ವಿಶ್ವದರ್ಜೆ ಬೆಂಗಳೂರು ನಗರ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಭರಪೂರ ಗಿಫ್ಟ್!

| Published : Feb 17 2024, 01:22 AM IST / Updated: Feb 17 2024, 03:55 PM IST

Bangalore Budget
ವಿಶ್ವದರ್ಜೆ ಬೆಂಗಳೂರು ನಗರ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಭರಪೂರ ಗಿಫ್ಟ್!
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಡಿ ವಿಶ್ವ ದರ್ಜೆಯ ನಗರವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಚಾರ ದಟ್ಟಣೆ ನಿವಾರಣೆ, ಮೆಟ್ರೋ ಹಾಗೂ ಉಪನಗರ ರೈಲ್ವೆ ಯೋಜನೆ ಜಾರಿ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರನ್ನು ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಡಿ ವಿಶ್ವ ದರ್ಜೆಯ ನಗರವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಚಾರ ದಟ್ಟಣೆ ನಿವಾರಣೆ, ಮೆಟ್ರೋ ಹಾಗೂ ಉಪನಗರ ರೈಲ್ವೆ ಯೋಜನೆ ಜಾರಿ, ಹೊಸ ಬಸ್‌ ಖರೀದಿ, ಸುರಂಗ ರಸ್ತೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಇನ್ನು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ₹2 ಸಾವಿರ ಕೋಟಿ ಸಂಪನ್ಮೂಲ ಕ್ರೋಢೀಕರಿಸಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. 

ಸ್ಕೈಡೆಕ್‌ ನಿರ್ಮಾಣ, ಪೆರಿಫೆರಲ್‌ ರಿಂಗ್‌ ರೋಡ್‌ (ಪಿಆರ್‌ಆರ್‌), ಸೋಲಾರ್‌ ಪಾರ್ಕ್ ಸ್ಥಾಪನೆ, ನಗರದಲ್ಲಿನ ವ್ಯಾಪಾರ ವಹಿವಾಟು ವೃದ್ಧಿಗೆ ರಾತ್ರಿ 1 ಗಂಟೆವರೆಗೆ ಅವಕಾಶ ನೀಡುವುದಾಗಿ ಆಯವ್ಯಯದಲ್ಲಿ ಪ್ರಕಟಿಸಲಾಗಿದೆ.

ರಾಜಧಾನಿಗಿಲ್ಲ ಹೆಚ್ಚಿನ ಅನುದಾನ: ಬೆಂಗಳೂರಿಗೆ ಕಳೆದ ಬಜೆಟ್‌ನಲ್ಲಿ ಸುಮಾರು ₹9 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಪ್ರಸಕ್ತ ಬಜೆಟ್‌ನಲ್ಲಿಯೂ ಅಷ್ಟೇ ಪ್ರಮಾಣದ ಅನುದಾನ ನೀಡಲಾಗಿದೆ.

ಬಿಬಿಎಂಪಿ ಅನುದಾನ ಕಡಿತ: ಕಳೆದ 2023-24ನೇ ಸಾಲಿನ ಬಜೆಟ್‌ ನಲ್ಲಿ ಬಿಬಿಎಂಪಿಗೆ ₹3,633.65 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ₹43 ಕೋಟಿ ಕಡಿತಗೊಳಿಸಿ ₹3,589.75 ಕೋಟಿ ಅನುದಾನ ನೀಡಲಾಗಿದೆ. ಯೋಜಿತವಲ್ಲದ ಅನುದಾನ ಹಾಗೂ ಎಸ್‌ಎಫ್‌ಸಿ (ವಿದ್ಯುತ್) ಅನುದಾನದಲ್ಲಿ ಕಡಿತಗೊಳಿಸಲಾಗಿದೆ. ಆದರೆ, ಕಳೆದ ಬಾರಿಯಂತೆ ನಗರದ ವಿಶೇಷ ಯೋಜನೆಗೆ ₹3 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ.

