ವಿದೇಶದಿಂದ ಬಂದ ಗಾಂಧಿ ಭಾರತ ಪರ್ಯಟನೆ ಕೈಗೊಂಡರು. ಜನರ ನಂಬಿಕೆಯನ್ನು ಸಂಪಾದಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮಹಾತ್ಮ ಗಾಂಧಿ ಮುಗಿಯುವ ಅಧ್ಯಾಯವಲ್ಲ, ನಮ್ಮೊಳಗೆ ಹುಟ್ಟುವ ಆಶಯ ಎಂದು ಲೇಖಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ನಟರಾಜ್ ಹುಳಿಯಾರ್ ತಿಳಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿ ಗಾಂಧಿ ಭವನದಲ್ಲಿ ಗಾಂಧಿ ಅಧ್ಯಯನ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಅಹಿಂಸಾ ದಿನಾಚರಣೆಯಲ್ಲಿ ಅವರು, ನಾಯಕತ್ವದ ವಿಕಾಸ: ಗಾಂಧೀಜಿ ತೋರಿದ ಹಾದಿ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಿದೇಶದಿಂದ ಬಂದ ಗಾಂಧಿ ಭಾರತ ಪರ್ಯಟನೆ ಕೈಗೊಂಡರು. ಜನರ ನಂಬಿಕೆಯನ್ನು ಸಂಪಾದಿಸಿದರು. ಸತ್ಯದ ಬಲದಿಂದ ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಿದರು. ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಜಂಬೂಸವಾರಿ ಮೆರವಣಿಗೆ ಮಾಡಿದರು. ಗಾಂಧೀಜಿ ನಾಯಕತ್ವ ಕೇವಲ ಭಾರತವಲ್ಲ, ಲೋಕವನ್ನೇ ಉದ್ದೀಪಿಸುತ್ತದೆ. ಅವರ ನಾಯಕತ್ವ ಸ್ಥಗಿತಗೊಳ್ಳದೇ ನಡೆಯುತ್ತಲೇ ಇರುತ್ತದೆ ಎಂದು ಅವರು ಹೇಳಿದರು.

ಜಾತಿ ತಲೆಯಿಂದ ಹೋಗಬೇಕು. ಕಟ್ಟಕಡೆಯ ವ್ಯಕ್ತಿಯಿಂದ ಯೋಚನೆ ಮಾಡುವುದನ್ನು ಗಾಂಧಿ ಕಲಿಸಿದರು. ಆಫ್ರಿಕಾದಲ್ಲಿ ಅವಮಾನಕ್ಕೆ ಒಳಗಾದ ಗಾಂಧಿಗೆ ಭಾರತದಲ್ಲಿ ನಮ್ಮ ಅಸ್ಪಶ್ಯ ಸಹೋದರರ ಅವಮಾನದ ಬಗ್ಗೆ ಆಲೋಚಿಸಿದರು. ಗಾಂಧಿ ಅವಮಾನ ನುಂಗಿ ಬೆಳೆಯುವ ಕ್ರಮವನ್ನು ಕಲಿಸಿದರು ಎಂದರು.

ದೈಹಿಕ ಶ್ರಮ ಮತ್ತು ಬೌದ್ಧಿಕ ಶ್ರಮವನ್ನು ವಿಂಗಡಿಸಿದ್ದರಿಂದಲೇ ಇವತ್ತು ಭಾರತದಲ್ಲಿ ಭೀಕರವಾದ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಒಳ್ಳೆಯವರ ಮೌನದಿಂದ ರಾಜಕಾರಣ ಹದಗೆಟ್ಟಿದೆ. ಬದಲಾವಣೆಯ ಪತನ ರಾಜಕಾರಣದಲ್ಲಿ ಇರಬಹುದು. ಆದರೆ, ಕರ್ನಾಟಕದಲ್ಲಿ ದಲಿತ, ರೈತ ಚಳವಳಿಗಳು ಬಂದಾಗ ಬದಲಾವಣೆಯಾಗಿವೆ. ಆಳುವವರ ಆಕ್ರಮಣವನ್ನು ನಿರ್ಭಯವಾಗಿ ವಿರೋಧಿಸುವಾಗ ಗಾಂಧಿ ನಮ್ಮ ನೆರವಿಗೆ ಬರುತ್ತಾರೆ ಎಂದು ಅವರು ತಿಳಿಸಿದರು.

ಸಾಮಾಜಿಕ ಜಾಲತಾಣಗಳು ಹಳ್ಳಿಕಟ್ಟೆಯಾಗಿವೆ. ಒಂದು ಕತ್ತೆ ಹೇಳುವುದನ್ನು ಇನ್ನೊಂದು ಕತ್ತೆ ಫಾರ್ವರ್ಡ್ ಮಾಡುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಸ್ಪೃಶ್ಯತೆ ಆಚರಣೆ, ಲಿಂಗಭೇದ ನೀತಿಗಳ ವಿರುದ್ಧ ಯಾಕೇ ಅಭಿಯಾನಗಳು ನಡೆಯುವುದಿಲ್ಲ ಎಂದು ಅವರು ಪ್ರಶ್ನಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರಕುಮಾರ್, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಎಂ.ಬಿ. ಸುರೇಶ್ ಮೊದಲಾದವರು ಇದ್ದರು.