ಕೃಷಿ ತಾಂತ್ರಿಕತೆ ಲಾಭ ಪಡೆದು ಮುಂದೆ ಬನ್ನಿ

| Published : Oct 19 2024, 12:18 AM IST / Updated: Oct 19 2024, 12:19 AM IST

ಸಾರಾಂಶ

ತಾಂತ್ರಿಕತೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ನಿರಂತರವಾಗಿ ಸಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿ ತಾಂತ್ರಿಕತೆಗಳ ಲಾಭ ಪಡೆದು ರೈತರು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಎಸ್. ಶಿವರಾಮು ಕರೆ ನೀಡಿದರು.ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ಶಿಕ್ಷಣ ಘಟಕವು ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರದ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ ಹಾಗೂ ಸಾವಯವ ಕೃಷಿಯಲ್ಲಿ ಬೆಳೆದ ಬೆಳೆಗಳ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಕೃಷಿ ವಿವಿಯು ತನ್ನ ವಲಯ ಹಾಗೂ ಪ್ರಾದೇಶಿಕ ಕೇಂದ್ರಗಳ ಮೂಲಕ ದಕ್ಷಿಣ ಕರ್ನಾಟಕದ 10 ಜಿಲ್ಲೆಗಳ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸುತ್ತಿದೆ. ನಾಗನಹಳ್ಳಿ ಕೇಂದ್ರವಂತೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸತ್ತಿದೆ ಎಂದು ಶ್ಲಾಘಿಸಿದರು.

ತಾಂತ್ರಿಕತೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ನಿರಂತರವಾಗಿ ಸಾಗಬೇಕು. ದೇಶದ 145 ವಿವಿಗಳಲ್ಲಿ ಬೆಂಗಳೂರು ಕೃಷಿ ವಿವಿಯು 11ನೇ ಸ್ಥಾನದಲ್ಲಿದೆ. ಇದು 10 ರೊಳಗೆ ಇರಬೇಕು ಎಂಬುದು ಕುಲಪತಿ ಡಾ.ಎಸ್‌.ವಿ. ಸುರೇಶ ಅವರ ಆಶಯವಾಗಿದೆ. ಆ ನಿಟ್ಟಿನಲ್ಲಿ ವಿವಿಯು ಕೆಲಸ ಮಾಡುತ್ತಿದೆ ಎಂದರು.

ನ.14 ರಿಂದ 17 ರವರೆಗೆ ಬೆಂಗಳೂರು ಕೃಷಿ ವಿವಿಯಲ್ಲಿ ಕೃಷಿ ಮೇಳ ನಡೆಯುತ್ತದೆ. ಅದೇ ರೀತಿ ನ.26-27 ರಂದು ಮಂಡ್ಯ

ವಿ.ಸಿ. ಫಾರಂನಲ್ಲಿ ಕೃಷಿ ಮೇಳ ನಡೆಯಲಿದ್ದು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ರೈತರು ಹೆಚ್ಚಾಗಿ ಭಾಗವಹಿಸಿ, ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು.

ರೈತರ ಮಕ್ಕಳು ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಹಾಗೂ ಮೀನುಗಾರಿಕೆ ಪದವಿ ಓದಬೇಕು. ಈ ಎಲ್ಲವೂ ಸರ್ಕಾರಿ ವಲಯದಲ್ಲಿಯೇ ಇರುವುದರಿಂದ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಸಾಸ ಮುಗಿಯುತ್ತದೆ. ನಂತರ ಉದ್ಯೋಗ ಅವಕಾಶಗಳು ಕೂಡ ಸಿಗುತ್ತವೆ.

ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಸಿ. ರಾಮಚಂದ್ರ ಮಾತನಾಡಿ, ''''''''ಆರೋಗ್ಯಕರ ಮಣ್ಣು, ಆರೋಗ್ಯಕರ ಆಹಾರ ಹಾಗೂ ಆರೋಗ್ಯಕರ ಜನ'''''''' ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಿದೆ. ಆ ಕೇಂದ್ರದಲ್ಲಿ 2005 ರಿಂದ ಸಾವಯವ ಕೃಷಿಯ ಮೂಲಕವೇ ಎಲ್ಲಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ ಮಾಡಲಾಗುತ್ತದೆ. ಇದನ್ನು ಕ್ಷೇತ್ರೋತ್ಸವದ ಮೂಲಕ ರೈತರಿಗೆ ತಿಳಿಸಲಾಗುತ್ತಿದೆ ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ರಾಜು ಮಾತನಾಡಿ, ದೇಶದಲ್ಲಿ ಹಸಿರುಕ್ರಾಂತಿಯ ನಂತರ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಆಹಾರ ಭದ್ರತೆ ಇದೆ. ಆದರೆ ಪೌಷ್ಟಿಕ ಆಹಾರ ಉತ್ಪಾದನೆ ಮತ್ತು ಸೇವನೆ ಕಡೆ ಗಮನ ನೀಡಬೇಕು ಎಂದು ಸಲಹೆ ಮಾಡಿದರು.

ಹಿರಿಯ ಪತ್ರತರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಏಕಬೆಳೆ ಬದಲು ಬಹುಬೆಳೆ ಪದ್ಧತಿ ಅನುಸರಿಸಬೇಕು. ಹೈನುಗಾರಿಕೆಯನ್ನು ಕೈಗೊಳ್ಳಬೇಕು. ಆಗ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಡ್ಯ ವಿ.ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್‌. ಶಿವಕುಮಾರ್‌ ಮಾತನಾಡಿ, ಪೋಷಕಾಂಶ ಇರುವ ಸೇವಿಸಬೇಕು.ಊಟದಲ್ಲಿ ತರಕಾರಿ, ಸೊಪ್ಪು, ಕಾಳುಗಳು ಇರಬೇಕು. ಹಾಲು,ಮೊಟ್ಟೆ, ಮಾಂಸ ಕೂಡ ಬಳಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಮತಾ, ಒಡಿಪಿ ಸಂಸ್ಥೆಯ ಜಾನ್‌ ಮುಖ್ಯಅತಿಥಿಗಳಾಗಿದ್ದರು.ಡಾ. ಶೇಖರ್‌, ಡಾ. ಸುರೇಶ್‌, ಚನ್ನಬಸಪ್ಪ, ದಿನೇಶ್‌ ಇದ್ದರು. ಸವಿತಾ ಪ್ರಾರ್ಥಿಸಿದರು.ಸಸ್ಯ ರೋಗಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಎನ್‌. ಉಮಾಶಂಕರ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನಂತರ ನಡೆದ ರೈತರಿಂದ ರೈತರಿಗಾಗಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ನಂಜನಗೂಡು ತಾ. ಮುದ್ದಹಳ್ಳಿಯ ಚಿಕ್ಕಸ್ವಾಮಿ, ಹುಣಸೂರು ತಾ. ಧರ್ಮಾಪುರದ ಬಿ. ಅಖಿಲ್‌ ತನ್ಮ ಅನಿಸಿಕೆ ಹಂಚಿಕೊಂಡರು.