₹6 ಸಾವಿರ ಕೋಟಿ ತೆರಿಗೆ ಸಂಗ್ರಹ: ಬಿಬಿಎಂಪಿಯಲ್ಲಿ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳನ್ನು ಕ್ರೊಢೀಕರಿಸಲು ಸರ್ಕಾರವು ಹಲವು ಕ್ರಮ ತೆಗೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ₹4300 ಕೋಟಿ ಸಂಗ್ರಹಿಸುವತ್ತ ಮುನ್ನಡೆದಿದೆ. ಮುಂಬರುವ ವರ್ಷದಲ್ಲಿ ₹6 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗುವುದು ಎಂದು ಘೋಷಿಸಲಾಗಿದೆ.

ಹೆಚ್ಚುವರಿ ₹2 ಸಾವಿರ ಕೋಟಿ ತೆರಿಗೆ ಸಂಗ್ರಹಕ್ಕೆ ಪ್ರಸಕ್ತ ವರ್ಷ ಪರಿಷ್ಕೃತ ಜಾಹೀರಾತು ನೀತಿ ಪ್ರಕಟಿಸುವುದು ಹಾಗೂ ಪ್ರೀಮಿಯಂ ಎಫ್‌ಎಆರ್‌ ಜಾರಿಗೊಳಿಸುವುದರಿಂದ ಸಂಗ್ರಹಿಸಲಾಗುವುದು. ಇದರಿಂದ ನಗರದ ಸಂಚಾರ ದಟ್ಟಣೆ ನಿವಾರಣೆಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

2 ವರ್ಷದಲ್ಲಿ 147 ಕಿ.ಮೀ. ವೈಟ್‌ ಟಾಪಿಂಗ್‌: ಈಗಾಗಲೇ ಸರ್ಕಾರದ ₹800 ಕೋಟಿ ಅನುದಾನ ಹಾಗೂ ಬಿಬಿಎಂಪಿಯ ₹900 ಕೋಟಿ ಅನುದಾನದಲ್ಲಿ ನಗರದ 147 ಕಿ.ಮೀ. ಉದ್ದದ ರಸ್ತೆಯನ್ನು ವೈಟ್‌ ಟಾಪಿಂಗ್‌ ರಸ್ತೆಗಳಾಗಿ ಅಭಿವೃದ್ಧಿ ಪಡಿಸುವುದಕ್ಕೆ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಕಾಮಗಾರಿಯನ್ನು 2025ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವುದಾಗಿ ತಿಳಿಸಿದೆ.

3 ಕಿ.ಮೀ ಪ್ರಾಯೋಗಿಕ ಟನಲ್‌ ರಸ್ತೆ: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಹೆಬ್ಬಾಳದಿಂದ ಮೇಖ್ರಿ ವೃತ್ತದ ವರೆಗೆ ಸುಮಾರು 3 ಕಿ.ಮೀ ಉದ್ದದ ಪ್ರಾಯೋಗಿಕ ಸುರಂಗ ರಸ್ತೆಯನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸುವುದಾಗಿ ಘೋಷಿಸಲಾಗಿದೆ.

ಬಫರ್‌ ಜೋನ್‌ನಲ್ಲಿ ರಸ್ತೆ: ನಗರದಲ್ಲಿ 860 ಕಿ.ಮೀ. ಉದ್ದ ರಾಜಕಾಲುವೆ ಇದ್ದು, ಈ ರಾಜಕಾಲುವೆಯ ಬಫರ್‌ ವಲಯದ ಜಾಗವನ್ನು ಬಳಸಿ100 ಕಿ.ಮೀ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ₹200 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಈ ಕಾಮಗಾರಿಯನ್ನು ಬಿಬಿಎಂಪಿಯು ತನ್ನ ಅನುದಾನದಲ್ಲಿ ಅನುಷ್ಠಾನಗೊಳಿಸಬೇಕಿದೆ.

