ಮುಳಬಾಗಿಲಿನಲ್ಲಿ ವಿಶ್ವ ರೈತ ದಿನಾಚರಣೆ

| Published : Dec 23 2023, 01:45 AM IST / Updated: Dec 23 2023, 01:46 AM IST

ಸಾರಾಂಶ

ಗಡಿಭಾಗದ ಹೆಬ್ಬಣಿಯಲ್ಲಿ ವಿಶ್ವ ರೈತ ದಿನಾಚರಣೆ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಜನ್ಮ ದಿನಾಚರಣೆ. ರೈತಸಂಘದಿಂದ ಪ್ರಗತಿಪರ ರೈತರ ಪಾದಪೂಜೆ, ಗೋಪೂಜೆ , ಶಾಸಕ ಸಮೃದ್ಧಿ ಮಂಜುನಾಥ್ ಭಾಗಿ

ರೈತಸಂಘದಿಂದ ಪ್ರಗತಿಪರ ರೈತರ ಪಾದಪೂಜೆ, ಗೋಪೂಜೆ । ಶಾಸಕ ಸಮೃದ್ಧಿ ಮಂಜುನಾಥ್ ಭಾಗಿ

ಕನ್ನಡಪ್ರಭ ವಾರ್ತೆ ಮುಳಬಾಗಿಲು

ಗಡಿಭಾಗದ ಹೆಬ್ಬಣಿಯಲ್ಲಿ ವಿಶ್ವ ರೈತ ದಿನಾಚರಣೆ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಜನ್ಮ ದಿನಾಚರಣೆಯನ್ನು ರೈತಸಂಘದಿಂದ ಪ್ರಗತಿಪರ ರೈತರ ಪಾದಪೂಜೆ, ಗೋಪೂಜೆ ಹಾಗೂ ಬಡವರಿಗೆ ಭತ್ತ ರಾಗಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿ, ಸಮಸ್ತ ರೈತಬಾಂಧವರಿಗೆ ಶುಭಾಶಯ ಸಲ್ಲಿಸಲಾಯಿತು.

ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ಬರ ನಿರ್ವಹಣೆ ಮಾಡುವಲ್ಲಿ ವಿಫಲವಾಗುವ ಜೊತೆಗೆ ಪ್ರತಿ ಹೆಕ್ಟೇರ್‌ಗೆ ೨ ಸಾವಿರ ರುಪಾಯಿ ಬರ ಪರಿಹಾರ ನೀಡಲು ತೀರ್ಮಾನಿಸಿರುವುದು ರೈತರಿಗೆ ಮಾಡಿದ ಅವಮಾನ, ಇದು ಸರ್ಕಾರದ ರೈತ ವಿರೋಧಿ ಧೋರಣೆ ಎಂಬುದಾಗಿ ಖಂಡಿಸಿದರು.

ತಾಲೂಕಿನಾದ್ಯಂತ ಕಂದಾಯ ಸರ್ವೇ ನೋಂದಣಿ, ಸಮಾಜ ಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ ಯಾವುದೇ ಇಲಾಖೆಯಲ್ಲಿ ರೈತರ ಕೆಲಸಗಳಿಗೆ ಲಂಚ ಕೇಳಿದರೆ ಕರೆ ಮಾಡಿ ನನಗೆ ದೂರು ನೀಡಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಶಾಸಕರು ಭರವಸೆ ನೀಡಿದರು.

ಉಚಿತ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದಿರುವ ಸರ್ಕಾರವು ರೈತರ, ಕೂಲಿಕಾರ್ಮಿಕರ ಹಿತ ಕಾಯುತ್ತಿಲ್ಲ, ಮುಂದಿನ ಲೋಕಸಭೆ ಚುನಾವಣೆ ದೃಷ್ಠಿಯಿಂದ ರೈತರ ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡದೆ ಬಡ್ಡಿ ಮನ್ನಾ ಮಾಡಿ ಮತಗಳಿಸಲು ಮುಂದಾಗಿದ್ದಾರೆಂದು ಆರೋಪ ಮಾಡಿದರು.

ಸಿದ್ಧನಹಳ್ಳಿ ಶೇಖರ್ ಮಾತನಾಡಿ, ರಾಜ್ಯದಲ್ಲಿ ಬರ ಇದ್ದರೂ ಕೇಂದ್ರ ಸರ್ಕಾರ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಲು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರ ರಕ್ಷಣೆಗೆ ಸರ್ಕಾರಗಳು ಮುಂದಾಗುತ್ತಿಲ್ಲ. ೩ ತಿಂಗಳು ಬಿಸಿಲು, ಗಾಳಿ ಎನ್ನದೆ ದುಡಿಯುವ ರೈತನ ಬೆವರ ಹನಿಗೆ ತಕ್ಕ ಪ್ರತಿಫಲ ಸಿಗಬೇಕಾದರೆ ಮಾರುಕಟ್ಟೆ ವ್ಯವಸ್ಥೆ ಸರಿಯಾಗಬೇಕು. ಸೂಕ್ತವಾದ ಜಾಗದಿಂದ ಮಾರುಕಟ್ಟೆ ಅಭಿವೃದ್ಧಿಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿ,

ಹೊರ ರಾಜ್ಯಗಳಲ್ಲಿ ಜಾರಿ ಇರುವ ಬೀಜ ಕಾಯಿದೆಯಂತೆ ಕರ್ನಾಟಕದಲ್ಲೂ ಕಾಯಿದೆ ಜಾರಿ ಮಾಡಬೇಕು. ನಕಲಿ ಬಿತ್ತನೆ ಬೀಜ ರಸಗೊಬ್ಬರ, ಕೀಟನಾಶಕ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿ ರೈತರ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.

ಸಮಾಜ ಸೇವಕ, ಮಂಡಿಕಲ್ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್, ತಹಸೀಲ್ದಾರ್ ರೇಖಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಈ ಕಂಬಳ್ಳಿ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‌ ಪಾಷ, ಬಂಗವಾದಿ ನಾಗರಾಜ್‌ ಗೌಡ, ಪ್ರಗತಿ ಚಾರಿಟೇಬಲ್ ಟ್ರಸ್ಟ್ ವಿನೂತ್, ನಂಗಲಿ ನಾಗೇಶ್, ಪದ್ಮಘಟ್ಟ ಧರ್ಮ, ಅಂಬ್ಲಿಕಲ್ ಮಂಜುನಾಥ್, ವಿನಿತ್ ಗೌಡ ನಂಗಲಿ ಕಿಶೋರ್, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ವಿಜಯ್‌ಪಾಲ್, ವಿಶ್ವ, ಜುಬೇರ್ ಪಾಷ, ಶ್ರೀನಿವಾಸ್, ಸುಪ್ರೀಂ ಚಲ, ವಿನು, ಶಿವು ಇದ್ದರು.

---ಮುಳಬಾಗಿಲು ತಾಲೂಕಿನ ಹೆಬ್ಬಣಿಯಲ್ಲಿ ರೈತ ಸಂಘದಿಂದ ವಿಶ್ವ ರೈತ ದಿನಾಚರಣೆ ಆಚರಿಸಿದರು.