಿಗಳು ಹುಟ್ಟುಹಬ್ಬಆಚರಿಸುವ ಸಂದರ್ಭದಲ್ಲಿ ದುಂದುವೆಚ್ಚ ಮಾಡದೇ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಮಾಣಿಕ್ ಚಂದ್ ಶಿರವಿ, ಮಾಜಿ ಅಧ್ಯಕ್ಷರಾದ ನಂಜಯ್ಯ, ಪ್ರಶಾಂತ್, ರಾಜ್ ಇದ್ದರು.