ಬೆಂಗಳೂರು ಬಿಸಿನೆಸ್ ಕಾರಿಡಾರ್: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದರೊಂದಿಗೆ ಬೆಂಗಳೂರಿನ ಆರ್ಥಿಕ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ವೃದ್ಧಿಸಲು ಸಹಕಾರಿಯಾಗುವ ಪೆರಿಫೆರಲ್‌ ರಿಂಗ್‌ ರೋಡ್‌ (ಪಿಆರ್‌ಆರ್‌) ಅನ್ನು ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಎಂಬ ಹೊಸ ಪರಿಕಲ್ಪನೆಯಲ್ಲಿ ಪರಿಚಯಿಸುವುದಾಗಿ ಸರ್ಕಾರ ತಿಳಿಸಿದೆ.

ಈ ಯೋಜನೆಯಡಿ 73 ಕಿ.ಮೀ. ಉದ್ದದ ರಸ್ತೆಯನ್ನು ₹27 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಕ್ಕೆ ಪ್ರಸ್ತಾಪನೆ ಪಡೆಯಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಯೋಜನೆ ಆರಂಭಿಸಲಾಗುವುದು.

ಸ್ಕೈ-ಡೆಕ್‌ ಪ್ರಸ್ತಾಪ: ಬೆಂಗಳೂರು ನಗರದಲ್ಲಿ 250 ಮೀಟರ್‌ ಎತ್ತರದ ಸ್ಕೈ-ಡೆಕ್‌ ನಿರ್ಮಾಣಕ್ಕೆ ನೂತನ ಪರಿಕಲ್ಪನೆ ಒದಗಿಸುವಂತೆ ಅಂತಾರಾಷ್ಟ್ರೀಯ ಮಟ್ಟದ ವಾಸ್ತು ವಿನ್ಯಾಸಗಾರರನ್ನು ಆಹ್ವಾನಿಸಲಾಗಿದೆ. ಆಕರ್ಷಕವಾದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಸೋಲಾರ್ ಪಾರ್ಕ್‌: ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಡಬ್ಲ್ಯೂಎಸ್‌ಎಸ್‌ಬಿ ಹಾಗೂ ಬಿಡಿಎ ಕಚೇರಿಗಳಲ್ಲಿ ಪ್ರತಿ ತಿಂಗಳ ವಿದ್ಯುತ್‌ ಶುಲ್ಕ ಪಾವತಿಯ ಆರ್ಥಿಕ ಹೊರೆ ಕಡಿತಕ್ಕೆ ಸೋಲಾರ್‌ ಪಾರ್ಕ್‌ ಸ್ಥಾಪಿಸಲಾಗುವುದು.

ಮೆಟ್ರೋ 3ನೇ ಹಂತಕ್ಕೆ ₹15 ಸಾವಿರ ಕೋಟಿ ವೆಚ್ಚ: ನಗರದಲ್ಲಿ ಮೆಟ್ರೋ ಎರಡನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಇನ್ನೊಂದು ವರ್ಷದಲ್ಲಿ ಹೆಚ್ಚುವರಿ 44 ಕಿ.ಮೀ ಮೆಟ್ರೋ ಜಾಲ ವಿಸ್ತರಣೆ ಆಗಲಿದೆ. 

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2026ಕ್ಕೆ ಮೆಟ್ರೋ ಸಂಚಾರ ಲಭ್ಯವಾಗಲಿದೆ. ಇದೀಗ ₹15,611 ಕೋಟಿ ವೆಚ್ಚದ ಮೆಟ್ರೋ 3ನೇ ಹಂತ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಕೆ ಮಾಡಲಾಗಿದೆ.

