ಸಾರಾಂಶ
ವನ್ಯ ಜೀವಿಗಳಿಗಿರುವ ಆಪಾಯ ಮತ್ತು ಸಂರಕ್ಷಣೆ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ , ತರೀಕೆರೆಪಶ್ಚಿಮಘಟ್ಟದ ಸಾಲಿನಲ್ಲಿರುವ ಭದ್ರಾ ವನ್ಯಜೀವಿ ವಿಭಾಗ ವಿಶ್ವ ಪಾರಂಪರಿಕ ತಾಣವಾಗಿ ೧೦೦ಕ್ಕೂ ಹೆಚ್ಚು ಸಸ್ಯ ಪ್ರಭೇದ ಮಾತ್ರವಲ್ಲ, ಹುಲಿ, ಆನೆ, ಸೂಕ್ಷ್ಮಾಣುಗಳನ್ನು ಹೊಂದಿದೆ ಎಂದು ಲಕ್ಕವಳ್ಳಿ ಭದ್ರಾ ವನ್ಯಜೀವಿ ಅರಣ್ಯ ವಿಭಾಗದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಸಂತೋಷ್ ಸಾಗರ್ ಹೇಳಿದರು. ಶುಕ್ರವಾರ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನ ದಲ್ಲಿ ಆಯೋಜಿಸಿದ್ದ ವನ್ಯ ಜೀವಿಗಳಿಗಿರುವ ಅಪಾಯ ಮತ್ತು ಸಂರಕ್ಷಣೆ ಕುರಿತ ಉಪನ್ಯಾಸ - ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.1974ನೇ ಸಾಲಿನಲ್ಲಿ ಆರಂಭವಾದ ಭದ್ರಾ ವನ್ಯಜೀವಿ ವಿಭಾಗ 50 ವರ್ಷ ಪೂರ್ಣಗೊಳಿಸಿದರೆ, 1998ರಲ್ಲಿ ಅಸ್ತಿತ್ವಕ್ಕೆ ಬಂದ ಹುಲಿ ಸಂರಕ್ಷಿತ ಯೋಜನೆ 25 ವಸಂತ ಪೂರೈಸಿರುವುದು ನಾಡಿಗೆ ಹಮ್ಮೆ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ವಿವಿಧ ಸಮಸ್ಯೆಗಳಿಂದ ಜೀವ ಸಂಕುಲಗಳು ಅಳಿವಿನಂಚಿಗೆ ತಲುಪುತ್ತಿದ್ದು, ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮೂಲಕ ವೈವಿಧ್ಯಮಯ ಜೀವ ಸಂಕುಲಗಳ ಉಳಿವಿಗೆ ಶ್ರಮಿಸಬೇಕು. ವನ್ಯಜೀವಿಗಳ ಜೀವಕ್ಕೆ ಕಂಟಕವಾದ ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗುಗಳನ್ನು ಬಳಸಬೇಕು ಎಂದು ಮನವಿ ಮಾಡಿದರು. ಎಸಿಎಫ್ ಉಮ್ಮರ್ ಬಾದ್‌ಷಾ ಮಾತನಾಡಿ ಕಾಡು ಸಮೃದ್ಧವಾದರೆ ಮಾತ್ರ ನಾಡು ಸುಭೀಕ್ಷವಾಗಿರಲು ಸಾಧ್ಯ ಎಂಬ ವಿಚಾರವನ್ನು ಮಕ್ಕಳ ಮನದಲ್ಲಿ ಬಿತ್ತಬೇಕಿದೆ. ಅಭಿವೃದ್ಧಿ ನೆಪದಲ್ಲಿ ಕೈಗೊಳ್ಳುತ್ತಿರುವ ಕಾರ್ಯಗಳಿಂದ ಅರಣ್ಯ ಕ್ಷೀಣಿಸಿ ಪ್ರಾಣಿ ಸಂತತಿ ನಶಿಸುತ್ತಿದ್ದು, ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಮತ್ತು ಜಲಮೂಲ ಮಲೀನಗೊಳ್ಳುತ್ತಿರುವುದನ್ನು ತಪ್ಪಿಸಿ ಜೀವ ವೈವಿಧ್ಯಗಳನ್ನು ರಕ್ಷಿಸಬೇಕು ಎಂದು ಹೇಳಿದರು. ಶೃಂಗೇರಿ ಜೆಸಿಬಿಎಂ ಕಾಲೇಜು ಪರಿಸರ ವಿಜ್ಞಾನ ವಿಭಾಗದ ಉಪನ್ಯಾಸಕ ಎಂ.ಪಿ.ರಾಘವೇಂದ್ರ ಮಾತನಾಡಿ, ದೇಶದಲ್ಲಿ 29,500 ಆನೆಗಳು, 3,682 ಹುಲಿ, 13 ಸಾವಿರಕ್ಕೂ ಹೆಚ್ಚು ಚಿರತೆಗಳಿದ್ದು, ಕಾಡಿನ ಅವಸಾನದ ಜಾಗ ವಿಂಗಡಣೆ, ಅಗ್ನಿ ಅವಘಡ, ಕಳ್ಳಬೇಟೆ ಪ್ರಕರಣ ಹೆಚ್ಚಳ ಕಾರಣ. ಆನೆ, ಹುಲಿ, ಚಿರತೆ ಸೇರಿ ಬಹುತೇಕ ಜೀವ ವೈವಿಧ್ಯಗಳು ಅಪಾಯ ಎದುರಿಸುತ್ತಿವೆ ಎಂದು ತಿಳಿಸಿದರು.ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಸದಸ್ಯೆ ರಚನ ಶ್ರೀನಿವಾಸ್ ಮಾತನಾಡಿ, ವನ್ಯಜೀವಿಗಳಿದ್ದರೆ ಕಾಡು ಬೆಳೆದು ಸಮೃದ್ಧವಾದ ಮಳೆ ಸುರಿಯಲಿದೆ. ಅರಣ್ಯ ಇಲಾಖೆ ಜೊತೆ ಸಾರ್ವಜನಿಕರೂ ಕೂಡ ಪರಿಸರ ಸಂರಕ್ಷಣೆ ಹೊಣೆ ಹೊರಬೇಕು. ಸಂವಾದ ಕಾರ್ಯಕ್ರಮದಲ್ಲಿ ಸರಿ ಯಾದ ಉತ್ತರ ಕೊಡುವ ಮಕ್ಕಳನ್ನು ಲಕ್ಕವಳ್ಳಿ ಭದ್ರಾ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಸುಫಾರಿ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್, ಪುರಸಭೆ ಸದಸ್ಯ ಟಿ.ಜಿ. ಲೋಕೇಶ್, ಆರ್‌ಎಫ್‌ಒಗಳಾದ ಸುಧಾಕರ್, ಆಸೀಫ್ ಅಹಮದ್, ರಾಘವೇಂದ್ರ, ಸಂತೋಷ್, ರುಕಿಯಾ ಪರ್ವೀನ್ ಮತ್ತಿತರರು ಭಾಗವಹಿಸಿದ್ದರು.
25ಕೆಟಿಆರ್.ಕೆ.6ಃತರೀಕೆರೆಯಲ್ಲಿ ಆಯೋಜಿಸಿದ್ದ ವನ್ಯ ಜೀವಿಗಳಿಗಿರುವ ಅಪಾಯ ಮತ್ತು ಸಂರಕ್ಷಣೆ ಕುರಿತಾದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ವನ್ನು ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿಶ್ರೀನಿವಾಸ್, ಎಸಿಎಫ್ ಸಂತೋಷ್ ಸಾಗರ್ ಅವರು ಉದ್ಘಾಟಿಸಿದರು.