ಸಾರಾಂಶ
ಎಂ. ಪ್ರಹ್ಲಾದ
ಕನಕಗಿರಿ: ಕನಕಗಿರಿ ಉತ್ಸವ ಅಂಗವಾಗಿ ವಿಶ್ವವಿಖ್ಯಾತ ಮೈಸೂರು ಜಂಬುಸವಾರಿ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಆನೆಯ ಮೇಲೆ ಅಂಬಾರಿಯಲ್ಲಿ ಶ್ರೀ ಕನಕಾಚಲಪತಿಯ ಮೂರ್ತಿ ಕೂರಿಸಿ ಸಾವಿರಾರು ಜನರ ಸಮ್ಮುಖದಲ್ಲಿ ವೈಭವದ ಮೆರವಣಿಗೆ ನಡೆಯಿತು.ಪಟ್ಟಣದ ಅಗಸಿ ಹನುಮಪ್ಪ ದೇವಸ್ಥಾನದ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಂಬಾರಿಯಲ್ಲಿನ ಕನಕಾಚಲನಿಗೆ ಪುಷ್ಪ ನಮನ ಸಲ್ಲಿಸಿ ವೈಭವೋಪೇತ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಅಗಸಿಯಿಂದ ಆರಂಭಗೊಂಡ ಮೆರವಣಿಗೆ ಕನಕಾಚಲಪತಿ ದೇವಸ್ಥಾನದ ಮುಂಭಾಗದವರೆಗೆ ಸಾಂಸ್ಕೃತಿಕ ವೈಭವ ಮೇಳೈಸುವಂತೆ ನಡೆಯಿತು.ವಿಜಯನಗರ ಸಾಮ್ರಾಜ್ಯದ ಸಾಮಂತರ ನೆಲದಲ್ಲಿ ವಿಶ್ವ ಪರಂಪರೆ ತಾಣವಾದ ಹಂಪಿಯ ವಿರೂಪಾಕ್ಷ ದೇವಸ್ಥಾನದ ಆನೆ ಮೇಲೆ ಕನಕಾಚಲಪತಿಯನ್ನು ಮೆರವಣಿಗೆ ಮಾಡಿರುವುದು ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. ಈ ಉತ್ಸವದಲ್ಲಿ ಮೈಸೂರು ಜಂಬೂ ಸವಾರಿ ಮಾದರಿಯಲ್ಲಿ ಅಂಬಾರಿ ಮೆರವಣಿಗೆ ಮನಸೊರೆಗೊಂಡಿತು.ಮೆರುಗು ತಂದ ಕಲಾ ತಂಡಗಳು:
ಒಂದು ಕಿ.ಮೀ.ಗೂ ಅಧಿಕ ಅಂತರ ಕಲಾವಿದರು ಉರಿ ಬಿಸಿಲು ಲೆಕ್ಕಿಸದೇ ತಮ್ಮ ವಾದ್ಯಗಳನ್ನು ನುಡಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡು ನೋಡುಗರನ್ನು ರಂಜಿಸಿದರು. ತಲಕಾಡಿನ ಚಿಲಿಪಿಲಿ ಗೊಂಬೆ ಕುಣಿತ, ಅಂಗನವಾಡಿ ಕಾರ್ಯಕರ್ತೆಯರಿಂದ ಕೋಲಾಟ, ಕುಂಭೋತ್ಸವ, ಹೊಸಪೇಟೆಯ ಮರಗಾಲು ಕುಣಿತ, ಮಂಡ್ಯದ ಉಮಾಮಹೇಶ್ವರಿ ಪೂಜಾ ಕುಣಿತ, ಗೊರಲೆಕೊಪ್ಪದ ಆದಿಶಕ್ತಿ ಮಹಿಳಾ ವೀರಗಾಸೆ, ಸಿದ್ದಾಪೂರದ ಹಗಲು ವೇಶಗಾರರ ಕುಣಿತ, ಮಂಡಲಗಿರಿಯ ಆದಿಶಕ್ತಿ ತಂಡದಿಂದ ಕರಡಿ ಮಜಲು, ಲಂಬಾಣಿ ನೃತ್ಯ, ತಲಕಾಡಿನ ಹೇಮಾಂಬಿಕಾ ಯಕ್ಷಗಾನ ತಂಡದಿಂದ ಯಕ್ಷಗಾನ, ಜಕ್ಕೂರಿನ ಕಬ್ಬಾಳಮ್ಮ ತಂಡದಿಂದ ತಮಟೆ ವಾದನ, ನಂದಿಧ್ವಜ, ಚಿಕ್ಕಜಂತಕಲ್‌ನ ಕೆಜಿಎಲ್ ತಾಷಾ ಮೇಳ, ಚಿತ್ರದುರ್ಗದ ಬೇಡರ ಪಡೆ, ಹನುಮಸಾಗರ ಕಲಾವಿದರಿಂದ ಶಹನಾಯಿ ವಾದನ, ಹೊಳಲು ಕುಮಾರೇಶ್ವರ ತಂಡದ ನಂದಿಕೋಲು ಕುಣಿತ, ಕಂಸಾಳೆ, ಉಡುಪಿ ಕಂಗಿಲು ನೃತ್ಯವು ರಾಜಬೀದಿಯುದ್ದಕ್ಕೂ ಕಿಕ್ಕಿರಿದು ನಿಂತಿದ್ದ ಸಾವಿರಾರು ಜನರ ಗಮನ ಸೆಳೆಯಿತು.