ಮೆಟ್ರೋ ಹಂತ-3ಎ ಅಡಿಯಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲ ಡೈರಿ ವೃತ್ತ, ಮೇಖ್ರಿ ವೃತ್ತ ಮೂಲಕ ಹೆಬ್ಬಾಳವನ್ನು ಸಂಪರ್ಕಿಸುವ ಮಾರ್ಗ ನಿರ್ಮಾಣ ಕುರಿತು ಕ್ರಿಯಾ ಯೋಜನೆ ಕರಡು ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆಗೆ ಶೀಘ್ರದಲ್ಲಿ ಸಲ್ಲಿಸಲಾಗುವುದು.

ಮತ್ತೆರಡು ಮಾರ್ಗದಲ್ಲಿ ಮೆಟ್ರೋ!: ಬೆಂಗಳೂರಿನ ಬಿಐಇಸಿನಿಂದ ತುಮಕೂರುವರೆಗೆ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆ ಅನುಷ್ಠಾನಕ್ಕೆ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸುವುದಾಗಿ ಘೋಷಿಸಲಾಗಿದೆ.

ಉಪನಗರ ರೈಲು ಯೋಜನೆ ಚುರುಕು: ಮಂದಗತಿಯಲ್ಲಿ ಸಾಗುತ್ತಿದ್ದ ಬೆಂಗಳೂರು ಉಪನಗರ ರೈಲು ಯೋಜನೆಗೆ ಚುರುಕುಗೊಳಿಸಲಾಗಿದೆ. ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ವರೆಗಿನ ಕಾರಿಡಾರ್‌-2ರ ಸಿವಿಲ್‌ ಕಾಮಗಾರಿಗಳನ್ನು ವೇಗವಾಗಿ ಅನುಷ್ಠಾನಗೊಳಿಸಲಾಗಿದೆ, ಕಾರಿಡಾರ್‌-4 ರ ಹೀಲಲಿಗೆಯಿಂದ ರಾಜಾನುಕುಂಟೆ ವರೆಗಿನ 46.2 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ.

ನಗರಕ್ಕೆ 2154 ಹೊಸ ಬಸ್‌: ಬಿಎಂಟಿಸಿಗೆ 1,334 ಎಲೆಕ್ಟ್ರಿಕ್‌ ಮತ್ತು 820 ಬಿಎಸ್-6 ಡೀಸೆಲ್‌ ಬಸ್ಸು ಸೇರ್ಪಡೆ ಮಾಡಲಾಗುವುದು. ಜತೆಗೆ ನಗರದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ವೆಹಿಕಲ್‌ ಟ್ರ್ಯಾಕಿಂಗ್‌ ಮೊಬೈಲ್‌ ಆಪ್‌ ಅನುಷ್ಠಾನಗೊಳಿಸಲಾಗುತ್ತಿದೆ.

28 ಜಂಕ್ಷನ್‌ನಲ್ಲಿ ತಂತ್ರಜ್ಞಾನ: ನಗರದ 28 ಜಂಕ್ಷನ್‌ಗಳಲ್ಲಿ ಜಪಾನ್‌ ಸರ್ಕಾರದ ಸಹಯೋಗದೊಂದಿಗೆ ‘ಏರಿಯಾ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಂ’ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಟ್ರಾಫಿಕ್‌ ಸಿಗ್ನಲ್‌ನಲ್ಲಿ ವಾಹನಗಳ ಸಂದಣಿಯನ್ನು ಶೇ.30ರಷ್ಟು ಹಾಗೂ ಸರಾಸರಿ ವಿಳಂಬವನ್ನು ಶೇ.13ರಷ್ಟು ಕಡಿಮೆಗೊಳಿಸುವುದು.