ರೈತ- ವಿಜ್ಞಾನಿಗಳ ಚರ್ಚೆಯಲ್ಲಿ ಹವಾಮಾನ ವೈಪರೀತ್ಯತೆಯಲ್ಲಿ ರೈತರು ಅನುಸರಿಸಬೇಕಾದ ಬೇಸಾಯ ಕ್ರಮಗಳು ಕುರಿತು ತಾಂತ್ಪಿಕ ಅಧಿಕಾರಿ ಡಾ.ಜಿ.ವಿ. ಸುಮಂತ್‌ ಕುಮಾರ್‌, ತೋಟಗಾರಿಕೆ ಬೆಳೆಯಲ್ಲಿ ಸಾವಯವ ಕೃಷಿ ಕುರಿತು ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್‌ ದಾಸ್‌, ಸಾವಯವ ಕೃಷಿಯಲ್ಲಿ ಸಸ್ಯ ಸಂರಕ್ಷಣೆ ಕುರಿತು ಸಸ್ಯ ರೋಗಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಎನ್‌. ಉಮಾಶಂಕರ್‌ ಕುಮಾರ್‌, ಸಾವಯವ ಕೃಷಿಯಲ್ಲಿ ಕೀಟ ನಿರ್ವಹಣೆ ಕುರಿತು ಸಸ್ಯ ಸಂರಕ್ಷಣೆ ಸಹಾಯಕ ಪ್ರಾಧ್ಯಾಪಕಿ ಡಾ.ಆರ್‌.ಎನ್‌. ಪುಷ್ಪಾ ಮಾತನಾಡಿದರು.ಸುತ್ತೂರು ಜೆಎಎಸ್ಎಸ್‌ ಕೆವಿಕೆ ಮುಖ್ಯಸ್ಥ ಡಾ.ಜ್ಞಾನೇಶ್‌ ಮಾತನಾಡಿ, ಮುಂದಿನ ಹತ್ತು ವರ್ಷಗಳಲ್ಲಿ ಕೃಷಿ ಕ್ಷೇತ್ರಕ್ಕೆ ಮತ್ತೆ ಹಿಂದಿನ ಪ್ರಾಮುಖ್ಯತೆ ಸಿಗಲಿದೆ. ಆದ್ದರಿಂದ ಯಾವುದೇ ರೈತರು ಕೂಡ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು. ಬಹು ಬೆಳೆ ಬೆಳೆಯಬೇಕು. ಭೂಮಿಯ ಫಲವತ್ತತೆ ಕಾಪಾಡಬೇಕು. ಕಳೆ ಮತ್ತು ಕೀಟ ನಾಶಕ ಕಡಿಮೆ ಮಾಡಬೇಕು ಎಂದು ಅವರು ಹೇಳಿದರು.ಸುತ್ತೂರು ಕೆವಿಕೆ ವಿಜ್ಞಾನಿ ಡಾ.ದೀಪಕ್‌ ಮಾತನಾಡಿ, ಗಾಳಿ, ನೀರಿನಂತೆ ಜನರಿಗೆ ಸಮತೋಲಿತ ಆಹಾರ ಸೇವನೆ ಕೂಡ ಮುಖ್ಯ.ಕೇವಲ ಅನ್ನ ತಿಂದರೆ ಪ್ರಯೋಜನವಾಗದು. ಆಹಾರದಲ್ಲಿ ವೈವಿಧ್ಯತೆ ಇರಬೇಕು. ಹಣ್ಣು, ತರಕಾರಿ, ಸೊಪ್ಪು, ಮಾಂಸಹಾರಿಗಳಾದರೆ ಮೊಟ್ಟೆ, ಮಾಂಸವನ್ನು ಕೂಡ ಸೇವಿಸಬೇಕು ಎಂದರು.

ಔಷಧಿಯೇ ಆಹಾರವಾಗಬಾರದು. ಆಹಾರವೇ ಔಷಧಿಯಾಗಬೇಕು. ಉಪ್ಪು, ಸಕ್ಕರೆ, ಕೊಬ್ಬಿನಂಶ ಇರುವ ಆಹಾರ ಸೇವನೆ ಕಡಿಮೆ ಮಾಡಬೇಕು. ಹಸಿ ತರಕಾರಿ ತಿನ್ನಬೇಕು. ಮನೆಯ ಅಂಗಳದಲ್ಲಿಯೇ ಪೌಷ್ಟಿಕ ಕೈತೋಟ ಬೆಳೆಸಬೇಕು ಎಂದರು.