ಕಳೆ ಹೆಚ್ಚಿಸಿದ ಸ್ತಬ್ಧಚಿತ್ರ:೨೦೨೩ರ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಟ್ಟಣದ ವೆಂಕಟಪತಿ ಬಾವಿಯ ಕಲಾಕೃತಿ ಪ್ರಥಮ ಸ್ಥಾನ ಪಡೆದಿದ್ದು, ಇದೇ ಮಾದರಿಯಲ್ಲಿ ಎಕ್ಸೆಲ್ ಪಬ್ಲಿಕ್ ಶಾಲೆಯಿಂದ ಥರ್ಮಕೋಲ್‌ನಿಂದ ತಯಾರಿಸಿದ ಈ ವೆಂಕಟಾಪತಿಬಾವಿ ಟ್ಯಾಬ್ಲೋ ಹಾಗೂ ಮೌಲಾನಾ ಆಜಾದ್ ಶಾಲೆಯಿಂದ ಕನಕರಾಯನ ಜಾತ್ರೋತ್ಸವದಲ್ಲಿ ನಡೆಯುವ ಮಹಾರಥೋತ್ಸವ ಹಾಗೂ ಗರುಡೋತ್ಸವ ಮಾದರಿಯ ಸ್ತಬ್ಧಚಿತ್ರಗಳು ಉತ್ಸವದ ಮೆರವಣಿಗೆಗೆ ಹೊಸ ಮೆರುಗು ತಂದಿತು.ರಣ ಬಿಸಿಲಿನಲ್ಲೂ ....:ಬರೋಬ್ಬರಿ ಎರಡು ತಾಸಿಗೂ ಹೆಚ್ಚು ಕಾಲ ನಡೆದ ಮೆರವಣಿಗೆಯಲ್ಲಿ ರಣ ಬಿಸಿಲು ಲೆಕ್ಕಿಸದೇ ಮಹಿಳೆಯರು, ಚಿಕ್ಕಮಕ್ಕಳು ಮೆರವಣಿಗೆ ವೀಕ್ಷಿಸಿ ಸಂತಸಪಟ್ಟರು. ಇನ್ನು ಯುವಕರು ತಮಟೆ, ತಾಷಾ, ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಲ್ಲದೇ ಮೆಲುಗಡೆ ಅಗಸಿಯಿಂದ ಕನಕಾಚಲಪತಿ ದೇವಸ್ಥಾನದವರೆಗೂ ಜನ ರಾಜಬೀದಿ ಅಕ್ಕಪಕ್ಕದಲ್ಲಿ ನಿಂತು ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಂಡರು.ಡೊಳ್ಳು ಬಾರಿಸಿದ ತಂಗಡಗಿ:ಸಚಿವ ಶಿವರಾಜ ತಂಗಡಗಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಡೊಳ್ಳು ಹಾಗೂ ಸಾಂಬಳೆ ವಾದ್ಯಗಳ ನುಡಿಸಿ ಸಂಭ್ರಮಿಸಿದರು. ಸಚಿವರು ಕಲಾವಿದರ ತಾಳಕ್ಕೆ ತಕ್ಕಂತೆ ವಾದ್ಯಗಳನ್ನು ಬಾರಿಸಿ ಜನರ ಮೆಚ್ಚುಗೆಗೆ ಪಾತ್ರವಾದರು. ಹೀಗೆ ಮೆರವಣಿಗೆಯಲ್ಲಿ ಸಾಗಿದ ಸಚಿವರ ಜತೆ ಅಭಿಮಾನಿಗಳು ಹಾಗೂ ಶಾಲಾ ಮಕ್ಕಳು ಸೆಲ್ಪಿ ತೆಗೆದುಕೊಂಡರು.
ಅಂಬಾರಿ ಹೊತ್ತ ಲಕ್ಷ್ಮೀ :ಇದೇ ಮೊದಲ ಬಾರಿಗೆ ಮೆರವಣಿಗೆಯಲ್ಲಿ ಲಕ್ಷ್ಮೀ ಎನ್ನುವ ಹೆಣ್ಣು ಆನೆ 200 ಕೆಜಿ ತೂಕವುಳ್ಳ ಅಂಬಾರಿಯನ್ನು ಹೊತ್ತು ಸಾಗಿತು. ಅಂಬಾರಿಯಲ್ಲಿ ಕನಕಾಚಲಪತಿಯ 4.5ಕೆಜಿ ಬೆಳ್ಳಿ ಮೂರ್ತಿ ಇರಿಸಲಾಗಿತ್ತು. ಅಂಬಾರಿ ಹೊತ್ತ ಲಕ್ಷ್ಮೀ ಸುತ್ತಲೂ ಅರಣ್ಯ ಇಲಾಖೆಯ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದರು. ಅಂಬಾರಿ ಹೊತ್ತಿದ್ದ ಲಕ್ಷ್ಮೀ ಜತೆ ಜನ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.