110 ಹಳ್ಳಿಗಳಿಗೆ 2ನೇ ಹಂತದಲ್ಲಿ ಕಾವೇರಿ ನೀರು: ಕಾವೇರಿ ಐದನೇ ಹಂತದಲ್ಲಿ 110 ಹಳ್ಳಿಗಳಿಗೆ ಮೇ ವೇಳೆಗೆ ಕಾವೇರಿ ನೀರು ಒದಗಿಸಲಾಗುತ್ತಿದೆ. ಇದರಿಂದ 12 ಲಕ್ಷ ಜನರಿಗೆ ಪ್ರತಿದಿನ 110 ಲೀಟರ್‌ ಶುದ್ಧ ಕುಡಿಯುವ ನೀರು ಸಿಗಲಿದೆ. ಇದೀಗ ಬಜೆಟ್‌ನಲ್ಲಿ 110 ಹಳ್ಳಿಗಳಿಗೆ ಎರಡನೇ ಹಂತ ಕಾವೇರಿ ನೀರು ಒದಗಿಸುವ ಕಾಮಗಾರಿ ಆರಂಭಿಸುವುದಕ್ಕೆ ₹200 ಕೋಟಿ ವೆಚ್ಚ ಮಾಡುವುದಾಗಿ ಘೋಷಿಸಿದೆ.

ವರ್ಷಾಂತ್ಯಕ್ಕೆ 228 ಕಿ.ಮೀ ಒಳಚರಂಡಿ ಪೂರ್ಣ: ಕಾವೇರಿ ಹಂತ-5ರ ಒಳಚರಂಡಿ ಕಾಮಗಾರಿಯನ್ನು ಡಿಸೆಂಬರ್‌ ಗೆ ಪೂರ್ಣಗೊಳಿಸುವ ಭರವಸೆಯನ್ನು ನೀಡಲಾಗಿದೆ. ಒಟ್ಟು 228 ಕಿ.ಮೀ ವ್ಯಾಪ್ತಿಯಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಹಾಗೂ 13 ಎಸ್‌ಟಿಪಿ ಘಟಕ ಸ್ಥಾಪಿಸಿ 100 ಎಂಎಲ್‌ಡಿ ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುವುದು.

ಏಳು ಎಸ್ಟಿಪಿ ಉನ್ನತೀಕರಣ: ನಗರದಲ್ಲಿ ಈಗಾಗಲೇ ಸ್ಥಾಪಿಸಿರುವ ಎಸ್‌ಟಿಪಿ ಘಟಕಗಳ ಪೈಕಿ ಇನ್ನೂ 17 ಎಸ್‌ ಟಿಪಿ ಘಟಕಗಳನ್ನು ಎನ್‌ಜಿಟಿ ಮಾನದಂಡಗಳ ಪ್ರಕಾರ ಉನ್ನತೀಕರಿಸಬೇಕಾಗಿದೆ. ಈ ಪೈಕಿ 7 ಘಟಕಗಳನ್ನು ₹441 ಕೋಟಿ ವೆಚ್ಚದಲ್ಲಿ ಉನ್ನತೀಕರಿಸುವುದಕ್ಕೆ ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ಘೋಷಿಸಿದೆ. ಇದರಿಂದ 268 ಎಂಎಲ್‌ಡಿ ತ್ಯಾಜ್ಯ ನೀರನ್ನು ಪ್ರತಿನಿತ್ಯ ಸಂಸ್ಕರಿಸಿ ಮರುಬಳಕೆ ಮಾಡಬಹುದಾಗಿದೆ.

ನೀರು ಮರು ಬಳಕೆಗೆ ಪ್ರೋತ್ಸಾಹ: ಬೆಂಗಳೂರಿನ ಖಾಸಗಿ ವಸತಿ ಸಮುಚ್ಛಯಗಳಲ್ಲಿ ಸಂಸ್ಕರಿಸಿದ ನೀರನ್ನು ಕರ್ನಾಟಕ ಜಲಮಂಡಳಿಯು ನಿಗದಿ ಪಡಿಸಿದ ಮಾನದಂಡಗಳ ಪ್ರಕಾರ ಮರು ಬಳಕೆಗೆ ಪ್ರೋತ್ಸಾಹಿಸಲಾಗುವುದು.

