ವಿಶೇಷ ಶೀರ್ಷಿಕೆಯಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ

| Published : Jun 06 2024, 12:31 AM IST

ಸಾರಾಂಶ

ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ‘ಭೂಮಿ ಪುನಃ ಸ್ಥಾಪನೆ, ಬರ ಸ್ಥಿತಿ ಸ್ಥಾಪಕತ್ವ ಹಾಗೂ ಮರುಭೂಮಿಕರಣ ವೇಗಗೊಳಿಸುವುದು’ ಎಂಬ ಶೀರ್ಷಿಕೆಯ 2024ನೇ ಸಾಲಿನ ಥೀಮ್ ನಡಿ ವಿಭಿನ್ನವಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ವಿಶ್ವ ಪರಿಸರ ದಿನವನ್ನು ಇಲ್ಲಿಗೆ ಸಮಿಪದ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶೇಷ ಶೀರ್ಷಿಕೆಯಡಿ ಆಚರಿಸಲಾಯಿತು. ಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ‘ಭೂಮಿ ಪುನಃ ಸ್ಥಾಪನೆ, ಬರ ಸ್ಥಿತಿ ಸ್ಥಾಪಕತ್ವ ಹಾಗೂ ಮರುಭೂಮಿಕರಣ ವೇಗಗೊಳಿಸುವುದು’ ಎಂಬ ಶೀರ್ಷಿಕೆಯ 2024ನೇ ಸಾಲಿನ ಥೀಮ್ ನಡಿ ವಿಭಿನ್ನವಾಗಿ ಆಚರಿಸಲಾಯಿತು.

ದಿನದ ಮಹತ್ವ ಕುರಿತು ಶಾಲಾ ವಿಜ್ಞಾನ ಶಿಕ್ಷಕ ಡಿ.ಎಸ್.ಮಧುಕುಮಾರ್ ಮಾಹಿತಿ ನೀಡಿ, ಪರಿಸರದ ಮೇಲೆ ಹಾನಿಯಾದರೆ ಭೂಮಿಯ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ ಇದರಿಂದ ಬಂಜರು ಮತ್ತು ಮರುಭೂಮಿಯಾಗುತ್ತದೆ. ಈಗಾಗಲೆ ಅರಣ್ಯ ಪರಿಸರ ಬರಿದಾಗುತ್ತಿರುವುದ್ದರಿಂದ ನೆಲ ಮರುಭೂಮಿಯಾಗುತ್ತಿದೆ. ಹೆಚ್ಚಾಗಿ ಮರಗಿಡಗಳನ್ನು ಬೆಳೆದು ಹಸಿರು ವಾತಾವರಣ ಸೃಷ್ಟಿಯಾಗುವುದರಿಂದ ಉತ್ತಮವಾದ ಮಳೆಯಾಗುತ್ತದೆ ಎಂದರು. ಮರುಭೂಮಿಕರಣ ಮರಗಿಡಗಳನ್ನು ಬೆಳೆದು ಪರಿಸರವನ್ನು ಸಮೃದ್ದಿಗೊಳಿಸುವ ಕಾರ್ಯದಿಂದ ಭೂಮಿ ಪುನಃ ಸ್ಥಾಪನೆಯಾದಂತಾಗುತ್ತದೆ. ಈ ಉದ್ದೇಶದಿಂದ ಭೂಮಿ ಪುನಃ ಸ್ಥಾಪನೆ ಬರ ಸ್ಥಿತಿಸ್ಥಾಪಕತ್ವ ಮರುಭೂಮಿಕರಣ ವೇಗಗೊಳಿಸುವುದು ಎಂಬ ಶೀರ್ಷಿಕೆಯಡಿ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಗಿಡಗಳನ್ನು ಬೆಳೆಯುವ ಮೂಲಕ ಹಸಿರು ಪರಿಸರದಿಂದ ಕೂಡಿದ ಭೂಮಿಯನ್ನು ಸೃಷ್ಟಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ.ನಳಿನಿ, ಶಿಕ್ಷಕರಾದ ಮಾರುತಿ ಅರೇರ್, ಎಂ.ವಿ.ರೂಪಾ, ಪ್ರಿಯಾಂಕ ಚಿಪಳೂಣಕರ್, ಮಹಾದೇವಿ, ದೈಹಿಕ ಶಿಕ್ಷಣ ಶಿಕ್ಷಕ ಡಿ.ಸಿ.ಕುಶಾಲಪ್ಪ, ಗೀತಾ ಮುಂತಾದವರು ಹಾಜರಿದ್ದರು.

ದಿನದ ಮಹತ್ವ ಅಂಗವಾಗಿ ವಿದ್ಯಾರ್ಥಿಗಳು ಘೋಷಣೆಯೊಂದಿಗೆ ಪರಿಸರ ಜಾಗೃತಿ ಮೂಡಿಸಿದರು. ನಂತರ ಶಾಲಾಗೆ ಸೇರಿದ ಜಾಗದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟರು.