ಸಾರಾಂಶ
ಪೊಲೀಸ್, ಅರಣ್ಯ ಇಲಾಖೆ ಸಹಯೋಗದೊಂದಿಗೆ ಪರಿಸರ ದಿನ ಆಚರಿಸಲಾಗುತ್ತಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿರಂತರವಾಗಿರಬೇಕು. ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಸಹ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಬೆಳೆಸುವ ಕರ್ತವ್ಯವನ್ನು ಇಲಾಖೆ ಸಿಬ್ಬಂದಿ ಹೂರಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ವಿಶ್ವ ಪರಿಸರದ ದಿನದ ಅಂಗವಾಗಿ ಪಟ್ಟಣದ ಸಂಚಾರಿ ಠಾಣೆ ಪೊಲೀಸರು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.ಠಾಣೆ ಆವರಣದಲ್ಲಿ ಠಾಣಾ ಸಿಬ್ಬಂದಿ ಜತೆ ಆಯ್ದ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ನೀರೆರೆದ ನಂತರ ಪಿಎಸ್ಐ ಮಹೇಶ್ ಮಾತನಾಡಿ, ಪೊಲೀಸ್, ಅರಣ್ಯ ಇಲಾಖೆ ಸಹಯೋಗದೊಂದಿಗೆ ಪರಿಸರ ದಿನ ಆಚರಿಸಲಾಗುತ್ತಿದೆ ಎಂದರು.
ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿರಂತರವಾಗಿರಬೇಕು. ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಸಹ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಬೆಳೆಸುವ ಕರ್ತವ್ಯವನ್ನು ಇಲಾಖೆ ಸಿಬ್ಬಂದಿ ಹೂರಬೇಕು ಎಂದರು.ಕಳೆದ ನಾಲ್ಕು ದಶಕಗಳಿಂದ ಪ್ರಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ನೀರು. ಗಾಳಿ. ಮಣ್ಣನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದನ್ನು ಮಾಲಿನ್ಯ ಮಾಡದೆ ರಕ್ಷಣೆ ಮಾಡುವ ಕಾನೂನನ್ನು ಆಳುವ ಸರ್ಕಾರಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಭಿಪ್ರಾಯಪಟ್ಟರು.
ಈ ವೇಳೆ ದ್ವಿತೀಯ ಪಿಎಸ್ಐ ಸರೋಜಾಬಾಯಿ, ಎಎಸ್ ಐ ಗಳಾದ ಕೃಷ್ಣಯ್ಯ, ರಮೇಶ್, ಶೇಖರ್ ಹಾಗೂ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.ಪ್ರತಿ ಜೀವಿಗಳಿಗೂ ಉತ್ತಮ ಪರಿಸರ ಅಗತ್ಯ: ಆಶಯ್ ಮಧು
ಭಾರತೀನಗರ:ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗಳಿಗೂ ಉತ್ತಮ ಪರಿಸರ ಅಗತ್ಯವಿದ್ದು ಅದನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಭಾರತೀ ಎಜುಕೇಷನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್‌ಮಧು ತಿಳಿಸಿದರು.ಪರಿಸರ ಜಾಗೃತಿ ವೇದಿಕೆ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದಲ್ಲಿ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಯೊಬ್ಬರೂ ಪರಿಸರವನ್ನು ಪ್ರೀತಿಸಿ ರಕ್ಷಿಸಬೇಕು. ಯುವಕರು ಗಿಡ ಮರಗಳನ್ನು ಬೆಳೆಸುವುದರ ಜೊತೆಗೆ ಇತರರಿಗೂ ಪ್ರೇರಣೆಯಾಗಬೇಕು ಎಂದು ಸಲಹೆ ನೀಡಿದರು.
ಭಾರತೀ ಕಾಲೇಜ್ ಕ್ಯಾಂಪಸ್‌ನನ್ನು ಹಸಿರಿನ ವನವನ್ನಾಗಿ ಮಾಡಿದ್ದೇವೆ. ಮಕ್ಕಳಿಗೆ ಉತ್ತಮ ಗಾಳಿ, ನೆರಳು, ಆರೋಗ್ಯ ಸಿಗಲೆಂಬ ಉದ್ದೇಶ ನಮ್ಮದಾಗಿದೆ. ಪೂರ್ವಿಕರು ಕಟ್ಟಿದ ಪರಿಸರ ಇಂದು ನಾಶವಾಗುತ್ತಿವೆ. ಕೆರೆ-ಕಟ್ಟೆಗಳು, ವಾಯು, ಜಲ ಮಾಲಿನ್ಯವಾಗುತ್ತಿವೆ. ಇದಕ್ಕೆ ಪರಿಸರ ನಾಶವೇ ಕಾರಣ ಎಂದರು.ಇದೇ ವೇಳೆ ಆಶಯ್ ಮಧು ಅವರಿಗೆ ಗಿಡಕೊಟ್ಟು ಅಭಿನಂದಿಸಲಾಯಿತು. ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್, ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಮದ್ದೂರು ಅವಿನಾಶ್ ಇದ್ದರು.