ನಾಲ್ಕು ದಿಕ್ಕಿನಲ್ಲಿ ಲ್ಯಾಂಡ್ ಬ್ಯಾಂಕ್‌: ನಗರದಲ್ಲಿ ಉತ್ಪಾದನೆಯಾಗುವ ಕಸ ವಿಲೇವಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಬೆಂಗಳೂರು ನಗರ ಜಿಲ್ಲೆಯನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಿಕೊಂಡು 50 ರಿಂದ 100 ಎಕರೆ ಜಮೀನನ್ನು ಗುರುತಿಸಿ ಮುಂದಿನ 30 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಲಾಗುವುದು. ಪ್ರತಿಯೊಂದು ವಲಯಕ್ಕೂ ನುರಿತ ಸಂಸ್ಥೆಯನ್ನು ಪಾರದರ್ಶಕವಾಗಿ ನೇಮಿಸಲಾಗುವುದು.

ನಗರದ ಕಸ ವಿಲೇವಾರಿಗೆ ನಗರದ ನಾಲ್ಕು ದಿಕ್ಕಿನಲ್ಲಿ ಭೂಮಿಯನ್ನು ಮೀಸಲಿಡುವ ಕುರಿತು ‘ಕನ್ನಡಪ್ರಭ’ ಕಳೆದ ಅಕ್ಟೋಬರ್‌ 30 ರಂದು ‘ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿಗೆ ಲ್ಯಾಂಡ್‌ ಬ್ಯಾಂಕ್‌’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಕೆರೆ, ಪಾರ್ಕ್ ಮೇಲ್ವಿಚಾರಣೆಗೆ ಆ್ಯಪ್‌: ನಗರದಲ್ಲಿ ವಾತಾವರಣದ ಸ್ವಚ್ಛತೆಗಾಗಿ ಮರಗಳ ಗಣತಿ, ಕೆರೆ ಮತ್ತು ಉದ್ಯಾನವನಗಳ ತಂತ್ರಾಂಶ ಆಧಾರಿತ ಮೇಲ್ವಿಚಾರಣೆ ಹಾಗೂ ಕೆರೆ ಮತ್ತು ಉದ್ಯಾನಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಲು ಪ್ರತ್ಯೇಕ ನೀತಿ ಜಾರಿಗೊಳಿಸಲಾಗುತ್ತಿದೆ.

ಬಿಬಿಎಂಪಿಯ ಅರಣ್ಯ, ಕೆರೆ ಮತ್ತು ತೋಟಗಾರಿಕಾ ವಿಭಾಗವನ್ನು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ನಿರ್ವಹಣಾ ವಿಭಾಗ ಎಂದು ಮರುನಾಮಕರಣ ಮಾಡಿ ಕಾರ್ಯವ್ಯಾಪ್ತಿ ವಿಸ್ತರಿಸಲಾಗಿದೆ.

ಅ.7ರಂದು ‘ನಗರದ ಕೆರೆಗಳ ಮೇಲೆ ಕಣ್ಣೀಡಲು ಬರಲಿದೆ ಆ್ಯಪ್‌’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ವಿಶೇಷ ವರದಿಯನ್ನು ಪ್ರಕಟಿಸಿತ್ತು.

ರಾತ್ರಿ 1 ಗಂಟೆ ವರೆಗೆ ವ್ಯಾಪಾರಕ್ಕೆ ಅಸ್ತು: ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಅವಕಾಶ ನೀಡುವಂತೆ ಕೈಗಾರಿಕೋದ್ಯಮಿಗಳು ಸರ್ಕಾರಕ್ಕೆ ಮನವಿ ಮಾಡುತ್ತಿದ್ದವು. ಇದೀಗ ರಾಜ್ಯ ಸರ್ಕಾರ ತಡ ರಾತ್ರಿ 1 ಗಂಟೆವರೆಗೆ ವ್ಯಾಪಾರ-ವಹಿವಾಟಿನ ಮೇಲಿನ ನಿರ್ಬಂಧವನ್ನು ವಿಸ್ತರಿಸುವುದಾಗಿ ಭರವಸೆ ನೀಡಿದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯ 10 ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಈ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.

