ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ ಇನ್‌ಸ್ಪಾಯರ್-೨೦೨೫ ಯೋಜನೆ, ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಹಾಗೂ ಸುವರ್ಣ ಎಂಟರ್‌ಪ್ರೈಸಸ್‌ ವತಿಯಿಂದ ಪರಿಸರ ದಿನಾಚರಣೆ ಮಾಹಿತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ ಇನ್‌ಸ್ಪಾಯರ್-೨೦೨೫ ಯೋಜನೆ, ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಹಾಗೂ ಸುವರ್ಣ ಎಂಟರ್‌ಪ್ರೈಸಸ್‌ ವತಿಯಿಂದ ಪರಿಸರ ದಿನಾಚರಣೆ ಮಾಹಿತಿ ಕಾರ್ಯಾಗಾರ ನಡೆಯಿತು.ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಗಿಡಕ್ಕೆ ನೀರನ್ನು ಹಾಕುವ ಮೂಲಕ ಉದ್ಘಾಟಿಸಿದ ಪರಿಸರ ಪ್ರೇಮಿ ಮಧುಸೂದನ ಹೇರೂರು, ಮನುಷ್ಯನಿಲ್ಲದಿದ್ದರೆ ಗಿಡಮರಗಳು ಬದುಕುತ್ತವೆ, ಆದರೆ ಗಿಡಮರಗಳು ಇಲ್ಲದಿದ್ದರೆ ಮನುಷ್ಯ ಉಳಿಯಲಾರ. ಗಿಡಮರಗಳಿಂದ ಸಹಬಾಳ್ವೆ ಸಮನ್ವಯತೆಯನ್ನು ಕಲಿಯಬಹುದು. ನಮ್ಮ ಮುಂದಿನ ಸುಖಮಯ ಜೀವನಕ್ಕೆ ಹಸಿರು ಬದಲಾವಣೆಯ ಒಂದೇ ಅವಕಾಶ. ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸಿ, ಪೋಷಿಸಿ ದೊಡ್ಡ ಬದಲಾವಣೆ ತರುವಲ್ಲಿ ಕೈ ಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.ಎಲ್‌ಎಂಎಚ್ ಆಫ್ ಹೆಲ್ತ್ ಸಾಯನ್ಸ್‌ನ ಪ್ರಾಂಶುಪಾಲ ಡಾ.ರೋಶ್‌ ಪಾಯಸ್ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ ಎಂದು ಕರೆ ನೀಡಿದರು.

ನಂತರ ಇನ್‌ಸ್ಪಾಯರ್ ಯೋಜನೆ ಹಸಿರು ಆಸ್ಪತ್ರೆಯ ಮುಖ್ಯಸ್ಥರಿಗೆ ಸಸಿಗಳನ್ನು ವಿತರಿಸಲಾಯಿತು.ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಅಧ್ಯಕ್ಷ ಅಣ್ಣಯ್ಯದಾಸ್ ಸ್ವಾಗತಿಸಿದರು. ಎಲ್‌ಎಮ್‌ಎಚ್‌ನ ಆಡಳಿತ ಅಧಿಕಾರಿ ದೀನಾ ಪ್ರಭಾವತಿ, ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ವೀಣಾ ಮೆನೇಜಿಸ್, ಕಾಲೇಜ್ ಆಫ್ ನರ್ಸಿಂಗ್‌ನ ಉಪಪ್ರಾಂಶುಪಾಲೆ ಬಿಜು ನೋಮೆನ ಉಪಸ್ಥಿತರಿದ್ದರು.ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರೋಹಿ ರತ್ನಾಕರ್ ವಂದಿಸಿದರು. ಲೊಂಬಾರ್ಡ್‌ ಆಸ್ಪತ್ರೆಯ ಸಮೂಹದ ವಿದ್ಯಾರ್ಥಿಗಳು, ಸಿಬ್ಬಂದಿ, ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.