ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರವು ಮಂಗಳವಾರ ವಿಶ್ವ ತೆಂಗು ಬೆಳೆ ದಿನಾಚರಣೆ ಅಂಗವಾಗಿ ಹುಣಸೂರು ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ತೆಂಗು ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆಗಳ ಕುರಿತು ಒಂದು ದಿನದ ತರಬೇತಿ ಆಯೋಜಿಸಿತ್ತು.ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ. ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ಅಂಗವಾಗಿ ತೆಂಗಿನ ಬೆಳೆಯ ಉತ್ಪಾದನಾ ತಾಂತ್ರಿಕತೆ ಕುರಿತು ತರಬೇತಿ ಆಯೋಜಿಸಿರುವುದು ಸಮಂಜಸವಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ತೆಂಗು ಬೆಳೆಯಲು ಇರುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳು ಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಅವರು ಸಂಪನ್ಮೂಲ ವಿಜ್ಞಾನಿಯಾಗಿ ಭಾಗವಹಿಸಿ ತೆಂಗಿನ ಸುಧಾರಿತ ಉತ್ಪಾದನಾ ತಾಂತ್ರಿಕತೆ ಕುರಿತು ತಿಳಿಸುತ್ತಾ, ಬೀಜದ ಕಾಯಿಗಳ ಆಯ್ಕೆ, ಸಸಿಮಡಿ ತಯಾರಿಕೆ ಮತ್ತು ಕಾಯಿ ನೆಡುವಿಕೆ, ನೀರಾವರಿ, ಅಂತರ ಬೇಸಾಯ, ಪೋಷಕಾಂಶಗಳ ನಿರ್ವಹಣೆ, ತೇವಾಂಶ ಸಂರಕ್ಷಣೆ ಹಾಗೂ ಜೈವಿಕ ಗೊಬ್ಬರಗಳ ಬಳಕೆಯ ಬಗ್ಗೆ ತಿಳಿಸಿದರು.ಅಲ್ಲದೇ ವಿಶ್ವ ತೆಂಗು ದಿನಾಚರಣೆ ಹಿನ್ನೆಲೆ ಬಗ್ಗೆ ತಿಳಿಸುತ್ತಾ, ತೆಂಗಿನ ಕಾಯಿ ಹಲವು ಉಪಯೋಗ ನೀಡುತ್ತಿದ್ದು, ತೆಂಗಿನಕಾಯಿಗಳು ನಮಗೆ ವಿವಿಧ ಉತ್ಪನ್ನಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತಿವೆ. ತೆಂಗಿನಕಾಯಿ ಒಳಗಿನ ಕೋಮಲ ಬಿಳಿ ತಿರುಳನ್ನು ವಿವಿಧ ಅಡುಗೆ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ ಮತ್ತು ಎಣ್ಣೆ, ಹಾಲು ಮತ್ತು ನೀರನ್ನು ಅಡುಗೆ ಮತ್ತು ಅಡುಗೆಯೇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಎಂದು ತಿಳಿಸಿದರು.ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್. ಮೌಲ್ಯಾ ಮಾತನಾಡಿ, ತೆಂಗಿನ ಬೆಳೆಯಲ್ಲಿ ಕಂಡುಬರುವ ರುಗೋಸಾ ಬಿಳಿನೊಣ, ಗರಿತಿನ್ನುವ ಹುಳು, ಕೆಂಪು ಮೂತಿ ಹುಳು, ಹಿಟ್ಟು ತಿಗಣೆ, ಗೆದ್ದಲು, ಸುಳಿಕೊರೆಯುವ ರೈನೋಸರಸ್ ದುಂಬಿ ಕೀಟಗಳು ಮತ್ತು ಅವುಗಳ ನಿರ್ವಹಣಾ ನಿರ್ವಹಣಾ ಕ್ರಮಗಳ ಬಗ್ಗೆ ಮತ್ತು ಪ್ರಮುಖ ರೋಗಗಳಾದ ಕಾಂಡ ಸೋರುವ ರೋಗ, ಸುಳಿ ಕೊಳೆ ರೋಗ, ಎಲೆ ಕೊಳೆ ರೋಗ ಮತ್ತು ಅವುಗಳ ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.ಪ್ರಗತಿಪರ ರೈತ ಮಹಿಳೆ ವಸಂತಮ್ಮ, ತೋಟಗಾರಿಕೆ ಅಧಿಕಾರಿ ಡಾ. ಚೈತ್ರಾ ಇದ್ದರು. ಕಾರ್ಯಕ್ರಮದಲ್ಲಿ ಒಟ್ಟು 45 ಜನ ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು. ಕ್ಷೇತ್ರ ಸಹಾಯಕ ಧರಣೇಶ ಕಾರ್ಯಕ್ರಮ ಆಯೋಜಿಸಿದ್ದರು.