ಯಶವಂತಪುರದಲ್ಲಿ ಸರ್ಕಾರಿ ಕಚೇರಿಗಳು: ಯಶವಂತಪುರದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಜಾಗದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸುಸಜ್ಜಿತ ಕಚೇರಿ ಸಂಕೀರ್ಣ ನಿರ್ಮಿಸಲಿದೆ.

ವಿಜ್ಞಾನ ನಗರಿ: ಬೆಂಗಳೂರು ನಗರದಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ₹233 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರಿ ಸ್ಥಾಪಿಸಲಾಗುತ್ತಿದೆ. ಬೆಂಗಳೂರು ಇಂಡಿಯಾ ನ್ಯಾನೋ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸುವುದಾಗಿ ರಾಜ್ಯ ಸರ್ಕಾರ ಬಜೆಟ್‌ ನಲ್ಲಿ ಘೋಷಿಸಿದೆ.

ಪುಷ್ಪ ಮಾರುಕಟ್ಟೆ

ಬೆಂಗಳೂರಿನ ಕೃಷಿ ಇಲಾಖೆಯ ಆರ್‌.ಕೆ.ಶಾಲಾ ಕೃಷಿ ಕ್ಷೇತ್ರವನ್ನು ಕೃಷಿಗೆ ಸಂಬಂಧಿಸಿದ ತಾಂತ್ರಿಕತೆ ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಸಾರ್ವಜನಿಕ ಖಾಸಗಿ ಸಹಭಾಗತ್ವದಲ್ಲಿ ಅಭಿವೃದ್ಧಿ. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ಸ್ಥಾಪನೆ.

ಕೆ.ಸಿ.ಜನರಲ್‌ಗೆ ₹150 ಕೋಟಿ: ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮತ್ತು ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ₹150 ಕೋಟಿ ವೆಚ್ಚದಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗುತ್ತಿದೆ.

ಬಡವರಿಗೆ ಉಚಿತ ಲ್ಯಾಬ್‌ ಟೆಸ್ಟ್‌: ಬೆಂಗಳೂರಿನ ಬಡ ಜನರಿಗೆ ಉಚಿತ ಪ್ರಾಯೋಗಾಲಯ ಸೇವೆಯನ್ನು ಒದಗಿಸಲು ಹಬ್‌ ಅಂಡ್ ಸ್ಪೋಕ್‌ ಮಾದರಿಯಲ್ಲಿ 430 ಲ್ಯಾಬ್‌ಗಳ ಸ್ಥಾಪನೆಗೆ ಮುಂದಿನ ಎರಡು ವರ್ಷದಲ್ಲಿ ₹20 ಕೋಟಿ ಅನುದಾನ ನೀಡಲಾಗುವುದು. ನಗರದ ನೆಫ್ರೋ-ಯುರಾಲಜಿ ಸಂಸ್ಥೆಯ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ₹20 ಕೋಟಿ ವಚ್ಚದಲ್ಲಿ ರೋಬೋಟಿಕ್‌ ಯಂತ್ರದ ಮೂಲಕ ಉತ್ತಮ ಶಸ್ತ್ರ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗುವುದು.

ಉಪನಗರ ಟೌನ್‌ ಶಿಪ್: ಬೆಂಗಳೂರಿನ ಹೊರ ವಲಯದ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ ಶಿಪ್‌ಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು.

ಸಬ್‌ಸ್ಟೇಷನ್‌ ಉನ್ನತೀಕರಣ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆ ನೀಗಿಸಲು ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ಸಬ್‌ ಸ್ಟೇಷನ್‌ಗಳನ್ನು ಉನ್ನತೀಕರಣ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದೆ.

ಸ್ಪೋರ್ಟ್ಸ್‌ ಸಿಟಿ: ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ 70 ಎಕರೆ ಜಾಗದಲ್ಲಿ ಅತ್ಯಾಧುನಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಛಯ’ ಒಳಗೊಂಡ ‘ಕ್ರೀಡಾ ನಗರ’ವನ್ನು (Sports City) ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಬಹುಕ್ರೀಡಾ ಸೌಲಭ್ಯಗಳನ್ನೊಳಗೊಂಡ ‘ಅತ್ಯಾಧುನಿಕ ಕ್ರೀಡಾ ಸಂಕೀರ್ಣ’ ಸ್ಥಾಪಿಸುವುದಕ್ಕೆ ನಿರ್ಧರಿಸಲಾಗಿದೆ. ಬೆಂಗಳೂರಿನ ಪೊಲೀಸ್ ಸುಲಿವನ್ ಮೈದಾನದಲ್ಲಿ ₹3 ಕೋಟಿ ವೆಚ್ಚದಲ್ಲಿ ಆಸ್ಟ್ರೋ ಟರ್ಫ್ ಹಾಕಿ ಪ್ರಾಂಗಣ ನಿರ್ಮಾಣ ಮಾಡಲಾಗುವುದು.

ಇತರೆ ಘೋಷಣೆಗಳು: ಬಿಬಿಎಂಪಿ ಸಹಯೋಗದೊಂದಿಗೆ ಸರ್ವಜ್ಞನಗರದಲ್ಲಿ ಸರ್ವಜ್ಞ ಉದ್ಯಾನವನ ಅಭಿವೃದ್ಧಿ, ಬೆಂಗಳೂರು ಪೂರ್ವ ಭಾಗದಲ್ಲಿ 500 ಸಂಖ್ಯೆಯ ಒಂದು ನಿರಾಶ್ರಿತರ ಪರಿಹಾರ ಕೇಂದ್ರವನ್ನು ₹10 ಕೋಟಿ ವೆಚ್ಚದಲ್ಲಿ ಪ್ರಾರಂಭ ಮಾಡಲಾಗುವುದು. ಪದ್ಮಶ್ರೀ ಪುರಸ್ಕೃತ ಡಾ। ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು.

ತಜ್ಞರ ಅಭಿಪ್ರಾಯ: ವಿಶ್ವ ದರ್ಜೆಯ ನಗರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪ್ರಸ್ತಕ ಸಾಲಿನಲ್ಲಿ ಪೂರ್ಣಗೊಳಿಸುವುದಕ್ಕೆ ಒತ್ತು ನೀಡಬೇಕು. ಮೆಟ್ರೋ ಸೇವೆಯನ್ನು ನಗರದ ವಿವಿಧ ಭಾಗಗಳಿಗೆ ವಿಸ್ತರಣೆ ಮಾಡುವುದಕ್ಕೆ ಹೆಚ್ಚಿನ ಗಮನ ನೀಡಬೇಕು. ಜತೆಗೆ, ರಸ್ತೆಯಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಘೋಷಿಸಿರುವ ಸುರಂಗ ರಸ್ತೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. - ಜಯರಾಜ್‌, ನಿವೃತ್ತ ಐಎಎಸ್‌ ಅಧಿಕಾರಿ 

ಬಿಬಿಎಂಪಿಗೆ ಸಿಕ್ಕ ಅನುದಾನ(ಕೋಟಿ ₹)ಅನುದಾನದ ಹೆಸರು2024-252023-24ಎಸ್‌ಎಫ್‌ಸಿ (ಯೋಜಿತ) ಸಂಬಳ200200. ಎಸ್‌ಎಫ್‌ಸಿ (ಯೋಜಿತವಲ್ಲ)121.49149.99ಎಸ್‌ಎಫ್‌ಸಿ (ವಿದ್ಯುತ್)268.08283.66. ವಿಶೇಷ ಮೂಲಸೌಕರ್ಯ ಅನುದಾನ3,0003,000ಒಟ್ಟು3,589.573,633.65